ಇಲಾಖೆಯ ಉನ್ನತಾಧಿಕಾರಿಗಳು ಅರಣ್ಯಕ್ಕೆ ಭೇಟಿ ನೀಡಿ ಅರಣ್ಯದಲ್ಲಿಯೇ ವಾಸ್ತವ್ಯ ಹೂಡಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇರುಸುಮುರುಸು ಆದಂತಾಗಿದೆ.
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಎಲ್ಲಾ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಳೆದ 15 ದಿನಗಳ ಕಾಲ ಅರಣ್ಯದಲ್ಲೇ ನೆಲೆಸುವ ಮೌಖಿಕ ನಿರ್ದೇಶನ ನೀಡಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೇರೂರಿದ್ದಾರೆ.
ನೀವು ನಿಮ್ಮ ಕಛೇರಿಯಿಂದ ಹೊರಗೆ ಬರುತ್ತಿಲ್ಲ. ಕಾಡಿಗೆ ಹೋಗಿ, ತಿಂಗಳಿಗೆ 15 ದಿನ ಅಲ್ಲೇ ಇರಿ. ಇದು ಇಲಾಖೆಯ ಇತರ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುತ್ತದೆ. ಅರಣ್ಯ ರಕ್ಷಣೆಯಲ್ಲಿ ಹಿರಿಯ ಅಧಿಕಾರಿಗಳು ನಿರತರಾಗಿದ್ದಾರೆ ಎಂಬ ಸಂದೇಶ ರವಾನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, ಎಲ್ಲಾ ಅರಣ್ಯ ಸಿಬ್ಬಂದಿಗಳು ಕ್ಷೇತ್ರದಲ್ಲಿದ್ದು ಅರಣ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಕಳೆದ ಆರು ತಿಂಗಳಿನಿಂದ, ಎಲ್ಲಾ ಸಿಬ್ಬಂದಿ ವಾರಾಂತ್ಯದಲ್ಲಿ ಅರಣ್ಯಕ್ಕೆ ಭೇಟಿ ನೀಡುವುದನ್ನು ಮತ್ತು ಕಾಲ್ನಡಿಗೆಯಲ್ಲಿ ಗಸ್ತು ತಿರುಗುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಮೇ 2022 ರಲ್ಲಿ, ಕಾಲ್ನಡಿಗೆಯ ಅವಧಿಯಲ್ಲಿ, ದೇವನಹಳ್ಳಿ ಮೀಸಲು ಅರಣ್ಯದಲ್ಲಿ ಅತಿಕ್ರಮಣವನ್ನು ಗಮನಿಸಲಾಯಿತು. ತಕ್ಷಣವೇ ಬಫರ್ ಝೋನ್‌ನಲ್ಲಿ 100 ಮೀಟರ್‌ಗೂ ಹೆಚ್ಚು ಜಾಗವನ್ನು ತೆರವುಗೊಳಿಸಲಾಯಿತು ಮತ್ತು ಒಟ್ಟು 350 ಎಕರೆ ಭೂಮಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ರಾಜಕಾರಣಿಗಳು ಕರೆದ ಸಭೆಗಳಿಗೆ ಹಾಜರಾಗುವುದು ಮತ್ತು ನ್ಯಾಯಾಲಯದ ವಿಚಾರಣೆಗಳು ಸೇರಿದಂತೆ ಇನ್ನೂ ಅನೇಕ ಕೆಲಸಗಳನ್ನು ಕೈಗೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಿಂಗಳಲ್ಲಿ 15 ದಿನ ಅರಣ್ಯದಲ್ಲಿ ನೆಲೆಸುವುದು ಕಷ್ಟಸಾಧ್ಯವಾಗುತ್ತದೆ. ಕ್ಷೇತ್ರಕ್ಕೆ ಭೇಟಿ ನೀಡುವುದು ಸಹ ಮುಖ್ಯವಾಗಿದೆ. ಇದು ನೆಲದ ಸಿಬ್ಬಂದಿಯ ನೈತಿಕತೆಯನ್ನು ಹೆಚ್ಚಿಸುತ್ತದೆ. ಇದು ಕಳ್ಳ ಬೇಟೆಗಾರರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಬಲವಾದ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
15 ದಿನಗಳ ಕಾಲ ಕ್ಷೇತ್ರದಲ್ಲಿ ಉಳಿಯುವುದು ಪ್ರಾಯೋಗಿಕವಲ್ಲ, ಈ ಬಗ್ಗೆ ಯಾವುದೇ ಸರ್ಕಾರಿ ಆದೇಶ ಹೊರಡಿಸುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಮತ್ತೋರ್ವ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.