ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತ ಮೂರು ತ್ರೈಮಾಸಿಕಗಳಲ್ಲಿ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಮೈಕೆಲ್ ಪಾತ್ರಾ ಹೇಳಿದ್ದಾರೆ.
ಹಣದುಬ್ಬರ ಪ್ರಮಾಣವು ಸತತ ಮೂರು ತ್ರೈಮಾಸಿಕಗಳವರೆಗೆ ಗರಿಷ್ಠ ಮಿತಿಗಿಂತ ಹೆಚ್ಚಿದ್ದರೆ, ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಹಣದುಬ್ಬರವನ್ನು ನಿಯಂತ್ರಿಸಲು ಏಕೆ ಆಗಲಿಲ್ಲ ಎಂಬುದನ್ನು ಆರ್‌ಬಿಐ ಆ ವರದಿಯಲ್ಲಿ ಹೇಳಬೇಕಾಗುತ್ತದೆ. ಹಣದುಬ್ಬರವು ಸತತ ಮೂರು
ತ್ರೈಮಾಸಿಕಗಳವರೆಗೆ ಗರಿಷ್ಠ ಮಿತಿಗಿಂತ ಹೆಚ್ಚಿರುವ ಸಾಧ್ಯತೆ ಜಾಸ್ತಿ ಇದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 7.79ಕ್ಕೆ ತಲುಪಿತ್ತು. ಮೇ ತಿಂಗಳಿನಲ್ಲಿ ಅದು ತುಸು ಕಡಿಮೆ ಆಯಿತು. ಸತತ ಐದು ತಿಂಗಳುಗಳಿಂದ ಹಣದುಬ್ಬರವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.
ಜಾಗತಿಕ ಮಟ್ಟದಲ್ಲಿ ಹಣದ ಹರಿವಿನ ಮೇಲೆ ಕೈಗೊಂಡಿರುವ ಬಿಗಿ ಕ್ರಮಗಳಿಗೆ ಹೋಲಿಸಿದರೆ, ಆರ್‌ಬಿಐ ಇನ್ನು ಮುಂದೆ ಕೈಗೊಳ್ಳಲಿರುವ ಕ್ರಮಗಳು ಹೆಚ್ಚು ಸೌಮ್ಯವಾಗಿರಲಿವೆ ಎಂದು ಪಾತ್ರಾ ಅವರು ಅಭೌಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಹಣದುಬ್ಬರವು ರೂಪಾಯಿ ಮೌಲ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.