ಅಮೆರಿಕ ಕಳೆದ 4 ದಶಕಗಳಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ. 75 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡಿದೆ. 1994ರ ಬಳಿಕ ಬಡ್ಡಿದರ ಭಾರೀ ಪ್ರಮಾಣದಲ್ಲಿ ಏರಿಸಿದಂತಾಗಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡಿರುವುದು ಮತ್ತೊಂದು ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೇ.1.5ರಿಂದ ಶೇ.1.75ಕ್ಕೆ ಏರಿಕೆ ಮಾಡಿದೆ. ಹಣದುಬ್ಬರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ತಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದಾಗಿ ವರದಿ ವಿವರಿಸಿದೆ.
ಅಮೆರಿಕದ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ 2023ರ ಮಧ್ಯಂತರದಲ್ಲಿ ಅಲ್ಪ ಪ್ರಮಾಣದ ಆರ್ಥಿಕ ಹಿಂಜರಿಕೆ ಆರಂಭವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದಿ ತಿಳಿಸಿದೆ.
ಕಳೆದ 5 ತಿಂಗಳ ಬಳಿಕ ಪ್ರಥಮ ಬಾರಿಗೆ ಅಮೆರಿಕದಲ್ಲಿ ಚಿಲ್ಲರೆ ಮಾರಾಟ ಕುಸಿತ ಕಂಡಿದೆ. ಅಧಿಕ ಬೆಲೆ ಏರಿಕೆಯ ಪರಿಣಾಮ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿದೆ. ಇದು ಅಮೆರಿಕದ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದೇಶದಲ್ಲಿನ ಆರ್ಥಿಕ ಸ್ಥಿತಿ ಕುಸಿಯದಂತೆ ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾಗಿದೆ ಎಂದು ವೇಲ್ಸ್ ಫಾರ್ಗೋ ತಿಳಿಸಿದೆ