ರಾಷ್ಟ್ರಪತಿ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 22 ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಎನ್‌ಡಿಎ ಮಿತ್ರಕೂಟದಿಂದ ಹೊರಗಿರುವ ಪಕ್ಷಗಳ ಸಭೆಯನ್ನು ಜೂ.15ರಂದು ದೆಹಲಿಯಲ್ಲಿ ಕರೆಯಲಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಿಜೆಪಿ ಆಡಳಿತವಿಲ್ಲದ ಎಲ್ಲಾ 8 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂ.15ರಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರೋಣವೆಂದು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ತಮ್ಮ ಪತ್ರದಲ್ಲಿ ದೀದಿ ಉಲ್ಲೇಖಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೆ ಮಮತಾ ಬ್ಯಾನರ್ಜಿ ಈ ಸಂದೇಶ ಕಳುಹಿಸಿದ್ದಾರೆಂದು ಮೂಲಗಳು ವರದಿ ಮಾಡಿವೆ.
ರಾಷ್ಟ್ರಪತಿ ಚುನಾವಣೆಯು ಘೋಷಣೆಯಾಗಿದೆ. ಇದು ಒಗ್ಗೂಡಲು ಪ್ರಶಸ್ತವಾದ ಸಮಯ. ಈ ಅವಕಾಶದ ಲಾಭ ಪಡೆದು ಎಲ್ಲಾ ಪ್ರಗತಿಪರ ವಿರೋಧ ಪಕ್ಷಗಳು ಒಟ್ಟಾಗಿ ಭಾರತದ ರಾಜಕೀಯದಲ್ಲಿ ಹೊಸ ಭವಿಷ್ಯ ಬರೆಯಲು ಸಜ್ಜಾಗಬೇಕಿದೆ.