ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಆವರಣದಲ್ಲಿ ನಮಾಝ್ ಮಾಡಿರುವ ವೈರಲ್ ವಿಡಿಯೋ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ವಿವಾದಿತ ಸ್ಥಳದಲ್ಲಿ ನಮಾಜ್ ಮಾಡಿಲ್ಲ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ವಿವಾದ ಹುಟ್ಟುಹಾಕಲು ಕಿಡಿಗೇಡಿಗಳು ಹಳೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ತಿಳಿಸಿದರು.
ಈ ವಿಡಿಯೋ ಸಂಬಂಧ ಸುದ್ದಿಗಾರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿನ ಪೂಜಾವಿಧಾನಗಳು ಹಾಗೂ ನಿರ್ವಹಣೆಯನ್ನು ಯಾರು ಮಾಡಬೇಕೆಂಬ ಬಗೆಗಿನ ವಿವಾದ ನ್ಯಾಯಾಲಯದಲ್ಲಿದೆ. ವಿಷಯಕ್ಕೆ ಸಂಬಂಧಿಸಿದಂತೆ 2008ರಲ್ಲಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಆದೇಶಿಸಿದ್ದು, 1989ರ ಫೆ.25ರಂದು ಮುಜರಾಯಿ ಆಯುಕ್ತರ ಆದೇಶ ಪಾಲನೆಗೆ ನ್ಯಾಯಾಲಯ ಆದೇಶಿಸಿದ್ದು, ಇದನ್ನು ಜಿಲ್ಲಾಡಳಿತ ಚಾಚೂ ತಪ್ಪದೇ ಪಾಲಿಸುತ್ತಿದೆ ಎಂದರು.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವಿವಾದಿತ ಸ್ಥಳವೆ ಬೇರೆ, ನಮಾಝ್ ಮಾಡಿರುವ ಸ್ಥಳವೇ ಬೇರೆಯಾಗಿದ್ದು, ವಿವಾದಿತ ಸ್ಥಳದಲ್ಲಿ ಯಾರೂ ನಮಾಝ್ ಮಾಡಿಲ್ಲ, ಯಾವ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಗುಹೆ ಹೊರಭಾಗದಲ್ಲಿ 38 ಕೊಠಡಿಗಳಿವೆ. ಶಾಖಾದ್ರಿಯ ಸಂಬಂಧಿಕರಿಗೆ 3 ವಸತಿಗೃಹಗಳನ್ನು ನೀಡಲಾಗಿದೆ. ಉಳಿದ 32 ಕೊಠಡಿಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಅದರಲ್ಲಿ ಒಂದು ಕೊಠಡಿಯನ್ನು ನಮಾಝ್ ಗೆ ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ನಮಾಝ್ ಮಾಡಿರುವ ವಿಡಿಯೋ 1-2ತಿಂಗಳಷ್ಟು ಹಳೆಯದ್ದಾಗಿದೆ. ನಮಾಝ್ ಮಾಡಿರುವ ಜಾಗ, ವಿವಾದಿತ ಪ್ರದೇಶದ ಹೊರಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟ ನೀಡಿದರು.
ಇನಾಂ ದತ್ತಾತ್ರೇಯ ಬಾಬಾಬುಡನ್‍ಸ್ವಾಮಿ ದರ್ಗಾದ ಗುಹೆಯ ಒಳಗಡೆ ಯಾರು ಪೂಜೆ ಸಲ್ಲಿಸಬೇಕು. ಹೇಗೆ ಪೂಜೆ ಸಲ್ಲಿಸಬೇಕು, ಯಾವ ಪೂಜಾ ವಿಧಾನಗಳನ್ನು ಮಾಡಬೇಕು ಹಾಗೂ ಅಲ್ಲಿನ ಆಡಳಿತವನ್ನು ಯಾರು ನೋಡಿಕೊಳ್ಳಬೇಕೆಂಬ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹಿಂದೆ ಹೊರಡಿಸಿರುವ ಆದೇಶದಲ್ಲಿ
ತಿಳಿಸಿದ್ದಾರೆ.
ಅದರಂತೆ ಜಿಲ್ಲಾಡಳಿತ ನೇಮಿಸಿರುವ ಮುಜಾವರ್ ಮಾತ್ರ ದತ್ತಜಯಂತಿ ಮತ್ತು ಉರೂಸ್ ವೇಳೆಯಲ್ಲಿ ಪದ್ಧತಿಯಂತೆ ಪಾದುಕೆಗಳಿಗೆ ಹೂವು ಹಾಕಿ ಪೂಜೆ ಸಲ್ಲಿಸಬೇಕು. ಬೇರೆಯವರು ಗರ್ಭಗುಡಿಗೆ ಹೋಗಿ ಪೂಜೆ ಸಲ್ಲಿಸುವಂತಿಲ್ಲ, ಧಾರ್ಮಿಕ ಗುರುಗಳು ಬಂದು ಪೂಜೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿದರೆ ಅವಕಾಶ ಕಲ್ಪಿಸಲಾಗುತ್ತಿದೆ.
ಇದರ ಹೊರತಾಗಿ ಬೇರೆ ಆಚರಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಕಾರಣಕ್ಕೂ ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅವಕಾಶ ಮಾಡಿಕೊಡುವುದಿಲ್ಲ. ಆದೇಶದ ಉಲ್ಲಂಘನೆಯಾಗಿದ್ದರೇ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ವಿವಾದಿತ ಸ್ಥಳದಲ್ಲಿರುವ ಗುಹೆಯೊಳಗೆ ತೆರಳಲು ಎರಡು ಸಮುದಾಯದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದರು.