ಇಂದು ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ದಿನ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ದಿನವನ್ನು ಭಯೋತ್ಪಾದನ ನಿಗ್ರಹ ದಿನವನ್ನಾಗಿ ಆಚರಿಸಲಾಗುತ್ತಿದೆ. 1991ರ ಮೇ 21ರಂದು ಎಲ್‌ಟಿಟಿಇ ಉಗ್ರರು ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರುವಿನಲ್ಲಿ ಹತ್ಯೆ ಮಾಡಿದ್ದರು.
1991ರಿಂದ ಈ ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ರಾಜೀವ್ ಗಾಂಧಿ ಹತ್ಯೆ ಬಳಿಕ ಆಗಿನ ವಿ.ಪಿ.ಸಿಂಗ್ ಸರಕಾರ ಈ ದಿನವನ್ನು ಭಯೋತ್ಪಾದನ ನಿಗ್ರಹ ದಿನವೆಂದು ಘೋಷಿಸಿತು. ವಿಚಿತ್ರವೆಂದರೆ ಆಗ ದೇಶದಲ್ಲಿ ಭಯೋತ್ಪಾದನೆಯ ಸುಳಿವೇ ಇರಲಿಲ್ಲ. ಆದರೆ ಶ್ರೀಲಂಕಾದಲ್ಲಿ ಸೇನೆಗೆ ಭಾರತ ನೀಡಿದ ಬೆಂಬಲದಿಂದಾಗಿ ಪ್ರತೀಕಾರಕ್ಕಾಗಿ ಎಲ್‌ಟಿಟಿಇ ಉಗ್ರರು ಈ ಕೃತ್ಯ ಎಸಗಿದ್ದರು.
ಆಗ ಲೋಕಸಭೆ ಚುನಾವಣ ಕಾಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು, ದೇಶಾದ್ಯಂತ ಸಂಚರಿಸಿ ಪ್ರಚಾರ ನಡೆಸುತ್ತಿದ್ದರು. 1991ರ ಮೇ 21ರ ರಾತ್ರಿ 10.20ರ ಸುಮಾರಿಗೆ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿಯವರ ಭಾಷಣವೂ ನಿಕ್ಕಿಯಾಗಿತ್ತು. ಇದನ್ನೇ ಬಳಸಿಕೊಂಡ ಎಲ್‌ಟಿಟಿಇ ಉಗ್ರರು, ಆತ್ಮಹತ್ಯಾ ದಾಳಿ ಮೂಲಕ ಹತ್ಯೆ ಮಾಡಿದ್ದರು. ಅಂದು ಒಟ್ಟು 16 ಮಂದಿ ಅಸುನೀಗಿದ್ದರು. ಈ ಕೃತ್ಯ ಭಾರತವಷ್ಟೇ ಅಲ್ಲ, ಇಡೀ ಜಗತ್ತಿಗೇ ಶಾಕ್ ನೀಡಿತ್ತು.
ಪ್ರತೀ ವರ್ಷವೂ ಎಲ್ಲ ಸರಕಾರಿ ಕಚೇರಿಗಳಲ್ಲಿ ಈ ಭಯೋತ್ಪಾದನ ನಿಗ್ರಹ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಈ ದಿನ ಎಲ್ಲರೂ ಒಂದು ಪ್ರತಿಜ್ಞೆಯನ್ನು ಸ್ವೀಕಾರ ಮಾಡುತ್ತಾರೆ. ಅದೆಂದರೆ “”ಭಾರತೀಯರಾದ ನಾವು, ನಮ್ಮ ದೇಶದ ಸಂಪ್ರದಾಯ ಮತ್ತು ನಂಬಿಕೆಯಾದ ಅಹಿಂಸೆ ಮತ್ತು ಸಹಿಷ್ಣುವನ್ನು ಆಚರಿಸಿಕೊಂಡು, ನಮ್ಮ ಸಾಮರ್ಥ್ಯದ ಆಧಾರದಲ್ಲಿ ಎಲ್ಲಾ ಪ್ರಕಾರದ ಭಯೋತ್ಪಾದನೆ ಮತ್ತು ಹಿಂಸೆಯನ್ನು ವಿರೋಧಿಸುತ್ತೇವೆ. ನಾವು ಶಾಂತಿ, ಸಾಮಾಜಿಕ ಸಹಭಾಗಿತ್ವ ಮತ್ತು ಮಾನವ ಜೀವ ಮತ್ತು ಮೌಲ್ಯಗಳಿಗೆ ಅಪಾಯ ತರಬಹುದಾದ ಎಂಥದ್ದೇ ಶಕ್ತಿಗಳನ್ನು ವಿರೋಧಿಸುತ್ತೇವೆ” ಎಂದು ಪ್ರತಿಜ್ಞೆ ಮಾಡುತ್ತೇವೆ.
ಶ್ರೀಲಂಕಾ ಸರಕಾರ ಮತ್ತು ಎಲ್‌ಟಿಟಿಯ ಪ್ರಭಾಕರನ್ ನಡುವೆ ಆಂತರಿಕ ಯುದ್ಧವೇ ನಡೆಯುತ್ತಿತ್ತು. ಇದನ್ನು ಹತ್ತಿಕ್ಕಲು ಶ್ರೀಲಂಕಾ ಭಾರತದ ನೆರವು ಕೇಳಿತ್ತು. ಆಗ ರಾಜೀವ್ ಗಾಂಧಿಯವರು ಭಾರತದ ಶಾಂತಿಪಾಲನ ಪಡೆಯನ್ನು ಶ್ರೀಲಂಕಾಕ್ಕೆೆ ಕಳುಹಿಸಿದ್ದರು.
ಇದು ಪ್ರಭಾಕರನ್ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿಯೇ ರಾಜೀವ್ ಗಾಂಧಿಯವರ ಹತ್ಯೆಗೆ ಸಂಚು ರೂಪಿಸಿದ್ದರು. ಅಷ್ಟೇ ಅಲ್ಲದೇ ಒಮ್ಮೆ ರಾಜೀವ್ ಗಾಂಧಿಯವರು ಲಂಕಾಗೆ ಭೇಟಿ ನೀಡಿದ್ದಾಗಲೇ ಸೈನಿಕನೊಬ್ಬ ಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾಗಿತ್ತು.