ಪ್ರತಿಯೊಂದಕ್ಕೂ ಒಂದು ವಿಶಿಷ್ಟ ದಿನ ಇರುವಂತೆ , ಚಹಾಕ್ಕೂ ಕೂಡ ಒಂದು ದಿನವಿದೆ.. ಪ್ರತಿ ವರ್ಷವೂ ಮೇ 21ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತಿದೆ.
ಚಹಾ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. ಚಹಾ ಉತ್ಪಾದಿಸುವ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯ ಋತುಮಾನವು ಮೇ ತಿಂಗಳಲ್ಲಿ ಪ್ರಾರಂಭವಾಗುವುದರಿಂದ ಯುಎನ್ ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಆಚರಿಸಲು ನಿರ್ಧರಿಸಿತು.
ಚಹಾವು ಔಷಧೀಯ ಮೌಲ್ಯವನ್ನು ಹೊಂದಿದೆ. ಜನರಿಗೆ ಆರೋಗ್ಯ ಪ್ರಯೋಜನಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎನ್ ಹೇಳಿದೆ.
2019 ರಲ್ಲಿ, ವಿಶ್ವಸಂಸ್ಥೆ (ಯುಎನ್) ವಿಶ್ವದ ಅತ್ಯಂತ ಹಳೆಯ ಪಾನೀಯಗಳ ಮಹತ್ವವನ್ನು ಗುರುತಿಸಿದೆ.
ಚಹಾ ದೈನಂದಿನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗ ಎಂಬಂತಾಗಿದೆ. ಚಹಾ ಇಲ್ಲದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವ ಮಟ್ಟಿಗೆ ಕೆಲವು ಜನರು ಚಹಾ ಸೇವನೆ ಮಾಡುತ್ತಾರೆ. ಚಹಾವನ್ನು ಕೆಲವರು ದಿನಕ್ಕೆ 3-4 ಬಾರಿ ಕುಡಿದರೇ ಇನ್ನು ಕೆಲವರು ದಿನಕ್ಕೆ 2 ಬಾರಿ ಕುಡಿಯುತ್ತಾರೆ. ಈ ಕಚೇರಿಗಳಲ್ಲಿ ಕೆಲಸ ಮಾಡೊ ಕೆಲವು ಜನರು ಮೈಂಡ ರಿಲ್ಯಾಕ್ಸ್ಗಾಗಿ ಚಹಾ ಕುಡಿಯುತ್ತಾರೆ.
ಚಹಾವನ್ನು ಕೆಲವರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಕುಡಿದರೇ, ಕೆಲವರು ಮಧ್ಯಾಹ್ನ ಊಟವಾದ ಮೇಲೂ ಚಹಾ ಕುಡಿಯುತ್ತಾರೆ.
ಗಂಡು ಮಕ್ಕಳಿಗೆ ಎಣ್ಣೆ ಪ್ರಿಯವಾದರೆ, ಹೆಣ್ಣು ಮಕ್ಕಳಿಗೆ ಟೀ ಮೇಲೆ ಒಲವು ಜಾಸ್ತಿ ಎಂದರೆ ತಪ್ಪಾಗಲಾರದು.
ವರಕವಿ ದ.ರಾ ಬೇಂದ್ರೆಯವರೂ ಕೂಡ ತಮ್ಮ ನಿ ಹಿಂಗ ನೋಡ ಬ್ಯಾಡ ನನ್ನ ಹಾಡಿನೊಳಗೆ ಒಂದು ಸಾಲು ಬರೆದಿದ್ದಾರೆ. “ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ ಎಂದು. ಹೀಗೆ ಪ್ರಯತಮೆ ತನ್ನ ಪ್ರಿಯಕರನನ್ನು ತನ್ನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾಳೆ.
ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಕೆಟ್ಟದ್ದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಯ ಪ್ರಕಾರ ದಿನಕ್ಕೆ ನಾಲ್ಕು ಕಪ್ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದೆ.
ಅದೆನೇ ಇರಲಿ, ಇತ್ತೀಚಿನ ದಿನಗಳಲ್ಲಿ ಚಹಾ ಕುಡಿಯುವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಚಹಾದ ಬೇಡಿಕೆಯು ಹೆಚ್ಚಾಗಿದೆ. ಈ ಮಳೆಗಾಲ ಮತ್ತು ಚಳಿಗಾಲ ಬಂದರೆ ಸಾಕು ಬೆಳಗಿನ ನಸುಕಿನ ಜಾವ ಚುಮು ಚುಮು ಚಳಿಯಲ್ಲಿ ಚಹಾ ಕುಡಿಯುವುದೇ ಒಂದು ಮಜಾ.
ಹಾಗೇ ಸಂಜೆ ಹೊತ್ತು ಜಿಟಿ ಜಿಟಿ ಮಳೆಯಲ್ಲಿ ಬಿಸಿ ಬಿಸಿ ಚಹಾ ಅದರೊಂದಿಗೆ ಮಿರ್ಚಿ ಅಥವಾ ಯಾವುದಾರೂ ಕರೆದಿರುವ ಖ್ಯಾದ್ಯ ತಿಂದರೆ ಅದು ನೀಡುವ ತ್ರಿಲ್ ಬೇರೆಯಾಗಿರುತ್ತದೆ.
ಕೆಲವರಂತೂ ಚಹಾ ಸೇವನೆಗೆ ಅಡಿಕ್ಟ್ ಆಗಿದ್ದಾರೆ. ಅತಿಯಾದರೆ ಅಮೃತವೂ ವಿಷ.. ಹಾಗಾಗಿ ಹಿತಮಿತವಾಗಿ ಚಹಾ ಸೇವಿಸುವುದು ಉತ್ತಮ