ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ 22,900 ಕೋಟಿ ರೂ.ಗಳ ಹೂಡಿಕೆಯ ದೇಶದ ಮೊತ್ತ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮತ್ತು ಐಎಸ್‍ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ ನಡುವೆ ಒಪ್ಪಂದಕ್ಕೆ ನಿನ್ನೆ ಭಾನುವಾರದಂದು ಸಹಿ ಹಾಕಲಾಯಿತು.
7 ವರ್ಷಗಳ ಅವಧಿಯಲ್ಲಿ ಒಟ್ಟು 1500 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಮತ್ತು ಐ.ಎಸ್.ಎಂ.ಇ ಪರವಾಗಿ ನಿರ್ದೇಶಕ ಅಜಯ್ ಜಲನ್ ಸಹಿ ಹಾಕಿದರು.
ಸೆಮಿಕಂಡಕ್ಟರ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಐ.ಎಸ್.ಎಂ.ಸಿ ಅನಲಾಗ್ ಫ್ಯಾಬ್ ಪ್ರೈ.ಲಿ. ಸಂಸ್ಥೆ ಪರಸ್ಪರ ಮಾಡಿಕೊಂಡಿರುವ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿವಿಧ ರಾಜ್ಯಗಳು ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿದ್ಧ ವೇಳೆಯಲ್ಲಿಯೇ ಈ ಮಹತ್ವದ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ.
ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವುದೂ ಮುಖ್ಯ ಎನ್ನುವುದನ್ನು ಕರ್ನಾಟಕ ಸರ್ಕಾರ ಅರಿತಿದೆ.
ದೇಶದಲ್ಲಿಯೇ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಇದೊಂದು ಬಹುದೊಡ್ಡ ಹೆಜ್ಜೆ. ಸವಾಲುಗಳು ಸಹ ದೊಡ್ಡಮಟ್ಟದಲ್ಲಿ ಇವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲೂ ಈ ಒಪ್ಪಂದ ಅವಕಾಶವನ್ನು ಕಲ್ಪಿಸಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.