Wednesday, October 2, 2024
Wednesday, October 2, 2024

ಡಾ.ರಾಜ್ ಅವರ ಸಿನಿಪಯಣ ಅಧ್ಯಯನ ಯೋಗ್ಯ- ಬೊಮ್ಮಾಯಿ

Date:

ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಸದಾ ಬೆಂಬಲವಾಗಿದೆ. ಈ ವರ್ಷವೇ ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣ ಆರಂಭಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಸರ್ಕಾರದಿಂದ ರಾಜ್‌ಕುಮಾರ್‌ ಜನ್ಮದಿನ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಇಲಾಖೆ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸಿಯನ್ನು ಶೀಘ್ರ ನೀಡಲಾಗುವುದು ಎಂದರು.

ಡಾ.ರಾಜ್‌ಕುಮಾರ್‌ ಅವರ ಬಾಲ್ಯ, ಸಿನಿ ಪಯಣ, ಪಾತ್ರದಲ್ಲಿ ಮಾಡುತ್ತಿದ್ದ ಪರಕಾಯ ಪ್ರವೇಶದ ಬಗ್ಗೆ ಅಧ್ಯಯನ ನಡೆಯಬೇಕು. ರಾಜ್‌ ಕುಮಾರ್‌ ಅವರ ಪ್ರತಿ ಚಿತ್ರವೂ ವಿಭಿನ್ನವಾಗಿದ್ದು ಅದ್ಭುತವಾಗಿ ಮೂಡಿ ಬಂದಿವೆ. ಪೌರಾಣಿಕ, ಸಾಂಸಾರಿಕ, ಬಾಂಡ್‌ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಅಮೋಘವಾಗಿ ನಟಿಸಿದ್ದಾರೆ.

ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಜನಿಸಿದಾಗ ಇದ್ದ ಮುಗ್ಧತೆ ಕೊನೆಯವರೆಗೂ ಹಾಗೆಯೇ ಇತ್ತು. ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ವೈಜ್ಞಾನಿಕ ಅಧ್ಯಯನ ನಡೆಯುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಗಳು ಚುನಾವಣೆಯಲ್ಲಿ ಜಯಗಳಿಸಿದಾಗ, ಚಿತ್ರಗಳು ಯಶಸ್ವಿಯಾದಾಗ ನಟ-ನಟಿಯರ ಬಾಡಿ ಲಾಂಗ್ವೇಜ್‌ ಬದಲಾಗುತ್ತದೆ. ನಡೆಯುವ ಧಾಟಿಯೇ ವಿಭಿನ್ನವಾಗಿರುತ್ತದೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದರೂ ರಾಜ್‌ಕುಮಾರ್‌ ಅವರು ಸಮಚಿತ್ತರಾಗಿಯೇ ಇದ್ದರು. ಕನ್ನಡ ನಾಡಿನಲ್ಲಿ ಜನಿಸಿ ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದು ಬಣ್ಣಿಸಿದರು.

ಭಾರತದ ಚಲನಚಿತ್ರ ರಂಗದಲ್ಲಿ ರಾಜ್‌ಕಪೂರ್‌, ಎನ್‌.ಟಿ.ರಾಮರಾವ್‌, ಎಂ.ಜಿ.ರಾಮಚಂದ್ರನ್‌ ಸೇರಿದಂತೆ ಕೆಲವೇ ಕೆಲವು ಶೋಮ್ಯಾನ್‌ಗಳಿದ್ದಾರೆ. ಆದರೆ ರಾಜ್‌ಕುಮಾರ್‌ ಅವರು ಅತ್ಯಂತ ಶ್ರೇಷ್ಠ ಶೋಮ್ಯಾನ್‌ ಆಗಿದ್ದಾರೆ. ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾಗಿದ್ದರೂ ವೀರಪ್ಪನ್‌ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ. ರಾಜ್‌ಕುಮಾರ್‌ ಅವರ ಅಪಾರ ಸಾಧನೆಯ ಹಿಂದೆ ಪಾರ್ವತಮ್ಮ ಅವರಿದ್ದಾರೆ ಎಂದು ಹೇಳಿದರು.

ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ತಂದೆಯವರು ಆತ್ಮಕತೆ ಬರೆಯವುದಕ್ಕೆ ಒಪ್ಪಿರಲಿಲ್ಲ. ಆತ್ಮ ದೇಹ ತ್ಯಜಿಸಿ ಹೋಗುವಾಗ ಆತ್ಮಕತೆ ಏಕೆ ಬೇಕು ಎಂದು ಪ್ರಶ್ನಿಸಿದ್ದರು. ಆದರೂ ಒತ್ತಾಯ ಮಾಡಿದಾಗ ಎರಡೇ ನಿಮಿಷದಲ್ಲಿ ಆತ್ಮಕತೆ ಹೇಳಿ ಮುಗಿಸಬಹುದು. ತಂದೆಯ ಬಗ್ಗೆ ಮಕ್ಕಳೇ ಬರೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಆದರೂ ಪುನೀತ್‌ ಒತ್ತಾಯ ಮಾಡಿದ್ದರಿಂದ ಒಪ್ಪಿಗೆ ಸೂಚಿಸಿದ್ದರು ಎಂದು ಸ್ಮರಿಸಿಕೊಂಡರು.

ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತಾಗಲೂ ಸರಳತೆ ತೋರಿದ್ದರು. ನಟ ಭಯಂಕರ ಗಂಗಾಧರ ನಾಯ್ಡು, ವರದಾಚಾರ್ಯ ಅವರಂತಹ ಶ್ರೇಷ್ಠ ಕಲಾವಿದರು ಇದ್ದಿದ್ದರೆ ನನಗೆ ಇಷ್ಟೆಲ್ಲಾ ಪ್ರಶಸ್ತಿ ಸಿಗುತ್ತಿರಲಿಲ್ಲ ಎಂದು ಅಪ್ಪಾಜಿ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.

ಜೀವಿತಾವಧಿ ಸಾಧನೆಗಾಗಿ ಹಿರಿಯ ನಟಿ ಲಕ್ಷ್ಮೀ ಅವರಿಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ನಿರ್ದೇಶಕ ಎಸ್‌.ನಾರಾಯಣ್‌ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ, ನಿರ್ಮಾಪಕ ದಿ.ಜಿ.ಎನ್‌.ಲಕ್ಷ್ಮೇಪತಿ ಪರವಾಗಿ ಪುತ್ರ ರಾಮಪ್ರಸಾದ್‌ ಅವರಿಗೆ ಡಾ.ವಿಷ್ಣುವರ್ಧನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ 5 ಲಕ್ಷ ರು. ನಗದು, 50 ಗ್ರಾಂ ಚಿನ್ನದ ಪದಕ ಒಳಗೊಂಡಿತ್ತು.

ಅತ್ಯತ್ತಮ ಚಿತ್ರ, ಮಕ್ಕಳ ಚಿತ್ರ, ಪ್ರಾದೇಶಿಕ ಚಿತ್ರ, ಅತ್ಯುತ್ತಮ ನಟ, ನಟಿ ಸೇರಿದಂತೆ ಹಲವು ವಿಭಾಗಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಆಯುಕ್ತ ಡಾ.ಪಿ.ಎಸ್‌.ಹರ್ಷ, ನಿರ್ಮಾಪಕ ಸಾ.ರಾ.ಗೋವಿಂದ್‌, ವಿತರಕ ಚಿನ್ನೇಗೌಡ ಮತ್ತಿತರರು ಹಾಜರಿದ್ದರು.

ನಾನು ತುಂಬಾ ಪುಣ್ಯ ಮಾಡಿದ್ದೆ. ಅದಕ್ಕಾಗಿ ಡಾ.ರಾಜ್‌ಕುಮಾರ್‌ ಅವರ ಹೆಸರಿನ ಪ್ರಶಸ್ತಿ ಪಡೆದಿದ್ದೇನೆ. ರಾಜ್‌ಕುಮಾರ್‌ ಅವರ ಆಶೀರ್ವಾದವೇ ಸಿಕ್ಕಂತೆ ಆಗಿದೆ. ರಾಜ್‌ಕುಮಾರ್‌ ಅವರೊಂದಿಗೆ ಅಭಿನಯಿಸಲು ತುಂಬಾ ಪುಣ್ಯ ಮಾಡಿರಬೇಕು ಎಂದು ಲಕ್ಷ್ಮಿ ಯವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಿರ್ದೇಶಕ ಪುಟ್ಟಣ ಕಣಗಾಲ್‌ ಅವರ ಬಳಿ ಕೆಲಸ ಕೇಳಿಕೊಂಡು ಹೋಗಿದ್ದೆ. ಆದರೆ ಅವಕಾಶ ಸಿಕ್ಕಿರಲಿಲ್ಲ. ಈಗ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತಸ ಉಂಟು ಮಾಡಿದೆ. ಅದರಲ್ಲೂ ಡಾ.ರಾಜ್‌ಕುಮಾರ್‌ ಅವರ ಜನ್ಮದಿನದಂದೇ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷವನ್ನುಂಟು ಮಾಡಿದೆ.
ಎಸ್‌.ನಾರಾಯಣ್‌, ನಿರ್ದೇಶಕ

ಆಯಾ ವರ್ಷವೇ ನೀಡಲಿ
ಐದು ವರ್ಷದ ಬಳಿಕ ಈಗ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ನೀಡಬೇಕು. 5 ವರ್ಷದ ನಂತರವಾದರೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದು ಸಂತಸ ತಂದಿದೆ ಎಂದು ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ ತಾರಾ ಅನುರಾಧಾ ಅವರು ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಿತಾವಧಿ ಸಾಧನೆಗಾಗಿ ಹಿರಿಯ ನಟಿ ಲಕ್ಷ್ಮೀ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ರಾಜ್‌ಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು.

ನಟ ರಾಘವೇಂದ್ರ ರಾಜ್‌ಕುಮಾರ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ವಾರ್ತಾ ಇಲಾಖೆ ಪ್ರಧಾನ ಆಯುಕ್ತ ಡಾ.ಪಿ.ಎಸ್‌.ಹರ್ಷ, ನಿರ್ಮಾಪಕ ಸಾ.ರಾ.ಗೋವಿಂದ್‌, ವಿತರಕ ಚಿನ್ನೇಗೌಡ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...