ರಷ್ಯಾದ ಪ್ರಮುಖ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಗುರುವಾರ ಮುಳುಗಿದೆ. ತನ್ನ ನೆಪ್ಚೂನ್ ಕ್ಷಿಪಣಿ ಅಪ್ಪಳಿಸಿದ್ದರಿಂದ ಯುದ್ಧನೌಕೆ ಮುಳುಗಿದೆ ಎಂದು ಉಕ್ರೇನ್ ಮಾಹಿತಿ ತಿಳಿಸಿದೆ. ಆದರೆ, ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಗೊಂಡು ನೌಕೆ ಹಾನಿ ಮುಳುಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ.
ಮೋಸ್ಕ್ವ ಫ್ಲ್ಯಾಗ್‌ಶಿಪ್ ಯುದ್ಧನೌಕೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಯುದ್ಧನೌಕೆ ಮುಳುಗಲು ಕಾರಣವೇನು ಎಂಬುವುದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಿಸಿದ್ದರಿಂದ ನೌಕೆ ಹಾನಿಗೊಳಗಾಗಿದೆ.
ಅದನ್ನು ಈಗ ದಡಕ್ಕೆ ಎಳೆದು ತಂದು ಲಂಗರು ಹಾಕಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ತಿಳಿಸಿದೆ. ರಷ್ಯಾ ಸೇನೆಯ ಮುತ್ತಿಗೆಗೆ ಒಳಗಾಗಿರುವ ಉಕ್ರೇನ್ ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನಲ್ಲಿ ಈ ನೌಕೆಯನ್ನು ನಿಯೋಜಿಸಲಾಗಿತ್ತು. ಈ ಮಧ್ಯೆ, ಗಡಿಯುದ್ದಕ್ಕೂ ಅಲ್ಲಲ್ಲಿ ಆಕ್ರಮಣದ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೀವ್ ವಿರುದ್ಧದ ಕ್ಷಿಪಣಿ ದಾಳಿಯನ್ನು ಹೆಚ್ಚಿಸಲಾಗುತ್ತದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ.
ರಷ್ಯಾದ ಭೂಪ್ರದೇಶದಲ್ಲಿ ಉಕ್ರೇನ್ ರಾಷ್ಟ್ರೀಯತಾವಾದಿ ಆಡಳಿತ ನಡೆಸುವ ಯಾವುದೇ ವಿಧ್ವಂಸಕ ಕೃತ್ಯ ಅಥವಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕೀವ್ ಅನ್ನು ಗುರಿಯಾಗಿಸಿ ನಡೆಸುವ ಆಕ್ರಮಣದ ಪ್ರಮಾಣ ಹಾಗೂ ಸಂಖ್ಯೆ ಹೆಚ್ಚಾಗಲಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಅಲ್ಲದೆ ನಿನ್ನೆ ದೀರ್ಘದೂರ ವ್ಯಾಪ್ತಿಯ ಕ್ಷಿಪಣಿ ಪ್ರಯೋಗಿಸಿ, ಉಕ್ರೇನ್ ರಾಜಧಾನಿಯ ಪಕ್ಕದಲ್ಲಿರುವ ಮಿಲಿಟರಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಅದನ್ನು ನಾಶಗೊಳಿಸಲಾಗಿದೆ ಎಂದು ರಷ್ಯಾ ಹೇಳಿದೆ. ಈ ಕಾರ್ಖಾನೆಯಲ್ಲಿ ನೆಪ್ಚೂನ್ ಕ್ಷಿಪಣಿ ಉತ್ಪಾದಿಸಲಾಗುತ್ತಿದೆ. ಈ ಕ್ಷಿಪಣಿ ಬಳಸಿ ರಷ್ಯಾದ ಯುದ್ಧನೌಕೆಯನ್ನು ಮುಳುಗಿಸಿರುವುದಾಗಿ ಉಕ್ರೇನ್ ಹೇಳಿತ್ತು.