ಆರಂಭಿಕರಾದ ಡೇವಿಡ್ ವಾರ್ನರ್, ಪೃಥ್ವಿ ಶಾ ಅವರ ಅರ್ಧಶತಕಗಳ ಜೊತೆಗೆ ಚೈನಾ ಮನ್ ಬೌಲರ್ ಕುಲದೀಪ್ ಯಾದವ್ ಹಾಗೂ ಎಡಗೈ ಮಧ್ಯಮ ವೇಗಿ ಕಲೀಲ್ ಅಹಮದ್ ಅವರ ಕರಾರುವಾಕ್ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 15ನೇ ಆವೃತ್ತಿಯ 19ನೇ ಪದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 44ರನ್ ಗಳಿಂದ ಸೋಲುಣಿಸಿ ತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡು ಸೋಲುಗಳ ನಂತರ ಎರಡನೇ ಜಯ ದಾಖಲಿಸಿತು.
ಮುಂಬೈಯ,ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಡ್ಡಿದ 216 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ತಂಡ ಎರಡು ಎಸೆತಗಳು ಬಾಕಿ ಇರುವಂತೆಯೇ ತನ್ನೆಲ್ಲ ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾದ ಕೊಲ್ಕತ್ತಾ, ಹ್ಯಾಟ್ರಿಕ್ ಜಯದ ಅವಕಾಶವನ್ನ ಕಳೆದುಕೊಂಡಿತು. ಬೃಹತ್ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ ನಾಯಕ ಶ್ರೇಯಸ್ ಐಯ್ಯರ್ ಹೊರತುಪಡಿಸಿದರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಹಂತ ಹಂತಕ್ಕೂ ಕಾಡಿದ ಕುಲದೀಪ್ ಹಾಗೂ ಖಲೀಲ್ ಅಹ್ಮದ್ ಜೋಡಿ ನೈಟ್ ರೈಡರ್ಸ್ ಬ್ಯಾಟರ್ ಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುಂಚೆ ಅಭರದ ಬ್ಯಾಟಿಂಗ್ ನಡೆಸಿದ ಪೃಥ್ವಿ ಹಾಗೂ ವಾರ್ನರ್ ಜೋಡಿ ಮೊದಲ ವಿಕೆಟ್ಗೆ 93 ರನ್ ಗಳನ್ನು ತಂಡಕ್ಕೆ ನೀಡಿದರು. ನಾಯಕ ರಿಷಬ್ ಪಂತ್, ಅಲ್ಪಮೊತ್ತಕ್ಕೆ ಸಿಮೀತಗೊಂಡರೆ, ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಹಾಗೂ ಶಾರ್ದುಲ್ ಠಾಕೂರ್ ಅವರ ಸಿಡಿಲಬ್ಬರದ ಆಟದಿಂದಾಗಿ ಪ್ರಸಕ್ತ ಐಪಿಎಲ್ ನಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ಗಳಿಸಿತು.