ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ರಾಹುಲ್ ತೆವತಿಯ ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಗೆ ಹ್ಯಾಟ್ರಿಕ್ ಜಯ ತಂದುಕೊಟ್ಟರು. ಪಂದ್ಯದ ಕೊನೆಯ ಎಸೆತದ ವರೆಗೂ ತೀವ್ರ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಕೊನೆಗೂ ಒತ್ತಡ ಮೆಟ್ಟಿನಿಂತ ಗುಜರಾತ್ ಟೈಟನ್ಸ್ ಗೆ ಆರು ವಿಕೆಟ್ ಗಳಿಂದ ಪಂಜಾಬ್ ತಂಡಕ್ಕೆ ಸೋಲುಣಿಸಿ ಸಂಭ್ರಮಿಸಿತು.
ಇಲ್ಲಿನ ಬ್ರಬೋನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಮಾಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 189 ರನ್ ಕಲೆಹಾಕಿತು. ನಂತರ ಕಠಿಣ ಗುರಿ ಬೆನ್ನಟ್ಟಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ತಂಡಕ್ಕೆ ಗೆಲ್ಲಲು ಅಂತಿಮ ಓವರ್ ನಲ್ಲಿ 19 ರನ್ ಗಳ ಅಗತ್ಯವಿತ್ತು. ಓಡೇನ್ ಸ್ಮಿತ್ ಆ ಎಸೆದ ಓವರ್ನಲ್ಲಿ ಇಲ್ಲದ ರನ್ ಕದಿಯಲು ಮಿಲ್ಲರ್ ಯತ್ನಿಸಿದ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಔಟಾದರು. ಆ ಬಳಿಕ ಜೊತೆಗೂಡಿದ ಮಿಲ್ಲರ್ ಮತ್ತು ತೇವತಿಯಾ ಜೋಡಿ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು.
ಇದಕ್ಕೂ ಮುನ್ನ, 34 ರನ್ ಕಲೆ ಹಾಕುವಷ್ಟರಲ್ಲಿ ಆರಂಭಿಕ ಇಬ್ಬರನ್ನು (ಮಾಯಾಂಕ್ ಅಗರ್ವಾಲ್ ಮತ್ತು ಜಾನಿ ಬೈರ್ ಸ್ಟೋವ್) ಕಳೆದುಕೊಂಡು ಕಷ್ಟದಲ್ಲಿ ಸಿಲುಕಿಕೊಂಡ ಪಂಜಾಬ್ ತಂಡಕ್ಕೆ ಎಡಗೈ ಬ್ಯಾಟರ್ ಶಿಖರ್ ಧವನ್ ಮತ್ತು ಲಿವಿಂಗ್ ಸ್ಟನ್ ಆಸರೆಯಾದರು. ಬಿರುಸಿನ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಸ್ಪಿನ್ ಮತ್ತು ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಅಪಾಯಕಾರಿಯಾಗುವ ಮುನ್ಸೂಚನೆ ನೀಡಿತು. ಆದರೆ, ಹನ್ನೊಂದನೇ ಓವರ್ನಲ್ಲಿ ಆಫ್ಟನ್ ಮೂಲಕ ರಶೀದ್ ಖಾನ್, 35 ರನ್ ಗಳಿಸಿದ್ದ ಶಿಖರ್ ಧವನ್ ಗೆ ಡಕ್ ಔಟ್ ದಾರಿತೋರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಜೊತೆಯಾಟ ಕೊನೆಗೊಂಡಿತು. ಅದಕ್ಕೂ ಮೊದಲು ಮೂರನೇ ವಿಕೆಟ್ ಗೆ 32 ಎಸೆತಗಳಲ್ಲಿ 52 ರನ್ ಹರಿದುಬಂದಿದ್ದವು.
ನಂತರ ಜೊತೆಯಾದ ಲಿಯಮ್ ಮತ್ತು ಜಿತೇಶ್ ಶರ್ಮಾ ಸಹ ತ್ವರಿತ ಗತಿಯಲ್ಲಿ ರನ್ ಕೂಡಿಹಾಕಿದ ಕಾರಣ ತಂಡದ ಮೊತ್ತ 12 ಓವರುಗಳಲ್ಲಿ ಮೂರಂಕಿ ಮುಟ್ಟಿತು. ಆದರೆ, ಅಷ್ಟರಲ್ಲಿ 11 ಎಸೆತಗಳಲ್ಲಿ ಎರಡು ಸಿಕ್ಸರ್ ಒಳಗೊಂಡ 23 ರನ್ ಗಳಿಸಿದ್ದ ಜಿತೇಶ್ ನಿರ್ಗಮಿಸಿದರು. ಅಲ್ಲದೆ, ಹೊಡಿಬಡಿ ಬ್ಯಾಟ್ಸ್ ಮ್ಯಾನ್ ಸ್ಮಿತ್ ಕೂಡ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಅತ್ತ ಸಾಗಿದರು. ಇದರ ನಡುವೆಯೂ ತಮ್ಮ ಅತ್ಯದ್ಭುತ ಬ್ಯಾಟಿಂಗ್ ಮುಂದುವರಿಸಿದ ಲಿವಿಂಗ್ ಸ್ಟನ್ ಅರ್ಧಶತಕದ ಸಂಭ್ರಮ ಆಚರಿಸಿದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ವಿಸ್ತರಿಸಲು ರಶೀದ್ ಖಾನ್ ಆಸ್ಪದ ನೀಡಲಿಲ್ಲ . 27 ಎಸೆತಗಳನ್ನೆದುರಿಸಿದ ಲಿವಿಂಗ್ ಸ್ಟನ್ 7 ಫೋರ್, ನಾಲ್ಕು ಸಿಕ್ಸರ್ ಸಹಿತ 64 ರನ್ ಗಳಿಗೆ ಹೋರಾಟ ಮುಗಿಸಿದರು
ಕೆಳಕ್ರಮಾಂಕದಲ್ಲಿ ಅಬ್ಬರಿಸಲು ಮುಂದಾದ ಪ್ರತಿಭಾವಂತ ಹೊಡಿಬಡಿ ಆಟಗಾರ ಶಾರುಖ್ ಖಾನ್ (15ರನ್) ಅವರಿಗೂ ಸ್ಪಿನ್ನರ್ ರಶೀದ್ ಕಂಟಕವಾದರು. ಆದರೆ, ಕೊನೆಹಂತದ ಓವರ್ಗಳಲ್ಲಿ ಮಿಂಚಿನ ಸಂಚಲನ ಮೂಡಿಸಿದ ರಾಹುಲ್ ಚಹರ್ ಕೇವಲ 14 ಎಸೆತಗಳಲ್ಲಿ 2 ಫೋರ್, ಒಂದು ಸಿಕ್ಸರ್ ಒಳಗೊಂಡ 22 ರನ್ ಚಚ್ಚಿದರು.