ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ನೇ ಸಾಲಿನ ಅಯವ್ಯಯ ಮಂಡನೆಯ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಂತ ಬಿಸಿಯೂಟ ತಯಾರಕರು, ಸಹಾಯಕರಿಗೆ ಗೌರವ ಧನ ಹೆಚ್ಚಿಸೋದಾಗಿ ಘೋಷಣೆ ಮಾಡಿದ್ದರು.
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದೆ. 2022-23ನೇ ಸಾಲಿನ ಆಯವ್ಯಯ ಘೋಷಿತ ಕಂಡಿಕೆ-100ರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು 2022-23ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ತಲಾ ರೂ.1000 ಹೆಚ್ಚಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಅಡುಗೆಯವರಿಗೆ ಮಾಸಿಕ ರೂ.3,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ.3,600 ಗೌರವ ಸಂಭಾವನೆಯನ್ನು ಪಾವತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅನುಮತಿ ನೀಡಿದೆ.
ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರ ಮಾಸಿಕ ಸಂಭಾವನೆಯನ್ನು ನೇರ ಸೌಲಭ್ಯ ವರ್ಗಾವಣೆ ವೇದಿಕೆ ಮೂಲಕ ಪಾವತಿಸುವಂತೆ ತಿಳಿಸಿದ್ದಾರೆ.