Sunday, October 6, 2024
Sunday, October 6, 2024

ಮೇಲು ಕೀಳು ತಾರತಮ್ಯ ಹೋಗಲಾಡಿಸಲು ಬಾಬೂಜಿ ಶ್ರಮಪಟ್ಟಿದ್ದರು-ಈಶ್ವರಪ್ಪ

Date:

ಸಮಾಜದಲ್ಲಿರುವ ಮೇಲು-ಕೀಳೆಂಬ ತಾರತಮ್ಯವನ್ನು ಹೋಗಲಾಡಿಸಬೇಕೆಂದು ಡಾ.ಬಾಬು ಜಗಜೀವನ ರಾಮ್‍ರವರಂತಹ ಮಹಾನ್ ವ್ಯಕ್ತಿಗಳು ಕನಸು ಕಂಡಿದ್ದರು.

ಅಂತಹ ಕನಸನ್ನು ನನಸು ಮಾಡುವ ಪ್ರತಿಜ್ಞೆ ತೆಗೆದುಕೊಳ್ಳುವ ದಿನ ಇದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, sಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಸಲಾಗಿದ್ದ ಡಾ.ಬಾಬು ಜಗಜೀವನ ರಾಮ್‍ರವರ 115 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಇಂದಿಗೂ ಸಮಾಜದಲ್ಲಿ ಮೇಲು ಕೀಳೆಂಬ ತಾರತಮ್ಯ ಇದೆ. ಯಾವ ಹಳ್ಳಿಗೆ ಹೋದರೂ ಮೇಲು, ಕೀಳು ವರ್ಗ ಎಂಬ ಪ್ರತ್ಯೇಕತೆಯನ್ನು ಕಾಣಬಹುದು. ಆದರೆ ಮೊದಲಿಗಿಂತ ಸಮಾಜದಲ್ಲಿ ಬಹಳಷ್ಟು ಸುಧಾರಣೆ ಆಗಿರುವುದು ನಿಜ. ಆದರೆ ಎಂದು ಸಮಾಜದಲ್ಲಿ ಸಂಪೂರ್ಣವಾಗಿ ಮೇಲು ಕೀಳೆಂಬ ತಾರತಮ್ಯ ಹೋಗುತ್ತದೆಯೋ ಅಂದು ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ ಎಂದರು.

ಇಡೀ ದೇಶವನ್ನು ಸರಿಯಾದ ಧಿಕ್ಕಿನಲ್ಲಿ ನಡೆಸುವ ಪ್ರತಿಭೆಯನ್ನು ಹೊಂದಿದ್ದ ಡಾ.ಬಾಬು ಜಗಜೀವನರಾಮ್‍ರವರು ದೇಶದ ಪ್ರಧಾನಿ ಆಗಲಿಲ್ಲ ಎಂಬ ನೋವು ನನಗೆ ಕಾಡುತ್ತದೆ. ದೇಶದ ರೈತರು ಮತ್ತು ಇತರೆ ಹಿಂದುಳಿದ ವರ್ಗಗಳ ಹಸಿವಿನ ಬಗ್ಗೆ ಲೋಕಸಭೆಯಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದರು ರಾಮ್‍ರವರು. ಹಿಂದೆ ದೇಶದಲ್ಲಿ ಭೂಮಿ, ನೀರು ಮತ್ತು ಜನಸಂಖ್ಯೆ ಸಂಪದ್ಭರಿತವಾಗಿದ್ದರೂ ಆಹಾರ ಧಾನ್ಯಗಳನ್ನು ವಿದೇಶದಿಂದ ರಫ್ತು ಮಾಡುತ್ತಿದ್ದ ಸಮಯದಲ್ಲಿ ನಾವೇ ಸ್ವಾವಲಂಬಿಗಳಾಗಬೇಕೆಂದು ಪಣ ತೊಟ್ಟು ಹಸಿರು ಕ್ರಾಂತಿಗೆ ನಾಂದಿ ಹಾಡಿದವರು ಅವರು.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‍ರವರು ದಲಿತರು, ಹಿಂದುಳಿದವರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ತರುವ ಉದ್ದೇಶದಿಂದ ಕನಿಷ್ಟ 10 ವರ್ಷದವರೆಗೆ ಮೀಸಲಾತಿ ತಂದರು. ಈಗ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಶೇ.0.5 ರಷ್ಟು ಈ ವರ್ಗದವರು ಮೇಲೆ ಬಂದಿಲ್ಲ. ಪ್ರತಿ ಇಲಾಖೆಯಲ್ಲಿ ಇವರಿಗೆ ಮೀಸಲಾತಿ ಇದೆ. ಅರ್ಹರಿಗೆ ಈ ಸೌಲಭ್ಯಗಳು ದೊರೆಯುತ್ತಿವೆಯೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಸರ್ಕಾರ ಈ ವರ್ಗಗಳಿಗೆ ನೀಡುವ ಯಾವ ಸೌಲಭ್ಯಗಳು ಮತ್ತು ಮೀಸಲಾತಿ ದುರುಪಯೋಗವಾಗದಂತೆ ನೋಡಿಕೊಳ್ಳಬೇಕಿದೆ.

ದಲಿತರಿಗೆ ಶಿಕ್ಷಣ, ಉದ್ಯೋಗ ಸಿಗಬೇಕು. ಓದಿಸುವ ಹಂಬಲ ಪೋಷಕರಿಗೆ ಮತ್ತು ಓದುವ ಹಂಬಲ ಮಕ್ಕಳಲ್ಲಿ ಹೆಚ್ಚಾಗಬೇಕು. ಸರ್ಕಾರದ ಸವಲತ್ತುಗಳೊಂದಿಗೆ ಸಂಘಟನಾತ್ಮಕ ಹೋರಾಟದ ಅವಶ್ಯಕತೆಯೂ ಇದೆ. ಇಂದು ಯಾವ ಕಾರಣಕ್ಕೋ ಹೋರಾಟದ ಕಿಚ್ಚು ಕಡಿಮೆ ಆಗುತ್ತಿದೆ.

ಸ್ವಾತಂತ್ರ್ಯಾನಂತರ ಬ್ಯಾಕ್‍ಲಾಗ್ ಹುದ್ದೆಗಳು ಭರ್ತಿ ಆಗಿಲ್ಲ. ಕಾರಣ ಈ ವರ್ಗದಲ್ಲಿ ಶಿಕ್ಷಣದ ಕೊರತೆಯೂ ಒಂದು. ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಅವಧಿಯಲ್ಲಿ ಎಲ್ಲ ಪಕ್ಷಗಳೊಡಗೂಡಿ ಬ್ಯಾಕ್‍ಲಾಗ್ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದ್ದರು. ಈ ವರ್ಗದ ಜನ ಕೂಡ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಉಪಯೋಗಿಸಲು ಮುಂದೆ ಬರಬೇಕು.

ಸಮಾಜದಲ್ಲಿ ದಲಿತ, ಹಿಂದುಳಿದವರು ಜಾಗೃತಿ ಹೊಂದಬೇಕು. ಹೊಂದುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟ. ತಮ್ಮ ಸಂಪುಟದ 77 ಮಂತ್ರಿಗಳ ಪೈಕಿ 27 ಜನರು ಹಿಂದುಳಿದ ಮತ್ತು 20 ಜನ ದಲಿತರನ್ನು ಮಂತ್ರಿ ಮಾಡಿರುವುದು ಎಂದರು.

ಮೊದಲು ನಾನು ಬದಲಾಗಬೇಕು. ನನ್ನ ಕುಟುಂಬ ಉದ್ದಾರವಾಗಬೇಕು ಎಂದು ಎಲ್ಲರೂ ಮುಂದೆ ಬರಬೇಕು. ಹೀಗೆ ಸಮ ಸಮಾಜ ನಿರ್ಮಾಣವಾದಾಗ ಇಂತಹ ಮಹಾನ್ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ, ಅಭಿವೃದ್ದಿ ಹೊಂದೋಣ ಎಂದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಮ್ಮ ಅಕ್ಕಪಕ್ಕದ ರಾಷ್ಟ್ರಗಳು ದಿವಾಳಿಯಾಗುತ್ತಿರುವುದನ್ನು ನೋಡಿದರೆ ಅವುಗಳ ಬುನಾದಿ ಸರಿ ಇಲ್ಲ ಎಂದು ಮನವರಿಕೆ ಆಗುತ್ತದೆ. ಸುಮಾರು 53 ರಾಷ್ಟ್ರಗಳಿಂದ ಪಡೆಯಲಾದ ನಮ್ಮ ಸಂವಿಧಾನ ಅದ್ಭುತವಾಗಿದೆ. ನಾವು ಜೀವನ ಮಾಡುವ ಸ್ಥಿತಿಯನ್ನು ನಿರ್ಮಿಸಿಕೊಟ್ಟಿದೆ. ಬಾಬು ಜಗಜೀವನರಾಮ್‍ರವರು ಹಸಿರು ಕ್ರಾಂತಿ ಮತ್ತು ಕಾರ್ಮಿಕರ ಏಳ್ಗೆಗಾಗಿ ಹೋರಾಡಿದರು. ಹಲವಾರು ಜನಾಂಗಗಳಿಗೆ ಶಕ್ತಿ ತುಂಬಿದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಪಾರದರ್ಶಕತೆಯನ್ನು ಕಾಣುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಎಂದ ಅವರು ಸಮಾಜದಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇವೆ. ಅವನ್ನು ಪರಿಹರಿಸುವ ಕೆಲಸ ಎಲ್ಲ ಸೇರಿ ಮಾಡಬೇಕೆಂದರು.

ಇತಿಹಾಸ ಪ್ರಾಧ್ಯಾಪಕರಾದ ಡಾ.ಕೆ.ಜಿ.ವೆಂಕಟೇಶ್ ವಿಶೇಷ ಉಪನ್ಯಾಸ ನೀಡಿ,ಡಾ.ಬಾಬು ಜಗಜೀವನರಾಮ್‍ರವರ ಜೀವನದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸದಸ್ಯರಾದ ಸುರೇಖಾ ಮುರಳಿಧರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಎಡಿಸಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...