ಕೊರೊನಾ, ಪ್ರವಾಹ, ಬರ ಯಾವುದೇ ಇದ್ದರೂ ಸರಕಾರಕ್ಕೆ ಆದಾಯ ತಂದುಕೊಡುವ ಏಕಮಾತ್ರ ಇಲಾಖೆ ಅಬಕಾರಿ. ಕೋವಿಡ್ ಸಂದರ್ಭದಲ್ಲೂ ಆದಾಯ ಗುರಿ ತಲುಪಿದ ಇಲಾಖೆ ತನ್ನ ಅಧೀನದಲ್ಲಿ ಕೆಲಸ ಮಾಡುವ ಎಂಎಸ್‌ಐಎಲ್ ಮಳಿಗೆ ನೌಕರರಿಗೆ ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದರೆ ನಂಬಲೇ ಬೇಕು .ಹೌದು
ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳಿವೆ. ಪ್ರತಿ ಮಳಿಗೆಯಲ್ಲೂ ಕನಿಷ್ಠ ಮೂರರಿಂದ ನಾಲ್ಕು ಮಂದಿ ನೌಕರರಿದ್ದಾರೆ. ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಂಬಳವಿಲ್ಲದೇ ದಿನ ದೂಡುವಂತಾಗಿದೆ. ಸರಕಾರ ಅಧೀನ ಸಂಸ್ಥೆಯಾಗಿರುವುದರಿಂದ ಉದ್ಯೋಗ ಭದ್ರತೆ, ವೇತನ, ಪಿಎಫ್, ಇಎಸ್‌ಐ ಸೌಲಭ್ಯ ಸಿಗುತ್ತದೆ ಎಂದು ಸಾವಿರಾರು ಯುವಕರು ಕೆಲಸಕ್ಕೆ ಸೇರಿದ್ದಾರೆ. ಕೇವಲ 9500 ರೂ.ಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ದುಡಿಯುವ ಇವರಿಗೆ ಈ ವೇತನ ಕೊಡದೆ ಸತಾಯಿಸಲಾಗುತ್ತಿದೆ.
ಸಂಬಳ ಯಾಕಿಲ್ಲ?
ಎಂಎಸ್‌ಐಎಲ್ ಮಳಿಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ನೇರವಾಗಿ ಇಲಾಖೆಗೆ ಒಳಪಡುವುದಿಲ್ಲ. ಇವರನ್ನು ರಾಜ್ಯಮಟ್ಟದ ಖಾಸಗಿ ಮ್ಯಾನ್ ಪವರ್ ಏಜೆನ್ಸಿ ಮೂಲಕ ಸಂಬಳ ನೀಡಲಾಗುತ್ತಿದೆ. ಎರಡು ವರ್ಷದ ಅವಧಿಗೆ ಟೆಂಡರ್ ಪಡೆಯುವ ಗುತ್ತಿಗೆದಾರ ಇವರಿಗೆ ಸಂಬಳ, ಪಿಎಫ್, ಇಎಸ್‌ಐ ವ್ಯವಸ್ಥೆ ಮಾಡಬೇಕು. ಆದರೆ ಟೆಂಡರ್‌ದಾರ ವೇತನ ಪಾವತಿ ಮಾಡದೆ ಬಾಕಿ ಉಳಿಸಿಕೊಂಡ ಪರಿಣಾಮ ನೌಕರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬರೀ ವೇತನವಷ್ಟೇ ಅಲ್ಲದೇ ಒಂದೂವರೆ ವರ್ಷದಿಂದ ಪಿಎಫ್, ಇಎಸ್‌ಐ ಖಾತೆಗೆ ಹಣ ಕೂಡ ಜಮೆ ಮಾಡಿಲ್ಲ. ಇಎಸ್‌ಐ ಇದೆ ಎಂದು ಆಸ್ಪತ್ರೆಗೆ ಹೋದವರು ಶಾಕ್ ಆಗಿದ್ದಾರೆ. ಕಷ್ಟಪಟ್ಟು ದುಡಿದರೂ ಬೆಲೆ ಇಲ್ಲ, ಈ ಬಗ್ಗೆ ಕೇಳಿದರೆ ನಿಮಗೆ ಎಲ್ಲಿ ಸಂಬಳ ನೀಡುತ್ತಾರೋ ಅಲ್ಲಿಗೆ ಹೋಗಿ ಅನ್ನುತ್ತಾರೆ.ಕೋವಿಡ್ ಸಮಯದಲ್ಲಿ ಕೆಲಸದಿಂದ ತೇಗೆಯುತ್ತಿತುವುದೇ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಎಲ್ಲಿಗೆ ಹೋಗಿ ಕೆಲಸ ಹುಡುಕುವುದು ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಕೈಗೆ ಸಿಗುವುದು 9500 ರೂ. ಸಂಬಳ. ಅದನ್ನೂ ಸರಿಯಾಗಿ ಕೊಡುತ್ತಿಲ್ಲ.
ದಿನಬಳಕೆ ವಸ್ತುಗಳ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಟೆಂಡರ್‌ದಾರನಿಗೆ ಹೆಚ್ಚಿನ ಹಣ ಸಿಗುತ್ತದೆ. ಆದರೆ ನೌಕರರಿಗೆ ಸಿಗುವುದು ಬಿಡಿಗಾಸು. ಪಿಎಫ್, ಇಎಸ್‌ಐ ಸೌಲಭ್ಯ ಸಿಗದಿದ್ದರೆ ಇಷ್ಟು ಕಡಿಮೆ ಸಂಬಳ. ಅಂಗಡಿಯಲ್ಲಿ ಬಿಲ್‌ನಲ್ಲಿ ಕೊಂಚ ವ್ಯತ್ಯಾಸವಾದರೂ ಅದು ನೌಕರನ ಮೇಲೆ ಬರುತ್ತದೆ. ಅವೆಲ್ಲವನ್ನು ಸಹಿಸಿಕೊಂಡಿದ್ದೇವೆ. ಎಷ್ಟೋ ಕಡೆ ಎಂಆರ್‌ಪಿಗಿಂತ ಹೆಚ್ಚಿನ ದರ ಪಡೆಯುತ್ತಾರೆ. ಇದರಲ್ಲಿ ಅಧಿಕಾರಿಗಳು ಸಹ ಪಾಲುದಾರರು. ಇವೆಲ್ಲವನ್ನು ನಾವ್ಯಾರು ಪ್ರಶ್ನಿಸುವಂತಿಲ್ಲ. ನಾವೇನಾದರೂ ಹೆಚ್ಚು ಮಾತನಾಡಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇಲ್ಲ ದೂರದ ಮಳಿಗೆಗೆ ಹಾಕುತ್ತಾರೆ. ಇವೆಲ್ಲವನ್ನು ಸಹಿಸಿಕೊಳ್ಳುತ್ತೇವೆ. ಸಂಬಳ ಮಾತ್ರ ಪ್ರತಿ ತಿಂಗಳು ಹಾಕಿದರೆ ಸಾಕು ಎಂಬುದು ಹೆಸರು ಹೇಳಲಿಚ್ಛಿಸದ ನೌಕರನ ಆರೋಪ.
ಪ್ರತಿ ಮಳಿಗೆಯಿಂದ ಪ್ರತಿದಿನ ಕನಿಷ್ಠ 50 ಸಾವಿರ, 3 ಲಕ್ಷದವರೆಗೂ ವಹಿವಾಟು ನಡೆಯುತ್ತದೆ. ಎಂಆರ್‌ಪಿಒ ದರಕ್ಕೆ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಾರೆ.
ಕೈಕೊಟ್ಟ ಟೆಂಡರ್‌ದಾರ-
ಎರಡು ವರ್ಷ ಅವಧಿಗೆ ಗುತ್ತಿಗೆ ಪಡೆದಿದ್ದ ಟೆಂಡರ್‌ದಾರ ಒಂದೂವರೆ ವರ್ಷ ಪೂರೈಸಿದ್ದು ವೇತನ ಬಾಕಿ ಉಳಿಸಿಕೊಂಡಿದ್ದಾನೆ. ಪಿಎಫ್, ಇಎಸ್‌ಐ ಕೂಡ ಬಾಕಿ ಉಳಿಸಿಕೊಂಡ ಪರಿಣಾಮ ಅವರನ್ನು ಕೈಬಿಟ್ಟು ಬೇರೊಬ್ಬರಿಗೆ ಟೆಂಡರ್ ನೀಡಲಾಗಿದೆ. 10 ದಿನದೊಳಗೆ ಸಮಸ್ಯೆ ಬಗೆಹರಿಯಲಿದೆ ಎಂಬುದು ನಿರ್ದೇಶಕರೊಬ್ಬರ ಅಭಿಪ್ರಾಯ