Kuvempu University ಪತ್ರಕರ್ತರಾಗಬೇಕಾದರೆ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ನಿರಂತರ ಓದುತ್ತಾ ಇರಬೇಕು ಅದು ಯಾವತ್ತೂ ನಷ್ಟವಾಗುವುದಿಲ್ಲ ಎಂದು ಕನ್ನಡ ಮೀಡಿಯಂ 24×7 ಕೇಬಲ್ ಹಾಗೂ ಡಿಜಿಟಲ್ ಸುದ್ದಿ ವಾಹಿನಿ ಪ್ರಧಾನ ಸಂಪಾದಕರಾದ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಅವರು ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಇಂದು ಆಯೋಜಿಸಿದ್ದ “ಟೆಲಿವಿಷನ್ ನಿರೂಪಣೆ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕರಿಗೆ ಹೆಚ್ಚಿನ ಬೇಡಿಕೆ ಇದೆ. ಇದಕ್ಕಾಗಿ ಭಾಷಾ ಪಾಂಡಿತ್ಯ, ವಿಷಯದ ಬಗ್ಗೆ ಸಮಗ್ರ ಅರಿವು ಹಾಗೂ ಸಮಾಜವನ್ನು ತೆರೆದ ಕಣ್ಣಿನಿಂದ ನೋಡುವ ಮನೋಭಾವ ಅಗತ್ಯ ಎಂದು ಹೇಳಿದರು.
ಪತ್ರಿಕೋದ್ಯಮದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಗಟ್ಟಿತನವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಥರ್ಡ್ ಐ ವಾಹಿನಿ ಸಂಸ್ಥಾಪಕ ಸಂಪಾದಕರಾದ ಸುಬ್ರಹ್ಮಣ್ಯ ಎಸ್. ಹಂಡಿಗೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ನೈತಿಕತೆ ಕುಸಿಯುತ್ತಿದ್ದು, ಧರ್ಮ ಮತ್ತು ಜಾತಿ ಆಧಾರಿತ ವಿಭಜನೆಗಳನ್ನು ಉಂಟುಮಾಡುವ ಪ್ರವೃತ್ತಿ ಹೆಚ್ಚುತ್ತಿದೆ, ರಾಜಕೀಯ ನಾಯಕರನ್ನು ಪ್ರಶ್ನಿಸುವ ಧೈರ್ಯ ಕಡಿಮೆಯಾಗುತ್ತಿದೆ ಎಂದರು.
ಮೀಸಲಾತಿಯ ಉದ್ದೇಶ ಸಾಮಾಜಿಕ ಸಮಾನತೆ ಸಾಧಿಸುವುದೇ ಹೊರತು ಶ್ರೀಮಂತಿಕೆ ಹೆಚ್ಚಿಸುವುದಲ್ಲ. ಈ ವಿಷಯವನ್ನು ಸರಿಯಾದ ಅರಿವಿಲ್ಲದೆ ತಪ್ಪಾಗಿ ಪತ್ರಕರ್ತರು ವಾಗ್ಮಿಗಳು ಬಿಂಬಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕೋದ್ಯಮದಲ್ಲಿ ಅನೇಕ ಅವಕಾಶಗಳಿದ್ದು, ತಮ್ಮದೇ ವೇದಿಕೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಆದರೆ ನೈತಿಕತೆಯಿಂದ ಸಮಾಜದಲ್ಲಾಗಿರುವ ಗಾಯಗಳಿಗೆ ಔಷಧಿಯನ್ನು ಹಚ್ಚುವ ಕೆಲಸಗಳನ್ನು ಮಾಡಬೇಕು ಎಂದರು.
ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲ ಸಚಿವರಾದ ಶ್ರೀ ಹೇಮಂತ್ ಎನ್ ಮಾತನಾಡಿ, ನಿರೂಪಕರಿಗೆ ಕೌಶಲ್ಯ, ವಿಷಯ ಜ್ಞಾನ ಹಾಗೂ ಸಮಯ ನಿರ್ವಹಣೆ ಪ್ರಮುಖವೆಂದರು.
Kuvempu University ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಮಾತನಾಡಿ, ಟಿಆರ್ಪಿ ಹಂಬಲದಲ್ಲಿ ಮಾಧ್ಯಮಗಳು ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತಿದ್ದು, ನೈತಿಕ ಮೌಲ್ಯಗಳನ್ನು ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷರಾದ ಡಾ. ವರ್ಗೀಸ್ ಪಿ.ಎ., ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್, ಡಾ. ಸತ್ಯಪ್ರಕಾಶ್ ಎಂ.ಆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರಗತಿ ಡಿ.ಡಿ ನಿರ್ವಹಿಸಿದ್ದು, ಪ್ರಾರ್ಥನೆಯನ್ನು ಭಾರ್ಗವಿ ನೆರವೇರಿಸಿದರು. ಮನೋಜ್ ವಂದನಾರ್ಪಣೆ ಸಲ್ಲಿಸಿದರು.
