Samiksha Reddy ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವು: ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ- ನ್ಯಾಯಾಂಗ ತನಿಖೆಗೆ ಭಾರತೀಯ ಮಹಿಳಾ ಪಶುವೈದ್ಯರ ಸಂಘ ಒತ್ತಾಯ
ಶಿವಮೊಗ್ಗ: ಶಿವಮೊಗ್ಗ ಮೃಗಾಲಯ, ಹುಲಿ ಮತ್ತು ಸಿಂಹ ಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಹೊಣೆಗಾರಿಕೆ ಅತ್ಯಗತ್ಯ ಇಂತಹ ಪರಿಸ್ಥಿತಿಗೆ ತಳ್ಳಿದವರನ್ನು ತನಿಖೆಯಿಂದ ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಭಾರತೀಯ ಮಹಿಳಾ ಪಶುವೈದ್ಯರ ಸಂಘದ ರಾಜ್ಯ ಘಟಕ ಒತ್ತಾಯಿಸಿದೆ.
ಡಾ. ಸಮೀಕ್ಷಾ ರೆಡ್ಡಿಯವರ ಸಾವಿನ ಕುರಿತಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೀಡುತ್ತಿರುವ ಮಾಧ್ಯಮ ಹೇಳಿಕೆಗಳು, ಪತ್ರಿಕಾ ಪ್ರಕಟಣೆ ಮತ್ತು ಸಾಂದರ್ಭಿಕ ಸನ್ನಿವೇಶಗಳು ಗೊಂದಲದಿಂದ ಕೂಡಿದೆ. ಪಕ್ಷಿಗೆ ಕೇವಲ ಒಂದು ಸಾಮಾನ್ಯ ಆಂಟಿಬಯೋಟಿಕ್ ಫಾಲೋ ಅಪ್ ಚಿಕಿತ್ಸೆಗೆ ತಡರಾತ್ರಿ 11.30ಕ್ಕೆ ಡಾ. ಸಮೀಕ್ಷಾ ರೆಡ್ಡಿ ಅವರನ್ನು ಕಳುಹಿಸಿರುವುದು ಸರಿಯಲ್ಲ.
ಯಾವುದೇ ಚಿಕಿತ್ಸೆಗೆ ಒಬ್ಬಂಟಿ ಪಶು ವೈದ್ಯರನ್ನು ಅದರಲ್ಲೂ ಮಹಿಳಾ ಪಶು ವೈದ್ಯರನ್ನು ವನ್ಯಜೀವಿ ಚಿಕಿತ್ಸೆಗೆ ತಡರಾತ್ರಿಯಲ್ಲಿ ನಗರ ವ್ಯಾಪ್ತಿಯ ಹೊರಗಿರುವ ಪ್ರದೇಶದಲ್ಲಿರುವ ಮೃಗಾಲಯಕ್ಕೆ ಕಳುಹಿಸಿದ್ದು ಏಕೆ? ಚಿಕಿತ್ಸೆಗೆ ವೈದ್ಯರ ಅವಶ್ಯಕತೆ ಜೊತೆ ಸಿಬ್ಬಂದಿ ಅವಶ್ಯಕತೆ ತಿಳಿಯಲಿಲ್ಲವೇ?
ಶಿವಮೊಗ್ಗ ಮೃಗಾಲಯ, ಹುಲಿ ಮತ್ತು ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಾಕ್ಷರವರ ಹೇಳಿಕೆ ಆಧರಿಸಿ ಹೇಳುವುದಾದರೆ ತರಬೇತಿ ಅವಧಿಯಲ್ಲಿದ್ದ, ಅತೀ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಡಾ. ಸಮೀಕ್ಷಾ ರೆಡ್ಡಿ ಅವರನ್ನು ಒಬ್ಬಂಟಿಯಾಗಿ ಅಲ್ಲಿಗೆ ಕಳುಹಿಸಿರುವುದು ಯಾವ ದೃಷ್ಟಿಕೋನದಿಂದಲೂ ಸರಿಯಲ್ಲ ನೈತಿಕವಾಗಿಯೂ ಅಥವಾ ವೃತ್ತಿಪರವಾಗಿಯೂ ಅಂಗೀಕರಿಸಲು ಸಾಧ್ಯವಿರುವುದಿಲ್ಲ. ಸಂಬಂಧಿಸಿದ ಅಧಿಕಾರಿಯ ಬೇಜವಾಬ್ದಾರಿತನದ ಹೇಳಿಕೆಗಳು ಒಂದು ಪಕ್ಷಿಯ ಜೀವಕ್ಕೆ ಇರುವ ಬೆಲೆ ಮಡಿದ ಪಶುವೈದ್ಯೆಗೆ ಇಲ್ಲವೆಂದು ಬಿಂಬಿಸುತ್ತದೆ.
ಅಲ್ಲದೆ ಡಾ. ಸಮೀಕ್ಷಾರವರಿಗೆ ಯಾವುದೇ ವೇತನ ಕೂಡ ಪಾವತಿ ಮಾಡಿರುವುದಿಲ್ಲ ಎಂದು ತಿಳಿದು ಬಂದಿದೆ. ಇಡೀ ಘಟನಾವಳಿಯ ಸಿಸಿಟಿವಿ ದೃಶ್ಯಾವಳಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಡಾ. ಸಮೀಕ್ಷಾ ರೆಡ್ಡಿ ಅವರ ಜೊತೆ ತೆರಳಿದ ಡ್ರೈವರನ್ನು ತನಿಖೆಗೆ ಒಳಪಡಿಸಬೇಕು. ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕು.
ಈ ಹಿಂದೆಯೂ ಕೂಡ ಈ ರೀತಿ ರಾತ್ರಿ ಸಮಯದಲ್ಲಿ ಡಾ. ಸಮೀಕ್ಷಾ ರೆಡ್ಡಿಯವರನ್ನು ಇಂತಹ ಚಿಕಿತ್ಸೆಗಳಿಗೆ ಹಲವು ದಿನಗಳಿಂದ ಕಳುಹಿಸುತ್ತಿದ್ದರು ಎಂಬುದು ಕಾರ್ಯನಿರ್ವಾಹಕ ನಿರ್ದೇಶಕರು ನೀಡಿರುವ ಹೇಳಿಕೆಯಿಂದಲೇ ತಿಳಿಯುತ್ತದೆ. ಆದ್ದರಿಂದ ಡಾ. ಸಮೀಕ್ಷಾ ರೆಡ್ಡಿಯವರ ಅನುಪಸ್ಥಿತಿಯಲ್ಲಿ ಅವರನ್ನು ‘ಅತಿ ಉತ್ಸಾಹಿ’ ಎಂದು ವರ್ಣಿಸುವುದು ಆಕ್ಷೇಪಾರ್ಹ. ತಮ್ಮ ಬೇಜವಾಬ್ದಾರಿತನವನ್ನು ಮೃಗಾಲಯದ ಆಡಳಿತ ಡಾ. ಸಮೀಕ್ಷಾ ರೆಡ್ಡಿ ಅವರ ಹೆಗಲಿಗೆ ಹೊರಿಸಿ ಜಾರಿಕೊಳ್ಳುವ ನಡೆಯನ್ನು ಸಂಘ ಖಂಡಿಸುತ್ತದೆ.
ಮಾನ್ಯ ಅರಣ್ಯ ಸಚಿವರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಯಾವುದೇ ಎಸ್‌ಓಪಿಗಳು ಅರಣ್ಯ ಇಲಾಖೆಯಲ್ಲಿ ಲಭ್ಯವಿಲ್ಲ ಎಂದಿರುವುದು ಅರಣ್ಯ ಇಲಾಖೆಯ ವೈಫಲ್ಯದ ಧ್ಯೋತಕವಾಗಿದ್ದು, ಪಶುವೈದ್ಯರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ.
Samiksha Reddy ಸಂಘಕ್ಕೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ಮಹಿಳಾ ಉದ್ಯೋಗಿಗಳ ಹಿತರಕ್ಷಣೆ ಕಾಪಾಡಲು ನೀಡಿರುವ ಋತುಚಕ್ರ ರಜೆಯನ್ನು ಕೂಡ ತಿರಸ್ಕರಿಸುವ ಮನಸ್ಥಿತಿ ಅಲ್ಲಿನ ಮೇಲಾಧಿಕಾರಿಯಾದ ಅಮರಾಕ್ಷರರವರಿಗೆ ಇರುವುದು ಖಂಡನೀಯ. ಮೃಗಾಲಯದಲ್ಲಿರುವ ಅವ್ಯವಸ್ಥೆಯ ಬಗ್ಗೆ ಆಗಿಂದಾಗ್ಗೆ ಡಾ. ಸಮೀಕ್ಷಾ ರೆಡ್ಡಿ ಅವರು ಇ ಮೇಲ್ ಮುಖಾಂತರ ಮೇಲಾಧಿಕಾರಿಗಳಿಗೆ ಕಳವಳ ವ್ಯಕ್ತಪಡಿಸಿರುತ್ತಾರೆ. ಅದನ್ನು ಹತ್ತಿಕ್ಕುವ ಅನೇಕ ಪ್ರಯತ್ನಗಳು ಕೂಡ ಅಲ್ಲಿನ ಅಲ್ಲಿನ ಮೇಲಾಧಿಕಾರಿರವರು ಮಾಡಿರುವುದಾಗಿ ತಿಳಿದುಬಂದಿದೆ.
ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕೇವಲ ಕ್ಷಮೆಯಾಚನೆ ಅಥವಾ ವನ್ಯಜೀವಿಗಳಿಗೆ ಅವರ ಹೆಸರಿಡುವುದರಿಂದ ಮಾತ್ರವೇ ಪರಿಹಾರ ಸಿಗುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರದಿಂದ ಡಾ. ಸಮೀಕ್ಷಾ ಅವರಿಗೆ ಗೌರವ ಬಿರುದನ್ನು ನೀಡಬೇಕೆಂದು ಸಂಘದ ಉಪಾಧ್ಯಕ್ಷೆ ಡಾ. ಪವಿತ್ರ ಬಿ.ಎಸ್. ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ
