Dinesh Gundu Rao ರೋಗ ಬರುವ ಮುನ್ನವೇ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಕೊಂಡೊಯ್ಯುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಆರೋಗ್ಯ’ ಯೋಜನೆ ಸಫಲತೆ ಕಂಡಿದೆ. ಆದರೆ, ಆ ವರದಿ ಬೇಸರದ ಸಂಗತಿಗೆ ಹಾಗೂ ಆರೋಗ್ಯದ ಬಗ್ಗೆ ನಮ್ಮ ಗ್ರಾಮೀಣರು ಹೆಚ್ಚು ಆಸಕ್ತಿ ತೋರಬೇಕಾದ ಸಂದರ್ಭಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇತ್ತೀಚಿನ ನಡೆಸಿದ ತಪಾಸಣಾ ವರದಿಯು ಒಂದು ಆಘಾತಕಾರಿ ಸತ್ಯವನ್ನು ಹೊರಹಾಕಿದ್ದು, ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ನಮ್ಮ ಗ್ರಾಮೀಣ ಭಾಗದ ಜನರಲ್ಲಿ ರಕ್ತದೊತ್ತಡದ (High BP) ಸಮಸ್ಯೆ ಅತಿಹೆಚ್ಚು ಕಾಣಿಸಿಕೊಳ್ಳುತ್ತಿದೆ.
ರಾಜ್ಯಾದ್ಯಂತ 30 ವರ್ಷ ಮೇಲ್ಪಟ್ಟ ಸುಮಾರು 76 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 35.27 ಲಕ್ಷಕ್ಕೂ ಅಧಿಕ ಮಂದಿ ಹೈ ಬಿ.ಪಿ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಪ್ರಮಾಣ ಶೇ. 19ರಷ್ಟಿದ್ದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಶೇ. 43.9ರಷ್ಟು ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿಯಾಗಿದೆ.
ಜಿಲ್ಲಾವಾರು ಅಂಕಿ-ಅಂಶಗಳನ್ನು ನೋಡುವುದಾದರೆ ಬೆಳಗಾವಿಯಲ್ಲಿ ಅತಿಹೆಚ್ಚು ಅಂದರೆ 3,86,257 ಪ್ರಕರಣಗಳು ವರದಿಯಾಗಿವೆ.
ಮೈಸೂರಿನಲ್ಲಿ 1,94,712, ತುಮಕೂರಿನಲ್ಲಿ 1,94,191, ಬಳ್ಳಾರಿಯಲ್ಲಿ 1,91,917 ಹಾಗೂ ಧಾರವಾಡದಲ್ಲಿ 1,74,543 ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ-ಅಂಶಗಳು ನಮ್ಮ ‘ಗೃಹ ಆರೋಗ್ಯ’ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕ್ಷಿಯಾಗಿವೆ.
Dinesh Gundu Rao ಮನೆ ಮನೆಗೆ ತೆರಳಿ ತಪಾಸಣೆ ನಡೆಸುತ್ತಿರುವುದರಿಂದ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಾವು ಗುರುತಿಸಲು ಸಾಧ್ಯವಾಗಿದೆ.
ನಾಡಿನ ಜನತೆ ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಗೃಹ ಆರೋಗ್ಯ ಯೋಜನೆಯಡಿ ನಿಮ್ಮನ್ನು ಕಾಳಜಿ ಮಾಡಲು ಮತ್ತು ನಿಮಗೆ ಸೂಕ್ತ ಚಿಕಿತ್ಸೆ ಒದಗಿಸಲು ನಾವಿದ್ದೇವೆ. ಆದರೆ, ನೀವು ಸರಿಯಾದ ಆಹಾರ ಸೇವನೆ, ಉತ್ತಮವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯ ಸುಧಾರಣೆಗೆ ಗಮನ ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ.
