Monday, February 16, 2026
Monday, February 16, 2026

ಸಂತ ಶರೀಫರ ಕೃತಿಗಳನ್ನ ಕಟ್ಟಿ ಕೊಟ್ಟ ಭಟ್ಟರು

Date:

ಲೇ: ಪ್ರಭಾಕರ ಕಾರಂತ.

ಕವಿ ಲಕ್ಷ್ಮೀನಾರಾಯಣ ಭಟ್ಟ ಇನ್ನೂ ಶಿವಮೊಗ್ಗದಲ್ಲಿ ಪ್ರೌಢ ಶಾಲೆಯಲ್ಲಿದ್ದಾಗಲೇ ಶಾಲಾ ವಾರ್ಷಿಕೋತ್ಸವಕ್ಕೆ ಆನಕೃ ಅತಿಥಿಯಾಗಿ ಬಂದಿದ್ದರು.”ಸೋರುತಿಹುದು ಮನೆಯ ಮಾಳಿಗೀ… ಅಜ್ಞಾನದಿಂದ”ಪದ್ಯವನ್ನು ಆದರ ಆರ್ಥ ಸಮೇತ ವಿವರಿಸಿ ಸ್ವಾರಸ್ಯವಾಗಿ ಮಾತನಾಡಿ ಅವರು, ಶರೀಫರನ್ನು ಮಕ್ಕಳಿಗೆ ಸೊಗಸಾಗಿ ಪರಿಚಯಿಸಿದ್ದರು.ಶಿವಮೊಗ್ಗ ತುಂಗಾ ತೀರದ ದೊಡ್ಡ ಬ್ರಾಹ್ಮಣ ಬೀದಿಯ ಬಾಲಕ ಭಟ್ಟನಿಗೆ ಅಲ್ಲಿಂದ ಶರೀಫರ ಗೀಳು ಹಿಡಿಯಿತು.ಬೀದಿಯಲ್ಲಿ ಬರುವ ದಾಸರಲ್ಲೆಲ್ಲಾ ಶರೀಫರ ಹಾಡು ಬರುತ್ತಾ ಎಂದು ಕೇಳುವುದು ಬಾಲಕನ ಹವ್ಯಾಸವಾಯಿತು.ಓರ್ವ ಹರಿದಾಸರು ಭಟ್ಟರ ಪುಣ್ಯಕ್ಕೆ ಸಿಕ್ಕೇ ಬಿಟ್ಟರು.ಅವರನ್ನು ಹಾದಿ ಬದಿಯ ಕಟ್ಟೆ ಮೇಲೆ ಕೂರಿಸಿ “ಎಂಥಾ ಮೋಜಿನ ಕುದುರೀ”ಹಾಡನ್ನು ತಂಬೂರಿ ಯೊಂದಿಗೆ ಹಾಡಿಸಿ ಭಟ್ಟರು ಚಪ್ಪಾಳೆ ತಟ್ಟಿ ಆನಂದಿಸಿದರು.ಹರಿದಾಸರಿಗೆ ಮತ್ತೇನಾದರೂ ಕೊಡಲು ಈ ಬಾಲಕ ಬರಿಗೈ ದಾಸ.ಮುಂದೆ ಯಾರು ಕಂಡರೂ ಶರೀಫರ ಹಾಡು ಕೇಳಿ ಬರೆದುಕೊಳ್ಳುವುದು ಭಟ್ಟರ ಅಭ್ಯಾಸ ಆಯಿತು.ಭಟ್ಟರು ದೊಡ್ಡವರಾಗಿ ಓದಿ ವಿಶ್ವ ವಿದ್ಯಾಲಯ ಸೇರಿ ಪಾಠ ಮಾಡಿತೊಡಗಿದಾಗಲೂ,ಊರೂರಿಗೆ ಭಾಷಣಕ್ಕೆ ಹೋಗುವಾಗಲೂ ಶರೀಫರ ಪದ್ಯ ಸಂಗ್ರಹ ನಿಲ್ಲಿಸಲಿಲ್ಲ.ಅದು ಯಾರಬಳಿ ದೊರಕೀತು ಎಂದು ಅವರು ಸರಿಯಾಗಿ ನಿರ್ಧರಿಸಬಲ್ಲವರಾಗಿದ್ದರು.
ಒಮ್ಮೆ ವಿಶ್ವವಿದ್ಯಾಲಯ ಪಠ್ಯ ರಚನಾ ಸಮಿತಿ ಭಟ್ಟರಿಗೆ ಪಠ್ಯಕ್ಕಾಗಿ ದಾಸರಪದ ಸಂಗ್ರಹಿಸಿ ಕೊಡಲು ಕೋರುತ್ತದೆ.ಭಟ್ಟರು ಲಭ್ಯ ಇರುವ ದಾಸರ ಪದ ಸಂಗ್ರಹಿಸಿ ವಿವರಣಿ,ಅಡಿ ಟಿಪ್ಪಣಿ ಯೊಂದಿಗೆ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುತ್ತಾರೆ.ಇನ್ನೇನು ಆದು ಅಚ್ಚಿಗೆ ಹೋಗಬೇಕು ಆಗ ಭಟ್ಟರಿಗೆ ಮತ್ತೆ ಕರೆ ಬರುತ್ತದೆ.ನಿಮ್ಮ ಸಂಗ್ರಹ ರಂ.ಶೀ.ಮುಗಳಿಯವರ ಪರಿಶೀಲನೆಗೆ ಹೋಗಿತ್ತು.ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ ಎಂದು ಆವರ ಪತ್ರ ಭಟ್ಟರಿಗೆ ಕೊಡುತ್ತಾರೆ.ಈ ಸಂಗ್ರಹ, ವಿವರಣೆ,ಅಡಿ ಟಿಪ್ಪಣಿ ಎಲ್ಲಾ ತುಂಬಾ ಚೆನ್ನಾಗಿದೆ.ಆದರೆ ಪುರಂದರ ದಾಸರು, ಕನಕ ದಾಸರು ಮುಂತಾದವರ ನಡುವೆ ಓರ್ವ ಮುಸಲ್ಮಾನನ ಪದ್ಯ ಸೇರಿಸಿದ್ದಾರೆ.ಆ ಆರು ಪದ್ಯ ಮತ್ತದಕ್ಕೆ ಸಂಬಂಧಿಸಿದಂತೆ ಇರುವ ಬರಹ ತೆಗೆದು ಉಳಿದಂತೆ ಇದನ್ನು ಪಠ್ಯ ಮಾಡಬಹುದು ಎಂದು ಮುಗಳಿ ಅಭಿಪ್ರಾಯ ಪಟ್ಟಿರುತ್ತಾರೆ.ಭಟ್ಟರಿಗೆ ಬೇಗ ಆವರು ಹೇಳಿದಂತೆ ಮಾಡಿಕೊಡಿ,ಪಠ್ಯ ಅಚ್ಚಿಗೆ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.ಭಟ್ಟರು ನಾನು ಹಾಗೆ ಮಾಡಲಾರೆ ಎಂದುತ್ತರಿಸುತ್ತಾರೆ.ಈಗಲೇ ತಡವಾಗಿದೆ, ಬೇರೆಯದೇ ಸಂಗ್ರಹ ಮಾಡಿಸುವಂತಲೂ ಇಲ್ಲ.ನೀವು ಹೀಗೆ ಹೇಳಿದರೆ ಏನು ಮಾಡಬೇಕು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.ಭಟ್ಟರೇ ಅದಕ್ಕೊಂದು ಪರಿಹಾರ ಹೇಳುತ್ತಾರೆ.ಇದೇ ಸಂಗ್ರಹ ಬೇರೊಬ್ಬರಿಂದ ನಿಮಗೆ ಬೇಕಾದಂತೆ ಮಾರ್ಪಡಿಸಿ ಅವರ ಹೆಸರಿನಲ್ಲೇ ಆಚ್ಚು ಹಾಕಿ.ಅದರ ಗೌರವ ಸಂಭಾವನೆಯನ್ನೂ ಅವರಿಗೇ ಕೊಟ್ಟುಕೊಳ್ಳಿ.ನಾನು ಯಾವುದೇ ಕಾರಣಕ್ಕೂ ಈ ಸಂಗ್ರಹದಲ್ಲಿ ಬದಲಾವಣೆ ಮಾಡುವುದೇ ಇಲ್ಲ ಎಂದು ಖಡಕ್ ಉತ್ತರ ನೀಡುತ್ತಾರೆ.ನೀವು ಹೀಗೆ ಹಠ ಮಾಡಿದರೆ…ಎಂದು ಅಧಿಕಾರಿಗಳು ಮಾತು ನಿಲ್ಲಿಸಿದಾಗ ಏನು ಮಾಡುತ್ತೀರಿ, ಉಪಕುಲಪತಿಗಳಿಗೆ ದೂರು ಕೋಡುವಿರಿ ತಾನೆ,ಹಾಗೇ ಮಾಡಿ ಎಂದು ಹೇಳಿ ಭಟ್ಟರು ನಿರ್ಗಮಿಸುತ್ತಾರೆ.
ಆದೇ ದಿನ ಭಟ್ಟರಿಗೆ ಉಪಕುಲಪತಿಗಳ ಬುಲಾವ್ ಬರುತ್ತದೆ.ಆಗ ಆ ಸ್ಥಾನದಲ್ಲಿದ್ದವರು ದಕ್ಷ ಐಎಎಸ್ ಅಧಿಕಾರಿ ಜೈರಾಮನ್.ವಿಶ್ವವಿದ್ಯಾಲಯದಲ್ಲಿ ಆದ ಕೆಲ ಅವ್ಯವಹಾರ ಕಂಡು ಸರಿಪಡಿಸಲೆಂದೇ ಸರ್ಕಾರ ಅವರನ್ನು ನೇಮಿಸಿರುತ್ತದೆ.ತಮ್ಮೆದುರು ಬಂದು ನಿಂತ ವ್ಯಕ್ತಿಯನ್ನು “ನೀವೇ ಏನ್ರೀ ಲಕ್ಷ್ಮೀನಾರಾಯಣ ಭಟ್ಟ.ಮುಗಳಿ ಯವರ ಕುರಿತು ನಿಮಗೇನಾದರೂ ಗೋತ್ತೇನ್ರೀ.ಅಂತವರು ಕೊಟ್ಟ ಸೂಚನೆ ಪಾಲಿಸುವುದು ಬಿಟ್ಟು ಸಲ್ಲದ ಕ್ಯಾತೆ ತೆಗೆದಿದ್ದೀರಂತೆ.ಪ್ರಸಿದ್ದ ದಾಸರ ಜೊತೆಗೆ ಯಾರೋ ಮುಸಲ್ಮಾನನ ಪದ್ಯ ಸೇರಿಸಿದ್ದಲ್ಲದೇ ಆದು ತೆಗೆಯಲಾರೆ ಎಂದು ಬೇರೆ ಹೇಳಿದಿರಂತೆ.ಸುಮ್ಮನೇ ಸಮಸ್ಯೆ ಮಾಡದೇ ಬದಲಾಯಿಸಿ ಕೊಡಿ” ಎಂದು ಆಜ್ಞೆ ನೀಡಿದರು.ಭಟ್ಟರು ತೆಪ್ಪಗೆ ಈಚೆಗೆ ಬಾರದೇ ನಿಂತೇ ಇರುವುದು ಕಂಡು ಸಿಡಿಮಿಡಿಗೊಂಡು ಆರ್ಥವಾಗಲಿಲ್ಲವೇನ್ರೀ ಎಂದು ಕುಲಪತಿಗಳು ಪ್ರಶ್ನಿಸಿದರು.ಆರ್ಥವಾಯಿತು, ನನಗೆ ಸ್ವಲ್ಪ ಮಾತನಾಡಲು ಅವಕಾಶ ನೀಡಬೇಕು ಎಂದು ಭಟ್ಟರು ಉತ್ತರಿಸಿದರು.ಅದೇನು ಬೇಗ ಹೇಳಿ,ನನಗೆ ಬೇಕಾದಷ್ಟು ಕೆಲಸ ಇದೆ ಎಂದು ಉಪಕುಲಪತಿ ಸಿಡುಕುತ್ತಾರೆ.ನಾನು ಓರ್ವ ಸಮರ್ಥರಾದ ದಾಸರ ಪದ್ಯವನ್ನೇ ಸೇರಿಸಿದ್ದು.ಆವರು ಉಳಿದವರಿಗಿಂತ ಕಡಿಮೆ ಇಲ್ಲ.ಯಾವನೋ ಸಾಬರಲ್ಲ ಅವರು.ಶರೀಫರು.ಧರ್ಮದ ಆಧಾರದಲ್ಲಿ ಆವರ ಶ್ರೇಷ್ಠ ತತ್ವಪದ ಕೈಬಿಡಲು ಯಾರು ಹೇಳಿದರೂ ನನಗೆ ಒಪ್ಪಿಗೆ ಇಲ್ಲ ಸಾರ್ ಎನ್ನುತ್ತಾರೆ.
ಶರೀಫರು ಮಹಾನ್ ಕೀರ್ಥನಕಾರರು, ಸಾಧಕರು ಎಂದು ಭಟ್ಟರು ಸೇರಿಸುತ್ತಾರೆ.ಏನು ಅಷ್ಟು ದೊಡ್ಡವರೇ ಉಪಕುಲಪತಿ ಕುತೂಹಲದಿಂದ ಪ್ರಶ್ನಿಸುತ್ತಾರೆ.ಹೌದು ಸರ್ ಅವರ ತತ್ವಪದಗಳು ಬಹು ಶ್ರೇಷ್ಠ ವಾಗಿವೆ.ಆವರು ಧರ್ಮ ಮೀರಿದವರು.ಇಷ್ಟಕ್ಕೂ ಅವರಿಗೆ ಉಪನಯನ ಸಹ ಆಗಿತ್ತು ಎಂದು ಭಟ್ಟರು ವಿವರಿಸತೊಡಗುತ್ತಾರೆ.ಓಹೋ ನೀವೂ ಉಪನಯನಕ್ಕೆ ಹೋಗಿದ್ದರೇನ, ಏನೆಲ್ಲಾ ಕಾಕಬೂಕ ಕಥೆ ಕಟ್ಟುತ್ತೀರ ಎಂದು ಉಪಕುಲಪತಿ ಮತ್ತೆ ಅಸಹನೆ ತೋರುತ್ತಾರೆ.ಅವಕಾಶ ಇದ್ದರೆ ನಾನು ಹೋಗುವವನೇ,ಆದರೆ ಕಳೆದ ಶತಮಾನದ ಸಮಾರಂಭಕ್ಕೆ ಹೋಗುವುದು ಹೇಗೆ.ಅದಕ್ಕೆ ಸಾಕ್ಷಿ ಇದೆ ಎನ್ನುತ್ತಾರೆ ಭಟ್ಟರು.ಏನು ಸಾಕ್ಷಿ ಎಂದಾಗ ಪದ್ಯ ಬರೆದಿಟ್ಟಿದ್ದಾರೆ ಸರ್.ತಮ್ಮ ಗುರು ಗೋವಿಂದ ಭಟ್ಟರು ಜನಿವಾರ ಹಾಕಿದ ಕುರಿತೇ ಪದ್ಯ ಇದೆ.ಇಷ್ಟು ಹೇಳಿದ ಭಟ್ಟರು” ಹಾಕಿದ ಜನಿವಾರವಾ…”ಪದ್ಯ ಹೇಳುತ್ತಾ ಅದರ ಆರ್ಥ ವಿವರಿಸುತ್ತಾ ತರಗತಿಯಲ್ಲಿ ಪಾಠ ಮಾಡುವಂತೆಯೇ ಉಪಕುಲಪತಿಗಳಿಗೆ ಪಾಠ ಮಾಡುತ್ತಾರೆ.ಈ ಆಕರ್ಷಕ ಪಾಠದ ಮೋಡಿಗೊಳಗಾದ ಉಪಕುಲಪತಿ ವಿದೇಯ ವಿದ್ಯಾರ್ಥಿಯಾಗಿ ಪಾಠ ಕೇಳುತ್ತಾರೆ.ಪಾಠ ಮುಗಿದ ಮೇಲೆ ಉಪಕುಲಪತಿಗಳು ಭೇಷ್,ನೀವು ಸರಿಯಾಗೇ ಆ ಪದ್ಯ ಸೇರಿಸಿದ್ದೀರಿ.ಯಾರು ಹೇಳಿದರೂ ಇದರ ಬದಲಾವಣೆ ಬೇಡ ಎಂದು ಹೇಳಿ ಯಥಾ ಪ್ರಕಟಣೆಯ ಆದೇಶ ಹೊರಡಿಸುತ್ತಾರೆ.ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಆ ಭಟ್ಟರ ಸಂಪಾದಿತ ತತ್ವಪದಗಳ ಕೃತಿ ಈವತ್ತಿಗೂ ಅತ್ಯುತ್ತಮ ಸಂಗ್ರಹ ಎನಿಸಿದೆ.
ಒಮ್ಮೆ ಅಶ್ವಥ್ ಕೆಲ ಹೊಸ ಹಾಡಿಗೆ ಭಟ್ಟರಲ್ಲಿ ಕೋರಿಕೆ ಇಡುತ್ತಾರೆ.ಭಟ್ಟರು ಒಂದೆರಡು ದಿನದಲ್ಲೇ ಶರೀಫರ ಕೆಲ ಹಾಡನ್ನು ಕೊಡುತ್ತಾರೆ.ಮತ್ತೆ ಭಟ್ಟರು ಸಿಕ್ಕಾಗ ಇದೇನು ನಿಮ್ಮ ಹಾಡು ಕೊಡಿ ಅಂದರೆ ಇದ್ಯಾವುದೋ “ಕೆಟ್ಟ ಗಂಡೇ ಚೌಡೇರು,ರಂಡೇರೈವರ ಕೂಡಿ ನಗುತಲಿ ಬಂದು…” ಇಂತಹಾ ಹಾಡು ಕೊಟ್ಟಿದ್ದೀರಲ್ಲ.ಇದನ್ನು ಹಾಡಿದರೆ ಜನ ಕಲ್ಲು ಹೊಡೆಯುತ್ತಾರೆ ಅಷ್ಟೇ ಎಂದು ಅಶ್ವಥ್ ತಿಳಿಸುತ್ತಾರೆ.
ಅಶ್ವಥ್ ಮತ್ತು ಭಟ್ಟರು ಆತ್ಮೀಯ ಸ್ನೇಹಿತರೇನೋ ಹೌದು,ಆದರೆ ಆವರ ನಡುವೆ ಆಗೀಗ ಕಲಹ ನೆಡೆಯುವುದೂ ಇತ್ತು!.
ಒಮ್ಮೆ ಅಶ್ವಥ್ ಜೊತೆಗೆ ಚಿಂತಾಮಣಿಗೆ ಸ್ನೇಹ ಕೂಟಕ್ಕೆ ಭಟ್ಟರು ಹೋಗಿದ್ದರು.ಅಂದು ಆಶ್ವಥ್ ಶಿವರುದ್ರಪ್ಪನವರ “ಎಲ್ಲೋ ಹುಡುಕಿದೆ ಇಲ್ಲದ ದೇವರ,ಕಲ್ಲು ಮಣ್ಣುಗಳ ಗುಡಿಯೊಳಗೆ”ಹಾಡನ್ನು ಹಾಡುತ್ತಾರೆ.ಹಾಡು ಹೇಗಿದೆ ಎಂದು ಭಟ್ಟರನ್ನು ಪ್ರಶ್ನಿಸುತ್ತಾರೆ.ಚೆನ್ನಾಗಿ ಹಾಡಿದಿರಿ ಎಂದು ಭಟ್ಟರಿಂದ ಉತ್ತರ ಬಂದಾಗ ಗೀತೆ ಹೇಗಿದೆ ಎಂದು ಉಪ ಪ್ರಶ್ನೆ.ನನಗೆ ಆದರ ಭಾವ ಇಷ್ಟ ಆಗಲಿಲ್ಲ ಎನ್ನುತ್ತಾರೆ.ಶಿವರುದ್ರಪ್ಪನವರ ಗೀತೆಗೇ ಭಟ್ಟರು ಹೀಗೆ ಹೇಳುವುದು ಅಶ್ವಥ್ ಗೆ ಸರಿ ಕಾಣುವುದಿಲ್ಲ.ಏನು ಭಾವ ಎಂದವರು ಕೆಣಕುತ್ತಾರೆ.ದೇವರೇ ಇಲ್ಲ ಎನ್ನುತ್ತದೆ ಈ ಪದ್ಯ.ನಮಗೆ ಪವಿತ್ರವಾದ ಗುಡಿ ಇಲ್ಲಿ ಬರೇ ಕಲ್ಲು ಮಣ್ಣು.ಇಲ್ಲದ ದೇವರು ಅನ್ನೋ ಬದಲು ಕಾಣದ ದೇವರ ಅನ್ನಬಹುದಿತ್ತು.ಭಟ್ಟರ ವಿವರಣೆ ಆಶ್ವಥ್ ಗೆ ಇಷ್ಟವಾಗಲಿಲ್ಲ.ಅವರಿಗೆ ಸಮರ್ಪಕವಾಗಿ ಸಮರ್ಥಿಸಿಕೊಳ್ಳಲೂ ಆಗಲಿಲ್ಲ.ಅವರಿಗೆ ಕೋಪದ ಜೊತೆಗೆ ಗಂಟಲೂ ಏರತೊಡಗಿತು.ಭಟ್ಟರೇನೂ ಶರಣಾಗುವವರಲ್ಲ.ತರ್ಕಬದ್ದವಾದ ಅವರ ಮಾತುಗಳಿಗೆ ಅಲ್ಲಿದ್ದವರು ತಲೆದೂಗಿದರೂ ಆಶ್ವಥ್ ಅಸಮಾಧಾನಗೊಂಡರು.ಅಷ್ಟರಲ್ಲಿ ಇಬ್ಬರನ್ನೂ ಬೇರ್ಪಡಿಸಬೇಕಾಯಿತು ಉಳಿದವರು.ಜೊತೆಯಾಗಿ ಚಿಂತಾಮಣಿ ಹೋದವರು ಬೇರೆ ಬೇರೆಯಾಗಿ ಬೆಂಗಳೂರಿಗೆ ಹಿಂದಿರುಗಿದರು.ಮುನಿಸು ಬಹಳ ಕಾಲ ಉಳಿಯಲಿಲ್ಲ.ಬೆಳಗಾಗುತ್ತಲೇ ಭಟ್ಟರ ಮನೆಯಲ್ಲಿದ್ದರು ಅಶ್ವಥ್.ನೀವು ಸರಿಯಾಗೇ ಹೇಳಿದಿರಿ.ನಾನೇ ಏನೇನೋ ಮಾತನಾಡಿದೆ ಎಂದು ಆಶ್ವಥ್ ಹೇಳಿದಾಗ ಭಟ್ಟರು ಕ್ಷಮಿಸಿ ಬಿಡುತ್ತಾರೆ.ಭಟ್ಟರು ಈ ಗೀತೆ ನನ್ನಿಂದ ಹಾಡಿಸಿ ಕಲ್ಲು ಹೊಡೆಸಿ ಯಾವುದೋ ಜಗಳದ ಸೇಡು ತೀರಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೇನ ಎಂದು ಅಶ್ವಥ್ ಗೆ ಅನಿಸಿರಲೂ ಸಾಕು.
ಭಟ್ಟರು ಶರೀಫರ ಕುರಿತು ಅಶ್ವಥ್ ರಿಗೆ ಮತ್ತೆ ಪಾಠ ಮಾಡುತ್ತಾರೆ.ಅಶ್ವಥ್ ರಿಗೂ ಶರೀಫರ ಹುಚ್ಚು ಹಿಡಿಸುತ್ತಾರೆ.ಶರೀಫರ ಹತ್ತು ಕೀರ್ತನೆಗಳನ್ನು ಆಶ್ವಥ್ ರಿಂದಲೇ ಹಾಡಿಸಿ ಕ್ಯಾಸೆಟ್ ಮಾಡಿಸುತ್ತಾರೆ.ಅದು ಜನರ ಹುಚ್ಚೆಬ್ಬಿಸುತ್ತದೆ.ಮುಂದೆ ಆಶ್ವಥ್ ರಿಂದ ಶರೀಫರ ಎಂಟು ಕ್ಯಾಸೆಟ್ ಮಾಡಿಸುತ್ತಾರೆ.ಶರೀಫರ ಕುರಿತು ಭಟ್ಟರು ಒಂದು ಪುಸ್ತಕ ರಚಿಸುತ್ತಾರೆ.ತಮಗೆ ಶರೀಫರ ಕುರಿತು ಹಿಡಿದ ಹುಚ್ಚನ್ನು ಲೋಕಕ್ಕೆ ಹಬ್ಬಿಸುತ್ತಾರೆ.ಶಿಶುನಾಳದಂತ ಸಣ್ಣ ಊರವರೇ ಮರೆತಿದ್ದ ಶರೀಫರನ್ನು ಲೋಕ ವಿಖ್ಯಾತ ಮಾಡುತ್ತಾರೆ.ಕನ್ನಡಕ್ಕೆ ಇಷ್ಟು ಉಪಕಾರ ಮಾಡಿದ ಭಟ್ಟರನ್ನು ಮರೆಯುವುದುಂಟೇ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ...

Shakti scheme ಇನ್ನುಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್

Shakti scheme ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ...