Wednesday, February 11, 2026
Wednesday, February 11, 2026

ಗತವೈಭವದ ಆಗರ…ಆರಗ

Date:

ಲೇ: ರಾಘವೇಂದ್ರ ಅಡಿಗ.
ತೀರ್ಥಹಳ್ಳಿ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಆರಗ ಐತಿಹಾಸಿಕವಾಗಿ ವಿಜ್ರಂಭಿಸಿ, ಕಾಲನ ಕಾಲಡಿಗೆ ಸಿಕ್ಕಿ ಪ್ರಸ್ತುತ ಕಾಲಮಾನಕ್ಕೆ ಒಗ್ಗಿಕೊಂಡಿರುವ ಪ್ರದೇಶಗಳಲ್ಲಿ ಒಂದು. ಒಂದು ಕಾಲದಲ್ಲಿ ಹಲವಾರು ರಾಜವಂಶಗಳ ರಾಜಧಾನಿಯಾಗಿ ಮೆರೆದ ಸ್ಥಳ. ಮಲೆನಾಡಿನ ಮಳೆಕಾಡಿನ ಮಧ್ಯದಲ್ಲಿ ಅಡಿಕೆ ತೋಟ, ತೆಂಗು, ಭತ್ತದ ಗದ್ದೆಗಳಿಂದ ಆವೃತವಾಗಿ, ಗೋಪಿನಾಥ ಹೊಳೆ ಮತ್ತು ಕುಶಾವತಿ ನದಿಯ ದಡದ ಮೇಲಿರುವ ಈ ಊರಿನ ಪ್ರಾಚೀನ ಇತಿಹಾಸ ನಮ್ಮನ್ನು ಮಹಾಭಾರತ ಕಾಲಕ್ಕೆ ಕರೆದೊಯ್ಯುತ್ತದೆ. ಪಾಳುಬಿದ್ದ ದೇವಸ್ಥಾನಗಳು, ಜೈನ ಬಸದಿಗಳು, ಗುಹೆಗಳು, ನೆಲಗಟ್ಟಿನ ಅವಶೇಷಗಳು ಈಗಲೂ ಇಲ್ಲಿದ್ದು ಗತವೈಭವಕ್ಕೆ ಸಾಕ್ಷಿಯಾಗಿವೆ.

ಅರಗಿನ ಮನೆ ಪ್ರಕರಣ
ದುರ್ಯೋಧನನು ಪುರೋಚನ ಎಂಬ ಶಿಲ್ಪಿಗೆ ‘ವಾರಣಾವತ’ ಎಂಬ ಪ್ರದೇಶದಲ್ಲಿ ಅರಗಿನಿಂದ (ಮೇಣದಿಂದ) ಅರಮನೆಯನ್ನು ನಿರ್ಮಿಸಲು ಹೇಳಿ ಅಲ್ಲಿಗೆ ಪಾಂಡವರನ್ನು ವಿಶ್ರಾಂತಿಗಾಗಿ ಕಳುಹಿಸಿದನು. ಪಾಂಡವರು ನಿದ್ರಿಸುತ್ತಿದ್ದಾಗ ಅದಕ್ಕೆ ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಡುವುದು ದುರ್ಯೋಧನನ ದುರುದ್ದೇಶವಾಗಿತ್ತು. ಆದರೆ ಈ ಸಂಚು ವಿದುರನಿಗೆ ಗೊತ್ತಾಗಿ ಪಾಂಡವರನ್ನು ಎಚ್ಚರಿಸಿದುದರ ಪರಿಣಾಮವಾಗಿ ಪಾಂಡವರು ಜಾಗೃತರಾಗಿ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದರು. ಈ ಅರಗಿನ ಅರಮನೆ ಇದ್ದ ಪ್ರದೇಶವೇ ‘ಆರಗ’ ಎಂದಾಯಿತು ಎಂಬ ಪ್ರತೀತಿ ಇದೆ. ಈಗಲೂ ಇಲ್ಲಿ ಒಂದು ಜಾಗದಲ್ಲಿ ಬರಡು ಭೂಮಿ ಇದ್ದು ಯಾವುದೇ ಮರಗಿಡಗಳು ಬೆಳೆಯುವುದಿಲ್ಲ. ಇದು ಅರಗಿನ ಅರಮನೆ ಸುಡಲ್ಪಟ್ಟ ಜಾಗ ಎಂದು ನಂಬಲಾಗಿದೆ.

ಆರಗ ರಾಜ್ಯ
ಇತಿಹಾಸದಲ್ಲಿ ಕ್ರಿ.ಶ. 8ನೇ ಶತಮಾನದಲ್ಲೇ ಆರಗ ರಾಜ್ಯದ ಉಲ್ಲೇಖವಿದೆ. ಕ್ರಿ.ಶ. ಸುಮಾರು 10ರಿಂದ 17ನೇ ಶತಮಾನದವರೆಗೆ ವೇಂಟೆ, ಕಂಪಣ, ರಾಜ್ಯ, ಪುರ, ಪುತ್ತನ ಎಂಬ ಹೆಸರಿನಲ್ಲಿ ಆರಗ ಸ್ಥಳವು ‘ಆರಗ ಮಲೆರಾಜ್ಯ’ ಎಂಬ ಹೆಸರಿನ ರಾಜ್ಯದ ರಾಜಧಾನಿಯಾಗಿತ್ತು. ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ 1048 ರಲ್ಲಿ ಸಾಂತಳಿಗೆ ನಾಡು ರೂಪುಗೊಂಡಾಗ ಆರಗವು ಈ ಸಾಂತಳಿಗೆ ನಾಡಿನಲ್ಲಿತ್ತು. ಮುಂದೆ ಹೊಂಬುಜ(ಹುಂಚ)ವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಸಾಂತರರು ಈ ನಾಡನ್ನು ವಿಸ್ತರಿಸಿ ‘ಸಾಂತಳಿಗೆ ಸಾವಿರ’ ಎಂಬ ಆಡಳಿತ ಘಟಕವನ್ನು ರೂಪಿಸಿದರು. ಕ್ರಿ. ಶ 8ನೆಯ ಶತಮಾನದಲ್ಲಿ ಸಾಂತರ ರಾಜರ ಪ್ರಾಂತೀಯ ಆಡಳಿತಗಾರ್ತಿ ಸುಗ್ಗಬ್ಬೆ ಎಂಬುವವಳು ಆರಗ ಪ್ರದೇಶದ ಸುತ್ತಮುತ್ತಲಿನ ಪ್ರಜೆಗಳಿಗಾಗಿ ಅನ್ನಸಂತರ್ಪಣಾ ಛತ್ರಕ್ಕಾಗಿ ‘ದಾನಶಾಲೆ’ (ಈಗಿನ ದಾನಸಾಲೆ) ಗ್ರಾಮವನ್ನು ಉಂಬಳಿಯಾಗಿ ನೀಡಿದ್ದಳು ಎಂಬುದನ್ನು ದಾನಸಾಲೆಯ ಜೈನಬಸದಿಯಲ್ಲಿ ದೊರೆತ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಇದೇ ಶಾಸನದಲ್ಲಿ ಹೊಂಬುಜ ಜೈನಮಠದ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಪೊಂಬುರ್ಚಪುರ(ಈಗಿನ ಹುಂಚ)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಳುತ್ತಿದ್ದಸಾಂತರ ಜೈನರಾಜರು ಸಾಗರದ ಹೊಸಗುಂದ ಮತ್ತು ಚಿಕ್ಕಮಗಳೂರಿನ ಕಳಸ ಪ್ರದೇಶಗಳಿಗೆ ಸ್ಥಳಾಂತಗೊಂಡರು. ಹೊಯ್ಸಳರ ಕಾಲದಲ್ಲೂ ಆರಗಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ನಂತರ ಯಾವಾಗ ವಿಜಯನಗರ ಅರಸರು ಆರಗವನ್ನು ಉಪರಾಜಧಾನಿಯನ್ನಾಗಿ ಮಾಡಿಕೊಂಡರೋ ಆಗ ‘ಆರಗ ರಾಜ್ಯ’ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆಯಿತು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ವಿಶಿಷ್ಟವಾದ ಈ ಪ್ರದೇಶ ವಿಜಯನಗರ, ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಮಲೆರಾಜ್ಯ, ಆರಗವೇರಿ, ಆರಗ ಮಹಾನಾಡು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಕ್ರಿ.ಶ 1362ರ ಹೊತ್ತಿನಲ್ಲಿ ಆರಗ ಮತ್ತು ಗುತ್ತಿ (ಈಗಿನ ಸೊರಬದ ಚಂದ್ರಗುತ್ತಿ) ಜಂಟಿ ರಾಜ್ಯವಾಗಿ ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಅಧೀನದಲ್ಲಿತ್ತು. ವಿಜಯನಗರ ಸಾಮ್ರಾಜ್ಯದ ಉಪನಗರವಾಗಿದ್ದ ಇದು ಕ್ರಿ.ಶ 1300 ರಿಂದ ಕ್ರಿ.ಶ 1700 ನೆಯ ಇಸವಿಯವರೆಗೆ ಅಂದರೆ ಸುಮಾರು 400 ವರ್ಷಗಳ ಕಾಲ ರಾಜಕೀಯ-ಸಾಂಸ್ಕೃತಿಕ-ಆರ್ಥಿಕ-ಕಲೆಗಳ ಬೀಡಾಗಿ ಮೆರೆಯಿತು. ಕ್ರಿ.ಶ 1362ರಿಂದ ಕ್ರಿ.ಶ 1665ವರೆಗೆ ‘ಆರಗ ರಾಜ್ಯ’ದ ಪ್ರಸ್ತಾಪ ವಿಜಯನಗರದ ಶಾಸನಗಳಲ್ಲಿ ಕಂಡುಬರುತ್ತದೆ.

‘ಕರ್ನಾಟಕ ಇತಿಹಾಸ ಅಕಾಡೆಮಿ’ಯ ಮಾಹಿತಿಯಂತೆ ವಿಜಯನಗರದ ಅರಸರು ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಮಲೆನಾಡಿನ ಈ ಭಾಗವನ್ನು ‘ಮಲೆ ರಾಜ್ಯ’ ಎಂದು ಗುರುತಿಸಿ ಅದಕ್ಕೆ ಆರಗವನ್ನು ರಾಜಧಾನಿಯನ್ನಾಗಿ ಮಾಡಿದರು. ವಿಜಯನಗರದ ಸಂಗಮ ವಂಶದ ಸೋದರರಲ್ಲಿ ಒಬ್ಬನಾದ ಮಾರಪ್ಪ ಒಡೆಯನು ಆರಗ ರಾಜ್ಯದ ಚುಕ್ಕಾಣಿಯನ್ನು ಹಿಡಿದನು. ಕ್ರಿ.ಶ 1362ರಲ್ಲಿ ವಿಜಯನಗರ ಬುಕ್ಕರಾಯನ ಮಗ ವಿರೂಪಾಕ್ಷನು ಆರಗವನ್ನು ಆಳುತ್ತಿದ್ದನು. ವಿಜಯನಗರ ರಾಜಮನೆತನಕ್ಕೆ ಸೇರಿದ ವ್ಯಕ್ತಿ ಆರಗವನ್ನು ಕೇಂದ್ರವಾಗಿಸಿಕೊಂಡು ಕರಾವಳಿ ಹಾಗೂ ದಕ್ಷಿಣ ಭಾಗದ ನಿಯಂತ್ರಕರಾಗಿ ರಾಜ್ಯಪಾಲರ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದು ಆರಗದ 18 ಹಾಗೂ ಚಂದ್ರಗುತ್ತಿಯ 18 ಕಂಪಣ(ಗ್ರಾಮಗಳ ಸಮೂಹ)ಗಳನ್ನು ಒಳಗೊಂಡಿತ್ತು. ಈಗಿನ ತೀರ್ಥಹಳ್ಳಿ, ಸಾಗರ, ಚಿಕ್ಕಮಗಳೂರು, ಹೊಸನಗರ ಮತ್ತು ಶಿವಮೊಗ್ಗ ಭಾಗಕ್ಕೆ ಆರಗ ರಾಜಧಾನಿಯಾಗಿ ಮತ್ತು ಸೊರಬ, ಶಿಕಾರಿಪುರ, ಮತ್ತು ಉತ್ತರಕನ್ನಡದ ಭಾಗಗಳಿಗೆ ಚಂದ್ರಗುತ್ತಿ ರಾಜಧಾನಿಯಾಗಿತ್ತು. ವಿಜಯನಗರದ ಚಕ್ರವರ್ತಿ ಇಮ್ಮಡಿ ಹರಿಹರರಾಯನು ತನ್ನ ಪುತ್ರರಲ್ಲಿ ಒಬ್ಬನಾದ ಚಿಕ್ಕರಾಯನನ್ನು ಆಡಳಿತಾನುಭವ ಬರಲೆಂದು ಆರಗ ಪ್ರಾಂತ್ಯಕ್ಕೆ ರಾಜ ಪ್ರತಿನಿಧಿಯಾಗಿ ನೇಮಿಸಿದ್ದನು. ತದನಂತರ ಬಂದ ದೇವರಾಯನು ತನ್ನ ಮಗನಾದ ಭಾಸ್ಕರರಾಯನನ್ನು ಆರಗ – ಚಂದ್ರಗುತ್ತಿ – ಬಾರ್ಕೂರು ಪ್ರದೇಶಕ್ಕೆ ತನ್ನ ಪ್ರತಿನಿಧಿಯನ್ನಾಗಿ ನೇಮಿಸಿದ್ದನು. ನಂತರ ಪ್ರೌಢದೇವರಾಯನು ಅರಸನಾದನು. ನಂತರ ಅರಸ ವೀರ ಬುಕ್ಕಣ್ಣ ಒಡೆಯನ ಮಗ ವಿರೂಪಾಕ್ಷರಾಯ (ಕ್ರಿ. ಶ 1362-ಕ್ರಿ. ಶ 1382) ಅಥವಾ ವೀರಣ್ಣೊಡೆಯ (ವಿರುಪಣ್ಣ ಒಡೆಯ) ಆರಗ ರಾಜ್ಯದ ಪ್ರತಿನಿಧಿಯಾಗಿದ್ದನು.

ಆರಗ ನಾರಾಯಣ ಗುರುರಾಯ (ವಿಜಯನಗರದ ಪ್ರಮುಖ ಮಂತ್ರಿ)
ಆರಗ ರಾಜ್ಯದ ವ್ಯಾಪ್ತಿಯಲ್ಲಿ ಬೋಲೆಯ ಮುಮ್ಮಯ್ಯ ಎಂಬುವವನು ಸಮಾಜಘಾತುಕ ಕೆಲಸಗಳನ್ನು ಮಾಡುತ್ತಾ ಅರಸೊತ್ತಿಗೆಗೆ ತೊಂದರೆ ಕೊಡುತ್ತಿದ್ದನು. ಇದನ್ನು ಚಕ್ರವರ್ತಿ ಪ್ರೌಢದೇವರಾಯರಿಗೆ ವೀರಣ್ಣೊಡೆಯ ಪತ್ರ ಬರೆದು ತಿಳಿಸಿದನು. ಅಗ ರಾಜಧಾನಿ ಹಂಪಿಯಲ್ಲಿ ವಿಜಯನಗರ ಅರಸರ ‘ರಾಯ ಭಂಡಾರಿ’ (ಪ್ರಮುಖ ಮಂತ್ರಿ) ಆಗಿದ್ದವರು ಆರಗ ರಾಜ್ಯದವರೇ ಆದ ನಾರಾಯಣ ಗುರುರಾಯ ಎಂಬುವವರು. ನಾರಾಯಣ ಗುರುರಾಯರು ಪ್ರೌಢದೇವರಾಯರ ಅಪ್ಪಣೆ ಪಡೆದುಕೊಂಡು ವಿಜಯನಗರದಿಂದ ಆರಗ ರಾಜ್ಯಕ್ಕೆ ಸೈನ್ಯವನ್ನು ತೆಗೆದುಕೊಂಡು ಬರುತ್ತಾರೆ. ಆರಗದ ಪ್ರತಿನಿಧಿ ವೀರಣ್ಣೊಡೆಯ ಹಾಗೂ ಅವನ ದಳಪತಿ ತಿರಕಿಗೌಡರೊಂದಿಗೆ ಬೋಲೆಯ ಮುಮ್ಮಯ್ಯನ ಮೇಲೆ ದಾಳಿ ಮಾಡುತ್ತಾರೆ. ಇವರ ದಾಳಿಯನ್ನು ಎದುರಿಸಲಾಗದೆ ಬೋಲೆಯ ಮುಮ್ಮಯ್ಯನು ಶರಣಾಗುತ್ತಾನೆ. ನಾರಾಯಣ ಗುರುರಾಯರು ಅವನನ್ನು ಕ್ಷಮಿಸಿದ್ದಲ್ಲದೆ, ವಿಜಯನಗರ ಸೈನ್ಯಕ್ಕೂ ಸೇರಿಸಿಕೊಳ್ಳುತ್ತಾರೆ. ನಂತರ ಆರಗದಿಂದ ಹೊರಟ ರಾಯಭಂಡಾರಿ ನಾರಾಯಣ ಗುರುರಾಯರು ಶೃಂಗೇರಿ, ಮುಳಬಾಗಿಲು, ಶ್ರೀರಂಗಪಟ್ಟಣ ಮತ್ತು ದ್ವಾರಸಮುದ್ರವನ್ನು ಸಂದರ್ಶಿಸಿ ವಿಜಯನಗರಕ್ಕೆ ಮರಳುತ್ತಾರೆ.

ಆಡಳಿತ ವ್ಯವಸ್ಥೆ
ಈ ಆರಗ ರಾಜ್ಯದಲ್ಲಿ 18 ಕಂಪಣಗಳು (ಇಚ್ಛೆ 9 ಕಂಪಣ ಮತ್ತು ಈಳೆ 9 ಕಂಪಣ ಎಂಬ ವಿಭಾಗವಿತ್ತು) ಹಾಗೂ 3 ಪಟ್ಟಣಗಳು ಇದ್ದವು ಎಂದು ಶಾಸನಗಳು ತಿಳಿಸುತ್ತವೆ. ಬಳಗೋಡಿನ ಕ್ರಿ.ಶ. 1560ರ ಶಾಸನವೊಂದು ಆರಗ ರಾಜ್ಯದಲ್ಲಿ 50 ನಾಡುಗಳು ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಆರಗವನ್ನು ಕೇಂದ್ರವನ್ನಾಗಿಟ್ಟುಕೊಂಡು ತನ್ನ ಸುತ್ತಮುತ್ತಲಿನ ಅನೇಕ ಗ್ರಾಮಗಳ ಆಡಳಿತ ಕೇಂದ್ರವಾಗಿ ಮಧುವಂಕನಾಡು ಎಂಬ ಹೆಸರಿನಿಂದ ಖ್ಯಾತವಾಗಿತ್ತು. ಕರ್ನಾಟಕದ ಮೊದಲ ರಾಜವಂಶ ಕದಂಬರ ಬನವಾಸಿಯ ಮಧುಕೇಶ್ವರ ದೇವರ ಹೆಸರನ್ನು ಇದಕ್ಕೆ ಇಡಲಾಗಿತ್ತು ಎಂಬ ವಾದ ಇದೆಯಾದರೂ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ತೀರ್ಥರಾಜಪುರ (ಈಗಿನ ತೀರ್ಥಹಳ್ಳಿ ಪಟ್ಟಣ), ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೇಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳು ಈ ನಾಡಿನಲ್ಲಿ ಇದ್ದವು. ಈ ನಾಡಿನ ವಿಶೇಷವೆಂದರೆ ಕೆಲವು ಗ್ರಾಮಗಳ ಸಮುಚ್ಚಯವನ್ನು ‘ಬಾಗೆ’ (ಭಾಗ) ಎಂದು ಕರೆಯುತ್ತಿದ್ದರು. ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳೂರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು. ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು(2) ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.

ಮದವಳಿಗೆಯ ನಾಡು ಎಂಬ ಪ್ರದೇಶ ಇಲ್ಲಿತ್ತು ಎಂದು ಸ್ಪಷ್ಟಪಡಿಸುವ ಎರಡು ಶಾಸನಗಳು ಮೇಗರವಳ್ಳಿಯಲ್ಲಿದೆ. ಮೇಗರವಳ್ಳಿಯ ಕ್ರಿ.ಶ 08.08.1412ರ ಶಾಸನವು ಸ್ಪಷ್ಟವಾಗಿ ‘ಆರಗದ ವೇಂಠೆಯದ ಸೀತಳಿಗೆಯ ನಾಡ ಒಳಗಣ ಮದವಳಿಗೆ ನಾಡ ಒಳಗಣ ಮೇಗರವಳ್ಳಿಯ ಗ್ರಾಮ’ ಎಂದು ತಿಳಿಸುತ್ತದೆ. ಅಂದರೆ ‘ಆರಗ ರಾಜ್ಯದ ಸಾಂತಳಿಗೆ ಪ್ರಾಂತ್ಯದ ಮದವಳಿಗೆ ವಿಭಾಗದ ಗ್ರಾಮ ಮೇಗರವಳ್ಳಿ’ ಎಂದರ್ಥ. ಇದು ಈಗಿನ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ಮಾದರಿಯಂತಿದೆ. ಇದು ಆ ಸಮಯದ ಆಡಳಿತ ವ್ಯವಸ್ಥೆಗೆ ಒಂದು ಉದಾಹರಣೆಯಾಗಿದೆ. ಈ ಹಿಂದೆಯೇ ನಾಡುಗಳ ಕೇಂದ್ರವಾಗಿದ್ದ ಹೊಂಬುಜ, ಬೆಳುವೆಗಳು ಕ್ರಮೇಣ ಹೊಂಬುಜ ಸೀಮೆ ಹಾಗೂ ಬೆಳುವೆಯ ಸೀಮೆಗಳಾಗಿ ರೂಪಾಂತರಗೊಂಡಿತ್ತು. ಇನ್ನುಳಿದಂತೆ ಮೊಸರೂರು ಸೀಮೆ, ಮುತ್ತೂರು ಸೀಮೆ, ಮಾಳೂರು ಸೀಮೆ, ಸಿಡಿಯ ಚಿಕ್ಕನೂರು ಸೀಮೆ, ಕೊಳಾವರದ ಸೀಮೆ, ಬಸವಾನಿ ಸೀಮೆ, ಹಳಿವಾರ ಸೀಮೆ, ನೀರೀರಕಲ ಸೀಮೆ, ಹರಿಹರಪುರದ ಸೀಮೆಗಳು ಆರಗ ರಾಜ್ಯದಲ್ಲಿ ಅಂತರ್ಗತವಾಗಿದ್ದವು. ಇದರ ಜೊತೆಗೆ ಮಂಡಗದ್ದೆ ಸೀಮೆ, ಹಣಗೆರೆ ಸೀಮೆ ಹಾಗೂ ಹಲಸರ ಸೀಮೆಗಳು ಈ ರಾಜ್ಯದಲ್ಲಿ ಸೇರಿದ್ದವು. ಇದೆಲ್ಲವನ್ನು ಗಮನಿಸಿದಾಗ ‘ಆರಗ ರಾಜ್ಯ’ದ ಭೌಗೋಳಿಕ ವ್ಯಾಪ್ತಿಗೆ ಇಂದಿನ ಶಿವಮೊಗ್ಗ ಜಿಲ್ಲೆಯ ಹೊಸನಗರ, ಶಿವಮೊಗ್ಗ, ಸಾಗರ, ಸೊರಬ, ತೀರ್ಥಹಳ್ಳಿ ತಾಲೂಕುಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ಭಾಗಗಳು ಸೇರಿತ್ತು ಎಂದು ಊಹಿಸಬಹುದು.

ವ್ಯಾಪಾರ ಕೇಂದ್ರ ಮತ್ತು ಸುಂಕ ವ್ಯವಸ್ಥೆ
ಆರಗ ರಾಜ್ಯದಲ್ಲಿ 8 ಪೇಟೆಗಳು ಇದ್ದವು. ಕವಲೇದುರ್ಗದ 1674ರ ಶಾಸನವು ಹೀಗೆ ದಾಖಲಿಸುತ್ತದೆ – ‘ಆರಗದ ವೆಂಟೆಯಕೆ ಸಲುವ ಆರಗ, ಕೊಡಲೂರು (ಕೊಂಡ್ಲೂರು), ಯೆಡೆಹಳ್ಳಿ, ಅವಿನಹಳ್ಳಿ, ಕಾರುಊರು, ಬಿದರೂರು, ಮೊಸರೂರು, ಮಾಳೇನಹಳ್ಳಿ ಸಹಾ ಯಂಟು ಪೇಟೆಗಳಲ್ಲಿ ಅರಮನೆಯ ಸುಂಕ. ಈ ಪೇಟೆಗಳಲಿ ಅಡಕೆ, ಮೆಣಸು, ಝಲಿಪಟಿ (ಜಾಯಿಕಾಯಿ ಇರಬಹುದು), ಖೊಬರಿ, ಕವಾಡ (ಸರಂಜಾಮು) ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಯೆಂಣೆ, ತುಪ್ಪ ಕಾಯಿ, ಬೆಲ್ಲ, ವಿದುಳ (ಧಾನ್ಯ) ಮುಂತಾಗಿ…’ ಎಂದು ಶಾಸನದಲ್ಲಿ ಬರೆಯಲಾಗಿದೆ. ಈ ಗ್ರಾಮಗಳಲ್ಲಿ ಅರಮನೆಯ ಅಧಿಕಾರಿಗಳ ಸುಂಕ ಸಂಗ್ರಹಣಾ ಕೇಂದ್ರಗಳಿದ್ದವು ಎಂದು ಉಲ್ಲೇಖಿಸಲಾಗಿದೆ. ಆಗ ತಾನೇ ಭಾರತಕ್ಕೆ ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಅರಬ್ಬರು ಪಶ್ಚಿಮ ಕರಾವಳಿಯ ಮೂಲಕ ವ್ಯಾಪಾರಕ್ಕಾಗಿ ಪ್ರವೇಶಿಸಿದ್ದರು. ಈ ಎಲ್ಲಾ ವ್ಯಾಪಾರ-ವ್ಯವಹಾರಗಳಿಗೆ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಕ್ಕೆ ಆರಗವು ಮುಖ್ಯ ಹೆಬ್ಬಾಗಿಲಾಗಿತ್ತು. ಆರಗ ರಾಜ್ಯ ವ್ಯಾಪ್ತಿಯು ವಿಜಯನಗರಕ್ಕೆ ಅತೀ ಹೆಚ್ಚು ಆದಾಯ ತರುತ್ತಿದ್ದ ಪ್ರದೇಶವಾಗಿತ್ತು. ಇಲ್ಲಿ ಅರಸೊತ್ತಿಗೆಯ ತಪಾಸಣಾ ಹಾಗೂ ಸುಂಕ ಸಂಗ್ರಹಣಾ ಕೇಂದ್ರವಿತ್ತು. ಕೆಳದಿ ಹಾಗೂ ವಿಜಯನಗರ ಅರಸರ ಕಾಲದಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಪುರಾತನ ಸಂಪರ್ಕ ಮಾರ್ಗ ಈಗಿನ ಯಡೂರು ಸಮೀಪದ ಮೇಲುಸುಂಕ ಗ್ರಾಮವಾಗಿತ್ತು. ಇದು ಘಟ್ಟದ ಗಡಿಯ ಮೇಲಿದ್ದು, ಇಲ್ಲಿ ಭತ್ತದ ತಪಾಸಣಾ ಹಾಗೂ ಸುಂಕ ಸಂಗ್ರಹಣಾ ಕೇಂದ್ರವಿದ್ದುದರಿಂದ ಈ ಪ್ರದೇಶಕ್ಕೆ ಮೇಲುಸುಂಕ ಎಂಬ ಹೆಸರು ಬಂತು. ಹಾಗೆಯೇ ಘಟ್ಟದ ಕೆಳಗೆ ಕೆಳಸುಂಕ ಎಂಬ ಹಳ್ಳಿ ಇದ್ದು, ಈಗ ಅದು ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿದೆ.

ವಾಣಿಜ್ಯ ವಹಿವಾಟು ಮತ್ತು ರಫ್ತು
ಸಾಂಬಾರ ಪದಾರ್ಥಗಳು ಆರಗದ ಮೂಲಕ ಬಾರಕೂರು ಬಂದರಿಗೆ ಆಗುಂಬೆ-ಸೋಮೇಶ್ವರ ಘಾಟಿ ರಸ್ತೆ, ಮೇಲುಸುಂಕ-ತೊಂಬಟ್ಟು (ಅಮಾಸೆಬೈಲು) ಘಾಟಿ ರಸ್ತೆ ಮತ್ತು ಬಾಳೆಬರೆ (ಹುಲಿಕಲ್ಲು) ಘಾಟಿಯ ಮಣ್ಣಿನ ರಸ್ತೆಯ ಮೂಲಕ ರವಾನೆಯಾಗುತ್ತಿತ್ತು. ಬಾರಕೂರಿನಿಂದ ವಿಜಯನಗರದ ಅಧೀನದಲ್ಲಿದ್ದ ಗೋಪಕಾಪಟ್ಟಣ ಅಥವಾ ಗೋಪಿಕಾಪುರ (ಇಂದಿನ ಗೋವಾ) ಬಂದರಿನ ಮೂಲಕ ಸ್ಪೇನ್, ಪೋರ್ಚುಗಲ್, ಅರಬ್, ಇಂಗ್ಲೆಂಡ್, ಪರ್ಷಿಯಾ ಮುಂತಾದ ದೇಶಗಳಿಗೆ ರಫ್ತಾಗುತ್ತಿತ್ತು. ಆರಗ ಸಮೀಪದ ದಾವಣಿ ಬೈಲು (ದಾವಣಿ ಎಂದರೆ ಜಾನುವಾರುಗಳನ್ನು ಕಟ್ಟುವ ಹಗ್ಗ) ಎಂಬಲ್ಲಿ ಸರಕು ಸರಂಜಾಮುಗಳನ್ನು ಸಾಗಿಸುವ ಗಾಡಿಗಳ ಜಾನುವಾರುಗಳಿಗೆ (ಎತ್ತು, ಕುದುರೆ, ಆನೆ ಇತ್ಯಾದಿ) ನಿಗದಿಪಡಿಸಿದ ವಿಶ್ರಾಂತಿ ಸ್ಥಳ ಇದೆ. ಇಲ್ಲಿ ಕಪಿಲೇಶ್ವರ ದೇವಾಲಯವೂ ಇದೆ.

ವಿಜಯನಗರದ ಅರಸರಿಗೆ ಆಶ್ರಯತಾಣ
ವಿಜಯನಗರದ ಕೊನೆಯ ಅರಸು ಅರವೀಡು ವಂಶದ ಎರಡನೇ ರಂಗರಾಯ, ಬಹಮನಿ ಸುಲ್ತಾನರ ದಾಳಿ ಮತ್ತು ಆಂತರಿಕ ಕಲಹದಿಂದ ತನ್ನ ರಾಜ್ಯವನ್ನು ಕಳೆದುಕೊಂಡು ಕೆಳದಿಯ ಶಿವಪ್ಪನಾಯಕನ ಬಳಿ ಆಶ್ರಯ ಅರಸಿಕೊಂಡು ಬರುತ್ತಾನೆ. ಶಿವಪ್ಪನಾಯಕನು ರಂಗರಾಯನನ್ನು ಆರಗ ಸಮೀಪದ ಕವಲೇದುರ್ಗ ಕೋಟೆಯಲ್ಲಿ ಭದ್ರವಾಗಿ ಉಳಿಸಿಕೊಂಡು ರಕ್ಷಣೆ ನೀಡುತ್ತಾನೆ. ರಂಗರಾಯನು ಕವಲೇದುರ್ಗದಲ್ಲಿ ಚಿಕ್ಕ ವೀರಾಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ, ಆರಗದಲ್ಲಿ ದೊಡ್ಡ ವೀರಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. ಮಾಸ್ತಿಕಲ್ಲು, ವೀರಗಲ್ಲು ಹಾಗೂ ಶಿಲಾಶಾಸನಗಳು ಆರಗ ಪ್ರಾಂತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ.

ಧಾರ್ಮಿಕ ಸ್ಥಿತಿ
ವಿಜಯನಗರ ಹಾಗೂ ಕೆಳದಿಯ ಅರಸರು ಸರ್ವಧರ್ಮ ಸಹಿಷ್ಣುತೆಗೆ ಹೆಸರಾದವರು. ಇವರ ಕಾಲದಲ್ಲಿ ಹಲವಾರು ವೈಷ್ಣವ ಹಾಗೂ ಶೈವ ದೇವಾಲಯಗಳು, ಜೈನ ಬಸದಿಗಳು ಅರಗದಲ್ಲಿ ನಿರ್ಮಾಣವಾಗಿವೆ. ಇವುಗಳಲ್ಲಿ ಕಲ್ಲೇಶ್ವರ, ಅಘೋರೇಶ್ವರ, ದೊಡ್ಡ ವೀರಾಂಜನೇಯ, ವೀರಭದ್ರ, ಅಖಂಡೇಶ್ವರ, ತಿರುಪತಿ ತಿಮ್ಮಪ್ಪನ ಮೂಲ ಸ್ಥಳವಾದ ಅರುಣಗಿರಿ ವೆಂಕಟರಮಣ, ದುರ್ಗಾ ಪರಮೇಶ್ವರಿ, ಜೈನ ತೀರ್ಥಂಕರರ ಬಸದಿಗಳು, ನರಸಿಂಹ, ನೀಲಕಂಠೇಶ್ವರ, ಅಮೃತೇಶ್ವರ, ಕಲಾನಾಥೇಶ್ವರ ದೇವಾಲಯಗಳು ಪ್ರಮುಖವಾದವು.

ವಿಪ್ರರ ಸ್ಥಿತಿಗತಿಗಳು ಮತ್ತು ಅಗ್ರಹಾರಗಳು
ವಿಜಯನಗರ ಮತ್ತು ಕೆಳದಿ ಅರಸರು ವಿಪ್ರರಿಗೆ ವಾಸಿಸಲು ಅಗ್ರಹಾರಗಳು ಮತ್ತು ದೇವಸ್ಥಾನಗಳನ್ನು ನಿರ್ಮಿಸಿ ದಿನನಿತ್ಯ ಪೂಜೆ, ಸಂಗೀತ, ವೇದಪಾಠ, ಸಾಹಿತ್ಯ ಸಂಬಂಧೀ ಚಟುವಟಿಕೆಗಳು ನಡೆಯುವಂತೆ ವ್ಯವಸ್ಥೆ ಮಾಡಿದ್ದರು. ಭೂಮಿ, ಗದ್ದೆ ಮತ್ತು ತೋಟಗಳನ್ನು ಅಗ್ರಹಾರಗಳ ಆದಾಯಕ್ಕಾಗಿ ಉಂಬಳಿಯಾಗಿ ನೀಡಿದ್ದರು. ಬೇರೆ ಬೇರೆ ಪ್ರದೇಶಗಳಿಂದ ವಿಪ್ರರನ್ನು ಅಗ್ರಹಾರಗಳಿಗೆ ಕರೆತಂದು ಅವರಿಗೆ ವಾಸಿಸಲು ಮತ್ತು ನಿತ್ಯ ಅನುಷ್ಠಾನಗಳನ್ನು ನಿರ್ವಹಿಸಲು ಸೌಕರ್ಯಗಳನ್ನು ನೀಡಿದ್ದರು. ಭಾರತೀಪುರ ಹಾಗೂ ಹುಂಚದ ಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ 60 ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ. ಅಗಳಬಾಗಿಲು ಹತ್ತಿರದ ಸದಾಶಿವ ಅಗ್ರಹಾರವು 1545ರಲ್ಲಿ ಮಂತ್ರಿ ಮಾದಪ್ಪನಿಂದ ವಿಜಯನಗರದ ಅರಸನಾಗಿದ್ದ ಸದಾಶಿವರಾಯನ ಹೆಸರಿನಲ್ಲಿ ಸ್ಥಾಪನೆಯಾಯಿತು. ಈ ಅಗ್ರಹಾರ ಆರಗ ರಾಜ್ಯದ ಅಗ್ರಹಾರಗಳಿಗೆಲ್ಲಾ ಕೇಂದ್ರವಾಗಿದ್ದು ಇದನ್ನು ‘ಯಜಮಾನ ಅಗ್ರಹಾರ’ ಎಂದು ಶಾಸನದಲ್ಲಿ ಬರೆಯಲಾಗಿದೆ. ಆರಗ ನಾಡಿನಲ್ಲಿ ವಿರೂಪಾಂಬಿಕಾಪುರ, ವಿರೂಪಾಕ್ಷಪುರ, ನಾಗಸಮುದ್ರ, ಅಭಿನವ ಗೋಪಿನಾಥಪುರ, ಮಾಯಿಸೆ, ಬುಕ್ಲಾಪುರ, ಸದಾಶಿವ, ಬೊಮ್ಮರಸಯ್ಯ, ತ್ರಿಯಂಬಕಪುರ, ಶಿವರಾಜಪುರ, ಅರಳಾಪುರ, ಅರಳಸುರಳಿ, ಅಕ್ಲಾಪುರ ಮುಂತಾದ ಪ್ರಮುಖ ಅಗ್ರಹಾರಗಳಿದ್ದವು. 1404ನೆಯ ಇಸವಿಯಲ್ಲಿ ವಿಜಯನಗರದ ಅರಸ ಎರಡನೇ ಹರಿಹರರಾಯನು ಮರಣ ಹೊಂದಿದಾಗ ಅವರಿಗೆ ಮುಕ್ತಿ ದೊರಕಲೆಂದು ಆರಗದ ರಾಜ್ಯಪಾಲ ವಿಠಣ್ಣ ಒಡೆಯರ್ ಸಾಲೂರಿನ ಹತ್ತಿರ ‘ಮುಕ್ತಿಹರಿಹರಪುರ’ ಅಗ್ರಹಾರವನ್ನು ಸ್ಥಾಪಿಸಿದರು. ತೂದೂರು ಹತ್ತಿರದ ಗಬಡಿಯಲ್ಲಿ ವಿಜಯನಗರದ ಅರಸ ಕೃಷ್ಣದೇವರಾಯನ ತಾಯಿ ನಾಗಲಾಂಬಿಕಾ ದೇವಿಯ ಹೆಸರಿನಲ್ಲಿ ನಾಗಲಾಪುರ ಅಗ್ರಹಾರವನ್ನು ಸ್ಥಾಪಿಸಲಾಯಿತು. ಆರಗದ ರಾಜನಾಗಿದ್ದ ವಿರೂಪಾಕ್ಷರಾಯನ ಹೆಸರಿನಲ್ಲಿ ವಿರೂಪಾಕ್ಷಪುರ (ವಿರುಪಾಪುರ) ಅಗ್ರಹಾರವನ್ನು ಸ್ಥಾಪಿಸಲಾಯಿತು.

ಆರಗ ರಾಜ್ಯದ ನಿರ್ಗಮನ
ಸೋರಣ್ಣ ಒಡೆಯ, ಜನ್ನರಸ ರಾಯ, ವಿಶ್ವಪ್ಪ ಒಡೆಯ, ಲಿಂಗಣ್ಣ ಒಡೆಯ, ಸಿರಿಗಿನಾಥ ಒಡೆಯ, ದೇವಪ್ಪ ದಂಡನಾಯಕ ಸೇನಬೋವ (ಸೇನಾಪತಿ ಮತ್ತು ಮಂತ್ರಿ), ಹರಿಯಪ್ಪ, ಸಿಂಗರಸ ಮುಂತಾದವರ ಆಳ್ವಿಕೆಗೊಳಪಟ್ಟ ಆರಗ ವಿಜಯನಗರದ ಪ್ರಾಮುಖ್ಯತೆ ಕಡಿಮೆಯಾದಂತೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾ ಬಂತು. ಕ್ರಿ.ಶ.1500 ರಲ್ಲಿ ವಿಜಯನಗರದ ಕೃಷ್ಣದೇವರಾಯನು ಕೆಳದಿಯ ಚೌಡಪ್ಪ ನಾಯಕನನ್ನು ಸಾಮಂತ ರಾಜನನ್ನಾಗಿ ಮಾಡಿದನು. ವಿಜಯನಗರ ಸಾಮ್ರಾಜ್ಯದ ಪತನಾನಂತರ ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಬಂತು ಎಂದು ಕ್ರಿ.ಶ. 1695ರ ಶಾಸನದಲ್ಲಿ ದಾಖಲಾಗಿದೆ. ಕೆಳದಿ ಸದಾಶಿವನಾಯಕನು ವಿಜಯನಗರದ ಅರಸರ ಅನುಮತಿ ಪಡೆದು ಆರಗದಿಂದ ಕೆಳದಿಗೆ ತನ್ನ ಶಕ್ತಿಕೇಂದ್ರವನ್ನು ವರ್ಗಾಯಿಸಿದ ನಂತರ ಆರಗವು ತನ್ನ ಮಹತ್ವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೆಳದಿಯ ಅರಸರಾದ ವೆಂಕಟಪ್ಪ ನಾಯಕ, ಸದಾಶಿವ ನಾಯಕ, ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಮುಂತಾದವರು ಇಲ್ಲಿ ಆಳಿದ್ದಾರೆ. ಕೆಳದಿ ಅರಸರ ನಂತರ ಈ ಪ್ರದೇಶ ಹೈದರಾಲಿ-ಟಿಪ್ಪು ಸುಲ್ತಾನ್ ಕೈವಶವಾಯಿತು. ಕೆಳದಿ-ಇಕ್ಕೇರಿ, ಬಿದನೂರು-ನಗರ ಮತ್ತು ಕವಲೇದುರ್ಗದಲ್ಲಿ ಶಕ್ತಿಕೇಂದ್ರಗಳು ಬೆಳೆದಾಗ ಆರಗದ ಪ್ರಾಮುಖ್ಯತೆ ಸಹಜವಾಗಿ ಕಡಿಮೆಯಾಗುತ್ತಾ ಬಂತು. 1776ನೇ ಇಸವಿಯಲ್ಲಿ ಹೈದರಾಲಿಯು ಆಡಳಿತದ ದೃಷ್ಟಿಯಿಂದ ಆರಗವನ್ನು ‘ಹೈದೆರ್ ನಗರ (ಬಿದನೂರು) ಸೀಮೆ’ಯ ವ್ಯಾಪ್ತಿಯ 48 ಗಡಿಗಳಲ್ಲೊಂದಾಗಿ ವಿಭಾಗಿಸಿದನು. ನಂತರ ಸ್ವಲ್ಪ ಕಾಲ ಮರಾಠರ ಹಾಗೂ ಮೈಸೂರು ಒಡೆಯರ ಆಡಳಿತಕ್ಕೊಳಪಟ್ಟು ಬ್ರಿಟಿಷ್ ಸರ್ಕಾರದ ಆಡಳಿತದಡಿ ಬಂತು. ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದ ಭಾಗವಾಯಿತು.

ಪುರಂದರ ದಾಸರು ಹುಟ್ಟಿದ್ದು ಇಲ್ಲಿ !
ಹೌದು, ಕರ್ನಾಟಕ ಸಂಗೀತ ಪಿತಾಮಹ, ಕರ್ನಾಟಕ ಶಾಸ್ತ್ರೀಯ ಸಂಗೀತದ ಆಧಾರ ಸ್ಥಂಭಗಳಲ್ಲಿ ಒಬ್ಬರಾದ, ಭಕ್ತಿ ಪಂಥದ ಹರಿಕಾರ ಪುರಂದರ ದಾಸರು ಆರಗದಲ್ಲಿ ಜನಿಸಿದರು. ಇದುವರೆಗೂ ಪುರಂದರ ದಾಸರ ಹುಟ್ಟೂರು ಎಂದು ನಂಬಿದ್ದ ಪುಣೆ ಬಳಿ ಇರುವ ಪುರಂದರಗಡ ಅಥವಾ ಬಳ್ಳಾರಿಯ ಹೊಸಪೇಟೆ ಎಂಬ ಜಿಜ್ಞಾಸೆಗೆ ಈಗಾಗಲೇ ತೆರೆ ಬಿದ್ದಿದೆ. ಪುರಂದರ ದಾಸರ ಮಾತೃ ಭಾಷೆ ತೆಲುಗು ಎಂಬ ವಾದವೂ ಇತ್ತು. 2018ರಲ್ಲಿ ಸರಕಾರ ಪುರಂದರದಾಸರ ಹುಟ್ಟೂರಿನ ಬಗ್ಗೆ ಅಧ್ಯಯನ ನಡೆಸಲು ಐದು ಜನರ ಸಮಿತಿ ರಚಿಸಿತ್ತು. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನೇಮಕ ಮಾಡಿದ್ದ ಈ ತಂಡದಲ್ಲಿ ಅಧ್ಯಕ್ಷರಾಗಿ ಹಿರಿಯ ಸಂಗೀತ ವಿದ್ವಾಂಸ ಪದ್ಮಭೂಷಣ ಆರ್‌.ಕೆ.ಪದ್ಮನಾಭ, ಸದಸ್ಯರಾಗಿ ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌, ವಿದ್ವಾಂಸ ಎ. ವಿ. ನಾವಡ, ವಿದ್ವಾಂಸ ವೀರಣ್ಣ ರಜೋರಾ, ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಇದ್ದು, ಶಿವಾನಂದ ವಿರಕ್ತಮಠ ಸಂಚಾಲಕರಾಗಿದ್ದರು. ಈ ಸಮಿತಿಯು ಆರಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐತಿಹಾಸಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ‘ಆರಗದ ಕ್ಷೇಮಪುರ (ಕೇಶವಾಪುರ) ಪುರಂದರ ದಾಸರ ಹುಟ್ಟೂರು’ ಎಂದು ಅಂತಿಮ ವರದಿ ನೀಡಿದೆ. ಸರಕಾರದ ಅಧಿಕೃತ ಘೋಷಣೆ ಬಾಕಿ ಇದ್ದು, ಆರಗಕ್ಕೆ ಪುರಂದರ ದಾಸರ ಸ್ಮಾರಕ ಹಾಗೂ ಐತಿಹಾಸಿಕ ಸ್ಥಳದ ಸ್ಥಾನಮಾನವನ್ನೂ ನೀಡಬೇಕಾಗಿದೆ. 1987ರಲ್ಲೇ ಕಟರಾಳ ಕೃಷ್ಣರಾಯರು ಆರಗವೇ ಪುರಂದರದಾಸರ ಹುಟ್ಟೂರೆಂದು ಪ್ರತಿಪಾದಿಸಿದ್ದರು. ಕ್ರಿ.ಶ 1484ರಲ್ಲಿ ಜನಿಸಿದ ಪುರಂದರ ದಾಸರು ಕ್ರಿ.ಶ 1565ರಲ್ಲಿ ಕಾಲವಾದರು. ಪುರಂದರ ದಾಸರ ತಂದೆಯ ಹೆಸರು ವರದಪ್ಪ ನಾಯಕ ಹಾಗೂ ತಾಯಿಯ ಹೆಸರು ಲಕ್ಷ್ಮೀದೇವಿ. ಪುರಂದರ ದಾಸರು ನಾರದರ ಅವತಾರ ಎಂದು ನಂಬಲಾಗಿದೆ. ಪುರಂದರ ದಾಸರ ಮೂಲ ಹೆಸರು ಶ್ರೀನಿವಾಸ ನಾಯಕ (ನವಕೋಟಿ ನಾರಾಯಣ), ವೃತ್ತಿಯಲ್ಲಿ ವಜ್ರ ವೈಢೂರ್ಯಗಳ ವರ್ತಕರು. ಅಂದರೆ ವಿಜಯನಗರ ಕಾಲದ ಸಮೃದ್ಧತೆಯ ಸಂಕೇತವೂ ಈ ಸಂಗತಿಯಲ್ಲಿದೆ. ಇವರ ಪತ್ನಿ ಸರಸ್ವತಿಬಾಯಿ ಮತ್ತು ಮಕ್ಕಳು ವರದಪ್ಪ, ಗುರುರಾಯ, ಅಭಿನವಪ್ಪ ಮತ್ತು ಮಧ್ವಪತಿ. ಜೀವನದಲ್ಲಿ ವೈರಾಗ್ಯ ಹೊಂದಿ ಹರಿ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ವಿಜಯನಗರದ ಹಂಪೆಗೆ ತೆರಳಿದ ಶ್ರೀನಿವಾಸ ನಾಯಕರಿಗೆ ವ್ಯಾಸರಾಜರು ಹರಿದಾಸ ದೀಕ್ಷೆ ನೀಡಿ ‘ಪುರಂದರ ವಿಠಲ’ ಎಂಬ ಅಂಕಿತನಾಮ ನೀಡಿದರು. ಪುರಂದರದಾಸರು ಸುಮಾರು 4.75 ಲಕ್ಷ ಕೀರ್ತನೆ ರಚಿಸಿದ್ದು ಹಾಗೂ 25 ಸಾವಿರ ಕೀರ್ತನೆಗಳನ್ನು ಇವರ ಮಗ ಮಧ್ವಪತಿದಾಸರು ಬರೆದರು ಎಂಬ ಪ್ರತೀತಿ ಇದೆ. ಆದರೆ ಇವುಗಳಲ್ಲಿ ಸುಮಾರು ಐದು ಸಾವಿರ ಕೀರ್ತನೆಗಳು ಮಾತ್ರ ಈಗ ಲಭ್ಯವಾಗಿದೆ. ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ಗುರುಗಳಾದ ವ್ಯಾಸರಾಜರೇ ಹೊಗಳಿದ್ದಲ್ಲದೇ ಅವರ ಕೃತಿಗಳಿಗೆ ‘ಪುರಂದರೋಪನಿಷತ್’ ಎಂಬ ಗೌರವವನ್ನೂ ನೀಡಿದ್ದಾರೆ. ಆರಗ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿದ್ದನ್ನು ಇತಿಹಾಸ ಹೇಳುತ್ತದೆ. ಅರಸರು ವರ್ತಕರಿಗಾಗಿಯೇ ವಿಶಾಲ ಜಾಗದ ವ್ಯವಸ್ಥೆ ಮಾಡಿದ್ದು, ಈಗಲೂ ಇಲ್ಲಿ ಕೇಶವಾಪುರ, ವರ್ತೇಕೇರಿ (ವ್ಯಾಪಾರ ಸ್ಥಳ), ಸಂತೇವೇರಿ (ಶಾಂತವೇರಿ), ವಿಠಲಗುಡಿ, ಕಾಳಮ್ಮನಗುಡಿ ಎಂಬ ಹೆಸರಿನ ಪ್ರದೇಶಗಳಿವೆ. ಗೋಪಿನಾಥ ಹೊಳೆ, ವಿಠಲಯ್ಯನ ಗದ್ದೆ, ವಿಠಲನ ಗುಂಡಿ, ಅರುಣಗಿರಿ ವೆಂಕಟರಮಣ ದೇವಸ್ಥಾನವೂ ಇದೆ. ಪುರಂದರ ದಾಸರಿಗೆ ವಿಜಯನಗರದ ಅರಸರು ಉಂಬಳಿಯಾಗಿ ನೀಡಿದ್ದ ಗದ್ದೆಗಳ ಕಾರಣ ಈ ಭಾಗದಲ್ಲಿ ‘ದಾಸನಗದ್ದೆ’ ಎಂಬ ಎರಡು ಊರುಗಳು ಸಹಾ ಇವೆ.

ಹೀಗೆ ಆರಗವು ಕರ್ನಾಟಕದ ಒಂದು ಐತಿಹಾಸಿಕ ರಾಜಧಾನಿ ಎಂದರೆ ಅತಿಶಯೋಕ್ತಿಯಲ್ಲ. ಈ ಬಗ್ಗೆ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಾಯ ಇಲಾಖೆ, ಸಂಗೀತ ಅಕಾಡೆಮಿ, ಇತಿಹಾಸ ಅಕಾಡೆಮಿ, ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳು ಒಂದು ವಿಸ್ತೃತ ಅಧ್ಯಯನ ನಡೆಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ದಾಖಲಿಸಬೇಕಾಗಿದೆ. ಹಾಗೆಯೇ ಐತಿಹಾಸಿಕ ಪುರಂದರ ದಾಸ ಸ್ಮಾರಕ, ವಸ್ತುಸಂಗ್ರಹಾಲಯ, ಪಾಳುಬಿದ್ದಿರುವ ಹತ್ತಾರು ದೇವಾಲಯ ಹಾಗೂ ಬಸದಿಗಳ ಜೀಣೋದ್ಧಾರಗಳನ್ನು ಮಾಡಿ ಭಾರತದ ಪ್ರವಾಸಿ ಭೂಪಟದಲ್ಲಿ ಪ್ರಮುಖ ಸ್ಥಾನವನ್ನೂ ನೀಡಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ…

✍️ ರಾಘವೇಂದ್ರ ಅಡಿಗ ತೀರ್ಥಹಳ್ಳಿ
ಮೊ: 9164742218
ಇ : adigatvr@gmail.com

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಆಗುಂಬೆ ಘಾಟ್ ಮೇಲ್ದರ್ಜೆಗೆ ಕೇಂದ್ರದ ಸಮ್ಮತಿ: ಸಂಸದ ರಾಘವೇಂದ್ರರ ಪ್ರಯತ್ನಕ್ಕೆ ಫಲ.

B. Y. Raghavendra ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ...

Dhananjaya ಶಿವಮೊಗ್ಗ “ಜೆಸಿ” ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಚಿತ್ರ ವೀಕ್ಷಣೆ.

Dhananjaya ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಜೆಸಿ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ...

Marikamba Jatra 2026 ಶಿವಮೊಗ್ಗದ ಮಾರಿಕಾಂಬ ಜಾತ್ರೆ ವಿಶೇಷ: ಟಗರು ಕಾಳಗದ ಅಂಕಣ ಪೂಜೆ.

Marikamba Jatra 2026 ನಮ್ಮೂರ ಬಳಗ ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ...

Shimoga News ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಎನ್ಎಸ್ಎಸ್ ಮಹತ್ತರ ಪಾತ್ರವಹಿಸುತ್ತದೆ.- ಪ್ರೊ.ಬಿ.ವಸಂತಕುಮಾರ್.

Shimoga News ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ಅರಿವು ಆಗುವುದರ ಜತೆಯಲ್ಲಿ ಸೇವಾ...