Wednesday, February 11, 2026
Wednesday, February 11, 2026

Bhagavad Gita ಭಗವದ್ಗೀತೆ ಮತ್ತು ಅಪರಾಧ ಶಾಸ್ತ್ರ…ಮಾಲಿಕೆಭಾಗ-4. ( ಅಂತಿಮ ಕಂತು)

Date:

ಲೇ: ಡಾ.ರಾಮಕೃಷ್ಣ ಮುದ್ದೇಪಾಲ.
” ಸರ್ವರಿಗೂ ಭವದ್ಗೀತೆ”

Bhagavad Gita ಗೀತೆಯ ಬೋಧೆ ಕರ್ತವ್ಯ ಕರ್ಮದ ಪವಿತ್ರತೆಯನ್ನು ಒತ್ತಿ ಹೇಳುತ್ತದೆ. ಅಪರಾಧ ತಡೆ, ಅಪರಾಧ ಮತ್ತು ಅಪರಾಧಿಗಳ ಪತ್ತೆ, ಸಮಾಜದಲ್ಲಿ ಶಾಂತಿ ಪಾಲನೆಯ ಜವಾಬ್ದಾರಿಯನ್ನು ಹೊತ್ತಿರುವ ಆರಕ್ಷಕರು ಭಗವದ್ಗೀತೆಯಿಂದ ಪ್ರೇರೇಪಣೆ ಪಡೆದರೆ ಪ್ರಾಮಾಣಿಕತೆ, ಸತ್ಯನಿಷ್ಠೆ, ನಿರಪೇಕ್ಷತೆ, ನ್ಯಾಯ ಸಂವೇದನೆ ಮತ್ತು ಆತ್ಮಸಂಯಮಗಳೊಂದಿಗೆ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ಕಾರ್ಯನಿರ್ವಹಿಸಿದರೆ ಅಪರಾಧ ನಿಯಂತ್ರಣ ಸಾಧ್ಯ. ಭಗವದ್ಗೀತೆಯ ಉಪದೇಶಗಳು ಆರಕ್ಷಕಸೇವೆಯ ಮೂಲಸಿದ್ಧಾಂತಗಳೊಂದಿಗೆ ತಾಳೆಯಾಗುತ್ತವೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದರೊಂದಿಗೆ ಅವರನ್ನು ಪರಿವರ್ತಿಸಲು ಆರಕ್ಷಕರು ಮತ್ತು ಕಾರಾಗೃಹ ಇಲಾಖೆಯವರು ಶ್ರಮಿಸಬೇಕು.
ಅಪರಾಧಿಗಳಿಗೆ ಭಗವದ್ಗೀತೆ: ಬಾಲಾಪರಾಧಿಗಳಿಗೆ, ಸಾಧಾರಣ ಅಪರಾಧಿಗಳಿಗೆ, ರೂಢಿಗತ ಅಪರಾಧಿಗಳಿಗೆ, ಸಾಂದರ್ಭಿಕ ಅಪರಾಧಿಗಳಿಗೆ, ಆರೋಪಿಗಳಿಗೆ ಮತ್ತು ವಿಚಾರಣಾಧೀನ ಕೈದಿಗಳಿಗೆ ಭಗವದ್ಗೀತೆಯ ಶಿಕ್ಷಣ ಪರಿವರ್ತನೆಯ ದಾರಿದೀಪವಾಗಬಹುದು.
ಕೇವಲ ಶಿಕ್ಷೆ ನೀಡುವುದು ನ್ಯಾಯಾಂಗ ವ್ಯವಸ್ಥೆಯ ಉದ್ದೇಶವಲ್ಲ. ಅಪರಾಧಿಗಳನ್ನು ಪರಿವರ್ತಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ನ್ಯಾಯಾಂಗ ವ್ಯವಸ್ಥೆಯ ಆಶಯ. ಆದ್ದರಿಂದ ಕಾರಾಗೃಹ ಇಲಾಖೆಯನ್ನು ಇದೀಗ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಎಂದು ಕರೆಯಲಾಗುತ್ತಿದೆ.
ಭಾರತದ ಹಲವು ಕಾರಾಗೃಹಗಳಲ್ಲಿ ಪುನರ್ವಸತಿ ಮತ್ತು ನೈತಿಕ ಸುಧಾರಣೆಯ ಭಾಗವಾಗಿ ಕೈದಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುತ್ತಿದೆ. ಇವುಗಳಿಂದ ಕೈದಿಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿರುತ್ತದೆ. ದೆಹಲಿಯ ತಿಹಾರ ಜೈಲಿನಲ್ಲಿ ಕೈದಿಗಳಲ್ಲಿ ಕ್ರೋಧ ಮತ್ತು ಆಕ್ರಮಣಕಾರೀ ಪ್ರವೃತ್ತಿ ತಗ್ಗಿ ಶಿಸ್ತಿನಲ್ಲಿ ಸುಧಾರಣೆಯಾಗಿರುವುದನ್ನು ದಾಖಲಿಸಲಾಗಿದೆ. ಅಲ್ಲದೇ ಕೈದಿಗಳು ಪಶ್ಚಾತ್ತಾಪ ಪ್ರಜ್ಞೆ ಹೊಂದಿ ಆಂತರಿಕ ಶಾಂತಿಯ ಅನುಭೂತಿ ಪಡೆದಿದ್ದಾರೆ.
ಹಾಗೇ ಪುಣೆಯಲ್ಲಿರುವ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಭಗವದ್ಗೀತೆಯ ಪ್ರಯೋಗದಿಂದ ಕೈದಿಗಳಲ್ಲಿ ಹಿಂಸಾ ಪೃವೃತ್ತಿ ತಗ್ಗಿ ಅವರ ವರ್ತನೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಉತ್ತರ ಪ್ರದೇಶ ಮತ್ತು ಗುಜರಾತ ರಾಜ್ಯಗಳ ಕಾರಾಗೃಹಗಳಲ್ಲಿ ಕೈದಿಗಳಿಗೆ ಭಗವದ್ಗೀತೆಯನ್ನು ಬೋಧಿಸಿ ಉತ್ತಮ ಫಲಿತಾಂಶ ಪಡೆಯಲಾಗಿದೆ.
ಅಮೆರಿಕ, ಬ್ರಿಟನ್ ಮತ್ತು ರಶಿಯಾ ದೇಶಗಳ ಕೆಲವು ಕಾರಾಗೃಹಗಳ ಕೈದಿಗಳಲ್ಲಿ ಭಗವದ್ಗೀತೆಯ ಶಿಕ್ಷಣದಿಂದ ಪರಿವರ್ತನೆ ಕಂಡುಬಂದಿರುತ್ತದೆ. ಭಗವದ್ಗೀತೆಯ ಶಿಕ್ಷಣವನ್ನು ದೇಶದ ಎಲ್ಲ ಕಾರಾಗೃಹಗಳ ಕೈದಿಗಳಿಗೆ ವಿಸ್ತರಿಸುವ ಅವಶ್ಯಕತೆಯಿದೆ.

Bhagavad Gita ಯುವಜನತೆಗೆ ಮತ್ತು ಮಕ್ಕಳಿಗೆ ಭಗವದ್ಗೀತೆ: ಅಪರಾಧಶಾಸ್ತ್ರೀಯ ಅಧ್ಯಯನಗಳಿಂದ ಕಂಡುಬಂದಿರುವ ಅಂಶವೆಂದರೆ ಅಪರಾಧ ಪ್ರವೃತ್ತಿಯು ೧೩ ರಿಂದ ೩೦ ರ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪೋಷಕರು ಮನೆಯಲ್ಲಿ ಭಗವದ್ಗೀತೆಯನ್ನು ಬೋಧಿಸಿದರೆ ಸಮಾಜದಲ್ಲಿ ಅಪರಾಧ ನಿಯಂತ್ರಣ ಸಾಧ್ಯ. ಉತ್ತಮ ಆಹಾರ, ವಿಹಾರ, ಸಂಸ್ಕಾರಯುತ ಜೀವನ ಶೈಲಿಯೊಂದಿಗೆ, ಅಪರಾಧಕ್ಕೆ ಪೂರಕವಾಗುವಂತಹ ಮದ್ಯಪಾನ ಮತ್ತು ಮಾದಕದ್ರವ್ಯಸೇವನೆಯಿಂದ ದೂರವಿರಲು ಯುವಜನತೆಯನ್ನು ಪ್ರೇರೇಪಿಸಬೇಕಿದೆ.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸುI
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾII೬.೧೭II
ಆಹಾರ ವಿಹಾರಗಳಲ್ಲಿ, ಕರ್ಮಗಳಲ್ಲಿ ಮತ್ತು ನಿದ್ರೆ-ಎಚ್ಚರಗಳಲ್ಲಿ ಮಿತವಾಗಿರುವವನಿಗೆ ದುಃಖನಾಶಕವಾದ ಯೋಗವು ಉಂಟಾಗುವುದು.

ಅಪರಾಧಶಾಸ್ತ್ರ ಹಲವು ಸ್ತರಗಳಲ್ಲಿ ಅಪರಾಧ ನಿಯಂತ್ರಣವನ್ನು ಸೂಚಿಸುತ್ತದೆ. ಆದ್ದರಿಂದ ವಿವಿಧ ಸ್ತರಗಳಲ್ಲಿ ಭಗವದ್ಗೀತೆಯನ್ನು ಪ್ರಯೋಗಿಸುವುದು ಒಳಿತು.
೧. ವ್ಯಕ್ತಿ
೨. ಕುಟುಂಬ
೩. ಸಮಾಜ
೪. ಆರಕ್ಷಕರು
೫.ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು
೫. ನ್ಯಾಯ ವ್ಯವಸ್ಥೆ.
ಸರ್ವರಿಗೂ ಭಗವದ್ಗೀತೆ: ಅಪರಾಧಶಾಸ್ತ್ರದ ಮೂಲ ಪ್ರಶ್ನೆಯಾದ ಮನುಷ್ಯ ಯಾಕೆ ಅಪರಾಧ ಮಾಡುತ್ತಾನೆ? ಎನ್ನುವುದನ್ನು ಭಗವದ್ಗೀತೆಯು ಬಹು ಆಯಾಮಗಳಲ್ಲಿ ವಿಶ್ಲೇಷಿಸಿ ನಿಖರವಾದ ಉತ್ತರವನ್ನು ನೀಡುತ್ತದೆ. ಅಪರಾಧವೆನ್ನುವ ರೋಗಕ್ಕೆ ಸಮಗ್ರವಾದ ಮತ್ತು ಉಪಯುಕ್ತವಾದ ಚಿಕಿತ್ಸೆಯನ್ನು ಭಗವದ್ಗೀತೆ ನೀಡುವುದರಿಂದ ಅದು ಅಪರಾಧ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಒದಗಿಸುತ್ತದೆ. ಆದ್ದರಿಂದ ಪರಮಪೂಜ್ಯ ಶ್ರೀಗಳವರ ಆಶಯದಂತೆ ಯಾವದೇ ಜಾತಿ ಮತ ಲಿಂಗಭೇದವಿಲ್ಲದೇ ಸಮಾಜದ ಸರ್ವರಿಗೂ ಭಗವದ್ಗೀತೆಯ ತತ್ವಜ್ಞಾನ ಲಭ್ಯವಾಗುವಂತೆ ನಾವೆಲ್ಲರೂ ಪ್ರಯತ್ನಶೀಲರಾಗೋಣ.

(ದಿನಾಂಕ 18.11.2025 ರಂದು ಶಿವಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಲೇಖಕರು ಮಂಡಿಸಿದ ಪ್ರಬಂಧದ
ಸಂಕ್ಷಿಪ್ತ ಲೇಖನರೂಪ.)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಆಗುಂಬೆ ಘಾಟ್ ಮೇಲ್ದರ್ಜೆಗೆ ಕೇಂದ್ರದ ಸಮ್ಮತಿ: ಸಂಸದ ರಾಘವೇಂದ್ರರ ಪ್ರಯತ್ನಕ್ಕೆ ಫಲ.

B. Y. Raghavendra ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆಗೇರಿಸಲು ಮುಂದಾದ ಕೇಂದ್ರ...

Dhananjaya ಶಿವಮೊಗ್ಗ “ಜೆಸಿ” ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಚಿತ್ರ ವೀಕ್ಷಣೆ.

Dhananjaya ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಜೆಸಿ ಸಿನಿಮಾವನ್ನು ಸ್ಯಾಂಡಲ್‌ವುಡ್‌ನ...

Marikamba Jatra 2026 ಶಿವಮೊಗ್ಗದ ಮಾರಿಕಾಂಬ ಜಾತ್ರೆ ವಿಶೇಷ: ಟಗರು ಕಾಳಗದ ಅಂಕಣ ಪೂಜೆ.

Marikamba Jatra 2026 ನಮ್ಮೂರ ಬಳಗ ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ...

Shimoga News ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಎನ್ಎಸ್ಎಸ್ ಮಹತ್ತರ ಪಾತ್ರವಹಿಸುತ್ತದೆ.- ಪ್ರೊ.ಬಿ.ವಸಂತಕುಮಾರ್.

Shimoga News ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ಅರಿವು ಆಗುವುದರ ಜತೆಯಲ್ಲಿ ಸೇವಾ...