ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಡಳಿತದ ನಿಯಂತ್ರಣದಲ್ಲಿ ಹಾಗೂ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕನ್ನಡ ಭಾಷಾನೀತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಅನುಷ್ಟಾನದಲ್ಲಿ ಲೋಪದೋಷಗಳು ಕಂಡುಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಲಾಗುವ ಸಭೆ-ಸಮಾರಂಭಗಳ ತಿಳುವಳಿಕೆಯನ್ನು ಕನ್ನಡದಲ್ಲಿಯೇ ಅಚ್ಚುಹಾಕಿಸಿ ಸಂಬಂಧಿಸಿದವರಿಗೆ ತಲುಪಿಸಲು ಸೂಚಿಸಲಾಗುವುದು ಎಂದ ಅವರು, ಪ್ರತಿ ಕಚೇರಿಯಿಂದ ನಡೆಸಲಾಗುವ ಪತ್ರ ವ್ಯವಹಾರಗಳೂ ಕನ್ನಡದಲ್ಲಿಯೇ ಇರುವಂತೆ ಸೂಚಿಸಲಾಗುವುದು ಎಂದರು.
ಪ್ರತಿ ನಾಮಫಲಕಗಳ ಮೇಲೆ ಆಯಾ ಊರಿನ ಹೆಸರನ್ನು ಬರೆದಿರಬೇಕು. ರಾಜ್ಯದ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಭಾಷಾನೀತಿಯ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ನೂತನವಾಗಿ ನೇಮಕಗೊಂಡಿರುವ ಜಾಗೃತಿ ಸಮಿತಿ ಸದಸ್ಯರುಗಳ ಸಲಹೆ-ಸಹಕಾರವನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಡಾ|| ಎ.ಬಿ.ರಾಮಚಂದ್ರ ಅವರು ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ನಿರ್ವಹಿಸುವ ಪ್ರತಿ ಕಡತಗಳು, ಅಧಿಕಾರಿಗಳು ಬರೆಯುವ ಟಿಪ್ಪಣಿಗಳೂ ಸಹ ಆಂಗ್ಲಭಾಷೆಯಲ್ಲಿರುವುದನ್ನು ಗಮನಿಸಲಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕನ್ನಡ ಅನುಷ್ಟಾನಕ್ಕೆ ತೊಡಕಾಗಿದೆ ಎಂದರು.
ಸಾಂಸ್ಕೃತಿಕವಾಗಿ, ಭಾಷಿಕವಾಗಿ ಕನ್ನಡ ಭಾಷೆಯ ಅಸ್ಮಿತತೆಯ ಕೇಂದ್ರ ಬಿಂದು ಶಿವಮೊಗ್ಗ ಜಿಲ್ಲೆ. ಇಲ್ಲಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಕಾರ್ಯ ಆರಂಭಗೊಳ್ಳಬೇಕು. ಆದ್ದರಿಂದ ಪ್ರತಿ ತಿಂಗಳಲ್ಲಿ ಒಂದು ದಿನ ಮೂರು ಕಚೇರಿಗಳಿಗೆ, ಶಾಲೆ-ಕಾಲೇಜು ವಿಶ್ವವಿದ್ಯಾಲಯಗಳಿಗೆ ಜಾಗೃತಿ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ನಗರದಲ್ಲಿನ ಅಂಗಡಿ-ಮುಂಗಟ್ಟುಗಳ ನಾಮಫಲಕಗಳೂ ಸಹ ಶೇ.60ಕನ್ನಡದಲ್ಲಿರಬೇಕೆಂಬ ನಿಯಮವಿದೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನೂತನ ಅಂಗಡಿಗಳಿಗೆ ಹಾಗೂ ಅದರ ನವೀಕರಣ ಸಂದರ್ಭದಲ್ಲಿ ಅಂಗಡಿಯ ನಾಮಫಲಕದ ಛಾಯಾಚಿತ್ರವನ್ನು ಅವಲೋಕಿಸಿ ಪರವಾನಿಗೆ ನೀಡಬೇಕು. ಖಾಸಗಿ ಶಾಲೆಗಳಲ್ಲಿಯೂ ಸರ್ಕಾರದ ಕನ್ನಡ ಪಠ್ಯಕ್ರಮಕ್ಕೆ ಬದಲಾಗಿ ಬೇರೆಯದಾದ ಪಠ್ಯಕ್ರಮ ಬೋದಿಸುತ್ತಿರುವುದು, ವಿಶೇಷವಾಗಿ ಕನ್ನಡವನ್ನು ನಿರ್ಲಕ್ಷಿಸಿ, ಇಂಗ್ಲೀಷಿನಲ್ಲಿಯೇ ಬೋದಿಸುತ್ತಿರುವುದನ್ನು ಗಮನಿಸಲಾಗಿದೆ. ಈ ಎಲ್ಲೆಡೆಯಲ್ಲೂ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲೇಬೇಕಾದ ಅಗತ್ಯವಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕನ್ನಡ ಜಾಗೃತ ಸಮಿತಿ ಸದಸ್ಯ ಡಿ.ಮಂಜುನಾಥ್ಅವರು ಮಾತನಾಡಿ, ರಾಷ್ಟ್ರೀಯ ಬ್ಯಾಂಕುಗಳ ಚಲನ್ಗಳಲ್ಲಿ, ರೈಲ್ವೇ ಟಿಕೇಟ್ಗಳಲ್ಲಿ ಕನ್ನಡ ಕಾಣೆಯಾಗಿರುವುದು ಆಘಾತಕಾರಿಯಾಗಿದೆ. ಇಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಬೇಕು. ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ಕನ್ನಡಿಗರಾಗಿರಬೇಕು. ಅಥವಾ ಕನ್ನಡ ಕಲಿತು ಮಾತನಾಡಿ, ಜನರಿಗೆ ಸಕಾಲಿಕವಾಗಿ ಸ್ಪಂದಿಸುವಂತಾಗಬೇಕು. ವಿದ್ಯುತ್ನಿಗಮ, ವಿವಿಧ ಕೈಗಾರಿಕೆಗಳಲ್ಲಿ ಮತ್ತು ಅಲ್ಲಿನ ಉತ್ಪನ್ನಗಳ ಮೇಲೆ ಕನ್ನಡ ಬಳಸುವಂತೆ ಸೂಚಿಸಬೇಕು ಎಂದವರು ನುಡಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರು ಶೇ.80ರಷ್ಟು ಜನ ಕನ್ನಡಿಗರಿರಲಿ. ಡೆತ್ರಿಪೋರ್ಟ್ಕನ್ನಡದಲ್ಲಿಯೂ ಇರಲಿ. ಪೋಷಕರಿಗೆ ಆಂಗ್ಲ ವ್ಯಾಮೋಹ ಸರಿಯಲ್ಲ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 1.65ಲಕ್ಷ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗಿರುವುದಕ್ಕೆ ಕಾರಣಗಳನ್ನು ಗುರುತಿಸಿ, ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ. ಡಾ|| ಎ.ಬಿ.ರಾಮಚಂದ್ರ, ಜಾಗೃತಿ ಸಮಿತಿ ಸದಸ್ಯರು.
ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಉಪೇಕ್ಷಿಸಲಾಗುತ್ತಿದೆ. ಉರ್ದು ಶಾಲೆಗಳ ಕನ್ನಡ ಶಿಕ್ಷಕರಿಗೆ ಕನ್ನಡ ಬಾಷಾಕಲಿಕೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಅಗತ್ಯವಿದೆ. ಡಿ.ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕನ್ನಡ ಜಾಗೃತ ಸಮಿತಿ ಸದಸ್ಯರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ಹಾಲಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ಹೆಚ್.ಜಿ.ಮಲ್ಲಯ್ಯ, ಸತೀಶ್ಅಧೀನಸಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಸುರೇಶ್ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
