ಜಾತಿ, ಮತ, ಕಾಯಕದಿಂದ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ 12ನೇ ಶತಮಾನದ ಶರಣರು ಕ್ರಾಂತಿಪುರುಷರು. ಮಹಾಮನೆಯ ಕ್ರಾಂತಿಕಾರಿ, ಕಾಯಕ ಯೋಗಿ, ವೀರವ್ರತ ಪರಿಪಾಲಕನೆಂದು ಪ್ರಶಂಸೆ ಪಡೆದಿದ್ದವರು ಮಡಿವಾಳ ಮಾಚಿದೇವರು ಎಂದು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಗುಡ್ಡಪ್ಪ ಜಡೆ ಹೇಳಿದರು.
ಸೊರಬ ಪಟ್ಟಣದ ದಂಡಾವತಿ ಬ್ಲಾಕ್ನ ಮಡಿವಾಳರ ಕೇರಿಯಲ್ಲಿ ಮಡಿವಾಳ ಮಾಚಿದೇವ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.
ವಿಶಾಲ ಮನೋಧರ್ಮ ಮಡಿವಾಳ ಸಮುದಾಯದ ಜನರಲ್ಲಿದೆ. ಶಿವಶರಣ ಮಾಚಿದೇವರ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ. ಮಾಚಿದೇವ ಸಮಾಜದ ಕೊಳಕು ತೊಳೆದು ಹಾಕಿದವರು. ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಸಮಾಜಕ್ಕೆ ಮಾಚಿದೇವರ ಸಂದೇಶ ಆದರ್ಶವಾಗಬೇಕಾದ ಅಗತ್ಯವಿದೆ ಎಂದರು.
ಮಡಿವಾಳ ಸಮಾಜದ ಯುವ ಮುಖಂಡ ಹಾಗೂ ಮಡಿವಾಳರ ಕೇರಿ ಅಧ್ಯಕ್ಷ ಎಂ.ಪಿ. ರಾಘವೇಂದ್ರ ಮಾತನಾಡಿ, ಮಡಿವಾಳರ ಕೇರಿ ಅಭಿವೃದ್ಧಿ ಆಗಬೇಕಿದೆ. ಈಗಾಗಲೆ ಹಲವು ಬಾರಿ ಈ ವೃತ್ತಕ್ಕೆ ಮಡಿವಾಳ ಮಾಚಿದೇವರ ಹೆಸರನ್ನು ನಾಮಕರಣ ಮಾಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಸ್ಥಳೀಯ ಪ್ರತಿನಿಧಿಗಳು ಇದಕ್ಕೆ ಸಹಕಾರವನ್ನು ನೀಡಿದ್ದಾರೆ. ಅವರ ಹೆಸರನ್ನು ಉಳಿಸುವ ಜೊತೆಗೆ ಅವರ ಆದರ್ಶ ಮತ್ತು ಮಾರ್ಗದರ್ಶನ ಮುಂದಿನ ಸಮಾಜಕ್ಕೆ ತಿಳಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಡಿ. ಉಮೇಶ್, ಪ್ರಭು ಮೇಸ್ತ್ರಿ, ಸಮಾಜ ಸೇವಕ ರಾಜು ಹಿರಿಯಾವಲಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಪ್ರಾಂತ್ಯ ಮಾಜಿ ಅಧ್ಯಕ್ಷ ಸಿ.ಪಿ. ಈರೇಶ್ ಗೌಡ, ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಸೇರಿದಂತೆ ಇತರರಿದ್ದರು.
