Tuesday, February 3, 2026
Tuesday, February 3, 2026

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

Date:

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ನಿನ್ನೆ ಮತ್ತೊಮ್ಮೆ ಅವರು ಋಜುವಾತು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಜಾಗತಿಕ ಪರಿಸ್ಥಿತಿಯನ್ನೂ ನಾವು, ನೀವೆಲ್ಲರೂ ಗಮನಿಸಬೇಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತದ ವಿರುದ್ಧ ಸಾರಿರುವ ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನಮಂತ್ರಿಯವರ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಮಾನ್ಯ ಹಣಕಾಸು ಸಚಿವರು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಹಣಕಾಸು ಸಚಿವರ ಮೇಲೆ ಇತ್ತು. ಆ ಪ್ರಥಮ ಆದ್ಯತೆ ಇಟ್ಟುಕೊಂಡು, ಹಣಕಾಸು ಕೊರತೆ ಶೇ 4.4ಕ್ಕೆ ತಂದಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.

ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಳ
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ತೆಂಗು ಬೆಳೆಗಾರರಿದ್ದಾರೆ. ಅದೇರೀತಿ ಗೋಡಂಬಿ, ಕೊಕ್ಕೊ, ಮೀನು ಸಾಕಣೆ ಮಾಡುವವರು, ಶ್ರೀಗಂಧ ಬೆಳೆಗಾರರಿಗೆ ಈ ಬಜೆಟ್ ಅನುಕೂಲ ಕಲ್ಪಿಸಿದೆ. ಇದು ಅತ್ಯಂತ ಸ್ವಾಗತಾರ್ಹ. ಕಳೆದ 2.5 ವರ್ಷದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೇಂದ್ರ ಸರಕಾರವನ್ನು ಪದೇಪದೇ ಟೀಕಿಸುವುದನ್ನು ನೋಡಿದ್ದೇವೆ. 16ನೇ ಹಣಕಾಸು ಆಯೋಗವು ಜಿಡಿಪಿ ಕೊಡುಗೆಗೆ ಶೇ. 10 ರಷ್ಟು ಸುಧಾರಣೆ ಮೊತ್ತ ಪ್ರಕಟಿಸಿದೆ. ಇದರಿಂದ ನಮ್ಮ ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಾಗಿದೆ. ಪ್ರತಿ ವರ್ಷ ಕರ್ನಾಟಕಕ್ಕೆ 7,387 ಕೋಟಿ ರೂ. ಹೆಚ್ಚುವರಿಯಾಗಿ ಲಭಿಸಲಿದೆ. 5 ವರ್ಷಕ್ಕೆ ಹೆಚ್ಚುವರಿಯಾಗಿ 63,050 ಕೋಟಿ ರೂ. ದೊರಕಲಿದೆ ಎಂದು ತಿಳಿಸಿದರು.

ಮೂಲಭೂತ ಸೌಕರ್ಯ ವಿಷಯದಲ್ಲಿ ಕ್ರಾಂತಿಕಾರಿ ನಿರ್ಧಾರ
2014 ಪೂರ್ವದಲ್ಲಿ ಹಿಂದಿನ ಯುಪಿಎ ಸರಕಾರ ಇದ್ದಾಗ ದೇಶದಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಲು ಸುಮಾರು 2 ಲಕ್ಷ ಕೋಟಿ ಹಣ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್‍ಡಿಎ ಸರಕಾರ ಬಂದ ಬಳಿಕ 12 ಲಕ್ಷ ಕೋಟಿಯನ್ನು ದೇಶದ ಮೂಲಭೂತ ಸೌಕರ್ಯಕ್ಕೆ ನೀಡಲಾಗಿದೆ. ನಿನ್ನೆ ಮಂಡಿಸಿದ ಬಜೆಟ್‍ನಲ್ಲಿ ಇನ್ನೂ ಹೆಚ್ಚು ಮನ್ನಣೆ, ಮಹತ್ವ ನೀಡಿದ್ದಾರೆ. 12.2 ಲಕ್ಷ ಕೋಟಿಗೆ ಏರಿಸಿರುವುದು ಕ್ರಾಂತಿಕಾರಿ ನಿರ್ಧಾರ ಎಂದು ತಿಳಿಸಿದರು. ರಸ್ತೆ, ರೈಲು, ಬಂದರು, ವಿಮಾನನಿಲ್ದಾಣ- ಈ ರೀತಿ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಟ್ಟಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ಪೂರಕ ನಿರ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.

ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ
ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಆಹಾರ, ವಾಣಿಜ್ಯ ಮತ್ತು ಮೀನುಗಾರಿಕಾ ಕ್ಷೇತ್ರಕ್ಕೆ ಶೇ 6ರಷ್ಟು ಹೆಚ್ಚುವರಿ ಹಣಕಾಸಿನ ಕೊಡುಗೆಯನ್ನು ಈ ಬಜೆಟ್‍ನಲ್ಲಿ ನೀಡಿದ್ದಾರೆ. ಈ ದೇಶ ಅಭಿವೃದ್ಧಿ ಆಗಬೇಕೆಂದರೆ, ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ನರೇಂದ್ರ ಮೋದಿಜೀ ಅವರು ಯಾವಾಗಲೂ ಹೇಳುತ್ತಾರೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವರು ಮಹಿಳೆಯರಿಗೆ ಉದ್ಯಮ ಸ್ಥಾಪನೆಗಾಗಿ, ಅವರನ್ನು ಸಮಾಜದ ಮುಂಚೂಣಿಗೆ ತರಲು ಶೀ ಮಾರ್ಟ್ ಮೂಲಕ ಮಹಿಳಾ ಉದ್ಯಮ ಮತ್ತು ಉದ್ಯೋಗ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.

B.Y. Vijayendra ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಬಜೆಟ್
ಪ್ರತಿ ಜಿಲ್ಲೆಗೊಂದು ಮಹಿಳಾ ಹಾಸ್ಟೆಲ್ ಸ್ಥಾಪನೆ ಮೂಲಕ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಉನ್ನತ ಶಿಕ್ಷಣವನ್ನು ಆದ್ಯತಾ ವಲಯವೆಂದು ಪರಿಗಣಿಸಿ ಶೇ 13ರಷ್ಟು ಹೆಚ್ಚಿನ ಹಣಕಾಸಿನ ನೆರವನ್ನು ಬಜೆಟ್‍ನಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಹೈಸ್ಪೀಡ್ ರೈಲುಗಳ ಬಗ್ಗೆಯೂ ನಿನ್ನೆ ಉಲ್ಲೇಖಿಸಿದ್ದಾರೆ. ನಮ್ಮ ಕರ್ನಾಟಕಕ್ಕೆ ವಿಶೇಷವಾಗಿ ಹೈದರಾಬಾದ್- ಬೆಂಗಳೂರು, ಚೆನ್ನೈ- ಬೆಂಗಳೂರು, ಇವೆರಡು ಹೈಸ್ಪೀಡ್ ರೈಲುಗಳನ್ನು ಘೋಷಿಸಿದ್ದಾರೆ. ಇದರಿಂದ ಅತಿ ಹೆಚ್ಚು ತೆರಿಗೆ ಕೊಡುವ ಬೆಂಗಳೂರಿಗೆ ಇನ್ನೂ ಹೆಚ್ಚು ಉದ್ಯಮಗಳು ಬರಲು ಅವಕಾಶವಾಗಲಿದೆ ಎಂದು ವಿಶ್ಲೇಷಿಸಿದರು. ಯುವಜನರು, ಮಹಿಳೆಯರು, ರೈತರಿಗೂ ಆದ್ಯತೆ ನೀಡಿ ವಿಕಸಿತ ಭಾರತಕ್ಕೆ ಪೂರಕ ಬಜೆಟ್ ನೀಡಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...