Madhu Bangarappa ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಮುಳುಗಡೆಯಾಗಿ, ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಅಡಿಯಲ್ಲಿರುವ ಉಳಿಕೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಶರಾವತಿ ಹಿನ್ನೀರು ಸಂತ್ರಸ್ಥರ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಮ್ಮ ಹೆಮ್ಮೆಯ ನಾಯಕರಾದ ಶ್ರೀ ಎಸ್.ಮಧು ಬಂಗಾರಪ್ಪನವರು, ʼಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗಲೇ ಹಿನ್ನೀರು ಸಂತ್ರಸ್ಥರು ಅಳಿದುಳಿದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಜಲಾಶಯ ನಿರ್ಮಾಣದಿಂದ ಕೆಪಿಸಿಗೆ ಅಗತ್ಯವಿದ್ದ ಭೂಮಿ ಬಳಕೆಯಾಗಿದೆ. ಯೋಜನೆಯಿಂದ ಸಂತ್ರಸ್ತರಾದ ರೈತರು ಆರು ದಶಕಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಆ ಜನರಿಗೆ ಸರ್ಕಾರ ತೊಂದರೆ ಕೊಡುವುದಿಲ್ಲ. ಅವರ ಸಾಗುವಳಿ ಭೂಮಿಯನ್ನು ಕಾನೂನು ಪರಿಮಿತಿಯಲ್ಲಿ ಮಂಜೂರು ಮಾಡಲಾಗುವುದು ಎಂದರು.
ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿರುವುದನ್ನು ಸಚಿವರ ಗಮನ ಸೆಳೆದಾಗ, ಯಾರೊ ಪತ್ರ ಬರೆದ ಮಾತ್ರಕ್ಕೆ ರೈತರಿಗೆ ತೊಂದರೆ ಕೊಡಲಾಗದು. ಈ ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯೊಂದಿಗೆ ಸಂಪರ್ಕಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದರು.
ಸುಪ್ರೀಂ ಕೋರ್ಟಿಗೆ ವರದಿ
Madhu Bangarappa ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ಮಾಡಿದ್ದು, ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಬಾಕಿ ಇದೆ. ನ್ಯಾಯಾಲಯದ ಮುಂದಿನ ವಿಚಾರಣೆ ಸಂದರ್ಭ ವರದಿ ಸಲ್ಲಿಸಲು ಎಲ್ಲ ಸಿದ್ಧತೆ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇದೇ ವೇಳೆ ಮುಳುಗಡೆ ಸಂತ್ರಸ್ತರ ಬಿಟ್ಟು ಹೋದ ಭೂಮಿಯ ವಿಚಾರವಾಗಿ ನಮ್ಮ ವಕೀಲರು ನ್ಯಾಯಾಲಯದ ಗಮನ ಸೆಳೆಯಲಿದ್ದಾರೆ. ಆರು ದಶಕಗಳಿಂದ ಕಗ್ಗಂಟಾಗಿರುವ ಸಮಸ್ಯೆಯನ್ನು ಒಂದೇ ಬಾರಿ ಅಥವಾ ತುರ್ತಾಗಿ ಪರಿಹರಿಸುವುದು ಕಷ್ಟವಾಗುತ್ತದೆ. ಆದರೆ, ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಮಾತುಕೊಟ್ಟಂತೆ ಆದ್ಯತೆಯಾಗಿ ತೆಗೆದುಕೊಂಡಿದೆ. ಇದೇ ರೀತಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಅಡ್ಡಿಯಾಗಿರುವ 75 ವರ್ಷಗಳ ದಾಖಲೆ ಕೊಡುವ ಷರತ್ತನ್ನು ಸಡಿಲಿಸರುವ ವಿಚಾರದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿದ ಬಳಿಕ ಚಕ್ರಾ, ವಾರಾಹಿ, ತುಂಗಾ ಡ್ಯಾಂನಿಂದ ಸಂತ್ರಸ್ತರಾದವರ ಸಮಸ್ಯೆಗಳೂ ಒಂದೊಂದಾಗಿ ಬಗೆಹರಿಯುತ್ತವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್, ರಕ್ಷಣಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ಇದ್ದರು.
