Chamber of Commerce Shivamogga ಪಿಂಚಣಿದಾರರಿಗೆ ತಾವು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಸರ್ಕಾರದಿಂದ ಅರ್ಹ ಸೌಲಭ್ಯಗಳು ದೊರೆಯಬೇಕು ಹಾಗೂ ಪಿಂಚಣಿದಾರರು ಸೇವೆಯಲ್ಲಿ ಗಳಿಸಿದ ಅನುಭವವನ್ನು ಸಾರ್ವಜನಿಕರ ಉಪಯೋಗಕ್ಕೆ ಹಂಚಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಕರ್ನಾಟಕ ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದಿಂದ ( ಕರ್ನಾಟಕ ಮತ್ತು ಗೋವಾ ) ಏರ್ಪಡಿಸಿದ್ದ ಪಿಂಚಣಿದಾರರ ದಿನ 2025 ಸಮಾರಂಭದಲ್ಲಿ ಮಾತನಾಡಿ, ಪಿಂಚಣಿದಾರರು ತಮ್ಮ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದರು. ಸರ್ಕಾರ ಪಿಂಚಣಿದಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಪಿಂಚಣಿಯು ಔದಾರ್ಯವಲ್ಲ ಅಥವಾ ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದ ಕೃಪೆಯ ವಿಷಯವಲ್ಲ, ಅಥವಾ ಎಕ್ಸ್-ಗ್ರೇಷಿಯಾ ಪಾವತಿಯೂ ಅಲ್ಲ. ಇದು ಹಿಂದಿನ ಸೇವೆಗಳಿಗೆ ಪಾವತಿಯಾಗಿದೆ ಎಂದು ಹೇಳಿದರು.
ಉದ್ಯೋಗದಾತರಿಗಾಗಿ ನಿರಂತರ ಶ್ರಮಿಸಿದವರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸುವ ಸಾಮಾಜಿಕ ಕಲ್ಯಾಣ ಕ್ರಮ ಪಿಂಚಣಿ. ಎಲ್ಲಾ ಪಿಂಚಣಿದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮುಂದುವರಿಸೋಣ ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದ ಅಧ್ಯಕ್ಷ ಆರ್.ಬಿ.ದೇಶಪಾಂಡೆ ಮಾತನಾಡಿ, ಡಿಸೆಂಬರ್ 17 ಭಾರತದಲ್ಲಿ ಪಿಂಚಣಿದಾರರಿಗೆ ಒಂದು ಮಹತ್ವದ ದಿನವಾಗಿದೆ. 1982ರ ಈ ದಿನ ಸುಪ್ರೀಂ ಕೋರ್ಟ್ ನಿವೃತ್ತ ಅಧಿಕಾರಿಗಳು ಮತ್ತು ಪಿಂಚಣಿದಾರರಿಗೆ ಘನತೆ ಮತ್ತು ಸಭ್ಯತೆ ಖಾತರಿಪಡಿಸುವ ಹೆಗ್ಗುರುತು ಆಗಿದ್ದು, ತೀರ್ಪಿನ ಮೂಲಕ ಸಮುದಾಯಕ್ಕೆ ಘನತೆ ಮತ್ತು ಅನುಗ್ರಹವನ್ನು ತರಲು ವರ್ಷಗಳ ಕಾಲ ಹೋರಾಡಿದ ಡಿ.ಎಸ್. ನಕಾರ ಅವರನ್ನು ಸ್ಮರಿಸಲು ನಮ್ಮ ದೇಶದಲ್ಲಿ ‘ಪಿಂಚಣಿದಾರರ ದಿನ’ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಿಂಚಣಿದಾರರು ಕಾನೂನು ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದಿದ್ದನ್ನು ನೆನಪಿಸಿದರು. ಪಿಂಚಣಿದಾರರು ಒಗ್ಗಟ್ಟಾಗಿ ಹೋರಾಡಿದರೆ ತಮಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಸಂಘದ ಕಾರ್ಯದರ್ಶಿ ಬಿ.ವಿ.ವೆಂಕಟೇಶ್ ಮಾತನಾಡಿ, ವ್ಯಾಲಿಡೇಷನ್ ಕಾಯ್ದೆ 2025 ರ ಬಗ್ಗೆ ಮಾಹಿತಿ ನೀಡಿ 8ನೇ ವ್ಯಾಲಿಡೇಷನ್ ಕಾಯ್ದೆ 2025 ರ ಕೇಂದ್ರೀಯ ವೇತನ ಆಯೋಗದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ವಿವರಿಸಿ ರಾಷ್ಟ್ರೀಯ ಪಿಂಚಣಿದಾರ ಸಂಘವು ವ್ಯಾಲಿಡೇಷನ್ ಕಾಯ್ದೆ 2025ರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದೆ ಎಂದು ಸಭೆಗೆ ಮಾಹಿತಿ ನೀಡಿದರು
ಹಿರಿಯ ಪಿಂಚಣಿ ಬಾಬು ಕುಟ್ಟನ್ ಪಿಳ್ಳೆ ಅವರು ಪಿಂಚಣಿದಾರರಿಗೆ ಹೆಚ್ಚಿನ ಸೌಲಭ್ಯವು ಸರ್ಕಾರದ ಮಟ್ಟದಲ್ಲಿ ದೊರೆಯಬೇಕು ಎಂದರು.
Chamber of Commerce Shivamogga ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘವು ಪಿಂಚಣಿದಾರರ ಅನುಕೂಲಕ್ಕಾಗಿ ತಂದಿರುವ ಎರಡನೇ ಆವೃತ್ತಿಯ ಡೈರೆಕ್ಟರಿಅನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಬಿಡುಗಡೆಗೊಳಿಸಿದರು.
ಕರ್ನಾಟಕ ಆದಾಯ ತೆರಿಗೆ ಇಲಾಖೆ ( ಕರ್ನಾಟಕ ಮತ್ತು ಗೋವಾ ) ಪಿಂಚಣಿದಾರರ ಸಂಘದ ಉಪಾಧ್ಯಕ್ಷೆ ಉಷಾ ಶಾಂತರಾಮ್, ಕಾರ್ಯದರ್ಶಿ ಬಿ.ವಿ.ವೆಂಕಟೇಶ್, ಸಹ ಕಾರ್ಯದರ್ಶಿ ಜಿ.ನಿರ್ಮಲ, ಹಿರಿಯ ಸದಸ್ಯ ಎಂ.ಜಿ.ವಾಸುದೇವಮೂರ್ತಿ, ವಿಶ್ವನಾಥ್ , ಸಂಘದ ಪದಾಧಿಕಾರಿಗಳು, ಸದಸ್ಯರು, ಲೆಕ್ಕ ಪರಿಶೋಧಕ ಎನ್.ಎಲ್.ಪ್ರಸಾದ್ ಭಾಗವಹಿಸಿದ್ದರು.
