Madhu Bangarappa ಶಿವಮೊಗ್ಗದ ಆರ್ಯ ಈಡಿಗರ ಭವನದಲ್ಲಿ ಆಯೋಜಿಸಿದ್ದ “ದೀವರ ಸಾಂಸ್ಕೃತಿಕ ವೈಭವ – 2025” ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಅವಧೂತರಾದ ಯೋಗೇಂದ್ರ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಸನ್ಮಾನ್ಯ ಶಾಲಾ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ, ಡೊಳ್ಳು, ಕೋಲಾಟ, ಅಂಟಿಕೆ–ಪಿಂಟಿಕೆ ಹಾಗೂ ಸಂಪ್ರದಾಯದ ಹಾಡುಗಳು ಸಮಾರಂಭದಲ್ಲಿ ಎಲ್ಲರನ್ನೂ ಆಕರ್ಷಿತರನ್ನಾಗಿ ಮಾಡಿದ್ದವು, ಈ ವೇಳೆ ಮಧು ಬಂಗಾರಪ್ಪನವರು ತಮ್ಮ ಕೈಯಾರೆ ಹಸೆ ಚಿತ್ತಾರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.
Madhu Bangarappa ನಂತರ ಮಾತನಾಡಿದ ಅವರು ದೀವರ ಕಲೆ, ಸಂಸ್ಕೃತಿ ಅಳಿವಿನಂಚಿನಲ್ಲಿದ್ದು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳಸಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಣ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನನ್ನ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಸಾಗರ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು, ಶ್ರೀ ಪ್ರೊ.ರಮೇಶ್, ಸುರೇಶ್ ಬಾಳೆಗುಂಡಿ, ಶ್ರೀ ನಾಗರಾಜ್ ನೇರಿಗೆ, ಶ್ರೀ ಶ್ರೀ ಡಿ.ಪಿ ಶ್ರೀಧರ್ ಈಡೂರು ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.
