DC Shivamogga ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ರೂಪಿಸಲಾಗಿರುವ ಅನೇಕ ಜನಹಿತ ಯೋಜನೆಗಳ ವ್ಯವಸ್ಥಿತ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕೆಲವು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಸಕಾಲದಲ್ಲಿ ಯೋಜನೆಗಳು ಪೂರ್ಣಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಆಯಾ ಇಲಾಖೆಗಳ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಹಾಗೂ ಎದುರಾಗಬಹುದಾದ ಸಮಸ್ಯೆಗಳ ಇತ್ಯರ್ಥಕ್ಕೆ ಪರಸ್ಪರರ ನಡುವೆ ಸಮನ್ವಯತೆ ಸಾಧಿಸಿಕೊಳ್ಳುವುದಲ್ಲದೆ ಕಾಲಕಾಲಕ್ಕೆ ಸಭೆಗಳನ್ನು ನಡೆಸುವಂತೆ ಅವರು ಸಲಹೆ ನೀಡಿದರು. ವಿಶೇಷವಾಗಿ ಹಲವು ದಶಕಗಳಿಂದ ಇತ್ಯರ್ಥಗೊಳ್ಳದೇ ಉಳಿದಿರುವ ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ, ಭೂಮಂಜೂರಾತಿಗೆ ಕ್ರಮ ವಹಿಸಬೇಕಾದ ತುರ್ತು ಅಗತ್ಯವಿರುವುದನ್ನು ತಿಳಿಸಿದ ಅವರು, ಈಗಾಗಲೇ ನಿಯಮಾನುಸಾರ ಗುರುತಿಸಲಾಗಿರುವ ಅರಣ್ಯ ಪ್ರದೇಶದಲ್ಲಿನ ಸಾಗುವಳಿದಾರರ ಸಮಸ್ಯೆಗೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಸಂಬಂಧಿಸಿದಂತೆ 9129ಎಕರೆಗೆ ಜಂಟಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಅದಕ್ಕೆ ಸಂಬಂಧಿಸಿದಂತೆ ಸರ್ವೇಕಾರ್ಯದಿಂದ ಕೈಬಿಟ್ಟು ಹೋಗಿರುವ ಸಂತ್ರಸ್ಥರು ಆಯಾ ತಾಲೂಕಿನ ತಹಶೀಲ್ದಾರರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ನೀಡಿರುವ ಅರ್ಜಿಗಳನ್ನು ಕ್ರಮಕ್ಕಾಗಿ ತಹಶೀಲ್ದಾರರಿಗೆ ಈ ಹಿಂದೆಯೇ ಸೂಚಿಸಲಾಗಿತ್ತು.
ಅದಕ್ಕಾಗಿ ವಿನ್ಯಾಸಗೊಳಿಸಲಾದ ಮಾದರಿ ನಮೂನೆಯನ್ನು ಸಹ ಈಗಾಗಲೇ ನೀಡಲಾಗಿದೆ. ಅವರ ವರದಿಯನ್ನು ಸೋಮವಾರದೊಳಗಾಗಿ ಪಡೆದು ಪರಿಶೀಲಿಸಿ, ಕ್ರಮಕ್ಕಾಗಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಹಲವು ಯೋಜನೆಗಳ ಅನುಷ್ಠಾನದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಮಸ್ಯಾತ್ಮಕ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಮೊಬೈಲ್‌ಸ್ಥಾವರ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ, ರಸ್ತೆ ಅಗಲೀಕರಣ, ಅರಣ್ಯೇತರ ಪ್ರದೇಶಗಳಲ್ಲಿನ ಮರಗಳ ಕಟಾವಣೆ, ಮೇಲ್ಸೇತುವೆಗಳ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ವಿಳಂಬವಾಗಿದ್ದು, ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
DC Shivamogga ಮೊಬೈಲ್‌ಸ್ಥಾವರಗಳ ನಿರ್ಮಾಣ ಕಾರ್ಯದಲ್ಲಿ ಸಮಸ್ಯೆ ಎದುರಾಗಿರುವ ಸ್ಥಳಗಳು ಮತ್ತು ಅಲ್ಲಿನ ತಾಂತ್ರಿಕ ಸಮಸ್ಯೆಗಳ ಕುರಿತು ಭಾರತ ಸಂಚಾರ ನಿಗಮದ ಅಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಚರ್ಚಿಸಿ, ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಕಂದಾಯ ಮತ್ತು ಅರಣ್ಯ ಇಲಾಖಾಧಿಕಾರಿಗಳು ಬಿ.ಎಸ್.ಎನ್.ಎಲ್.ನ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದ ಅವರು, ಸ್ಥಾವರಗಳ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುವ ಸ್ಥಳಗಳಿದ್ದಲ್ಲಿ ಸ್ಥಳೀಯ ತಹಶೀಲ್ದಾರರು ಹಾಗೂ ಪೊಲೀಸ್‌ಸಹಕಾರ ಪಡೆದು, ಸ್ಥಾವರಗಳನ್ನು ನಿರ್ಮಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅರಣ್ಯ ಭೂಮಿ ಇರುವ ಕೆಲವು ಕಡೆಗಳಲ್ಲಿ ಹೆದ್ದಾರಿ ಕಾಮಗಾರಿ ಕೈಗೊಳ್ಳುವಲ್ಲಿ ತೀವ್ರ ತರಹದ ಅಡಚಣೆ ಉಂಟಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಹೊಸೂರು ಸಮೀಪ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ, ಮೈಸೂರು ಕಾಗದ ಕಾರ್ಖಾನೆಯ ವ್ಯಾಪ್ತಿಗೊಳಪಡುವ ಮರಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಅವುಗಳ ಕಟಾವಿಗೆ ಅನುಮತಿ, ರಾಷ್ಟ್ರೀಯ ಹೆದ್ದಾರಿ-69ರ ನಿರ್ಮಾಣ ಕಾರ್ಯ ಹಾಗೂ 69ರ ಅರಣ್ಯೇತರ ಪ್ರದೇಶದಲ್ಲಿನ ಮರಗಳ ಕಟಾವಿಗೆ ಇಲಾಖೆಗೆ ಶುಲ್ಕವನ್ನು ಪಾವತಿಸಲಾಗಿದ್ದು, ಅವುಗಳ ಕಟಾವಿಗೆ ಅನುಮತಿ ನೀಡುವಂತೆ ಮುಖ್ಯ ಅರಣ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಜಿಲ್ಲೆಯ ಹೊಸನಗರ ತಾಲೂಕು ಸೇರಿದಂತೆ ಆಯ್ದ ವಿವಿಧ ಗ್ರಾಮೀಣ ಅರಣ್ಯ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರನ್ನು ಪೂರೈಸಲು ಕುಡಿಯುವ ನೀರಿನ ಸ್ಥಾವರಗಳ ನಿರ್ಮಾಣಕ್ಕೆ, ಶುದ್ಧ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ, ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ಗ್ರಾಮಠಾಣ ಪ್ರದೇಶಗಳಲ್ಲಿ ಬೆಳೆದು ನಿಂತ ಮರಗಳ ಕಟಾವಿಗೆ ಅರಣ್ಯ ಇಲಾಖೆಯು ಅನುಮತಿ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್.ಹೇಮಂತ್ ಅವರು ತಿಳಿಸಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಟಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದ್ದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಕಾಲದಲ್ಲಿ ಅನುಮತಿ ಪಡೆದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ಶಿವಮೊಗ್ಗ ಬಿಸಿಎಫ್ ಹನುಮಂತಪ್ಪ ನವರು ಹೇಳಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಅವರು ಮಾತನಾಡಿ, ಹುಲಿಕಲ್‌ಘಾಟಿಯಲ್ಲಿ ರಸ್ತೆ ಕಾಮಗಾರಿ ಕಾರ್ಯಾರಂಭಗೊಳಿಸಲು ಅಗತ್ಯ ದಾಖಲೆಗಳೊಂದಿಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಿ ಅನುಮತಿ ನೀಡಲು ಕ್ರಮವಹಿಸಲಾಗುವುದು ಎಂದರು. ಕಂದಾಯ ಮತ್ತು ಅರಣ್ಯ ಭೂಮಿಯ ವೆತ್ಯಾಸಗಳನ್ನು ಗುರುತಿಸಲು ನ್ಯಾಯಾಲಯದ ಮಾರ್ಗದರ್ಶನದಂತೆ ನೂತನ ತಂತ್ರಾಂಶವನ್ನು ರೂಪಿಸಿ, ಜಂಟಿ ಸರ್ವೇ ಕಾರ್ಯಕ್ಕೆ ಸರ್ಕಾರವು ಅನುಮತಿ ನೀಡಿದೆ. ಇಂತಹ ಸ್ಥಳಗಳಲ್ಲಿ ಕಂಡುಬರುವ ಮನೆ, ರಸ್ತೆ, ಶಾಲೆ, ಕಾಲೇಜು ಇತ್ಯಾದಿಗಳಿದ್ದಲ್ಲಿ ಅವುಗಳನ್ನು ಸರ್ವೇ ಕಾರ್ಯದಿಂದ ಕೈಬಿಡಲು ಅವಕಾಶ ನೀಡಿದೆ. ಈ ತಂತ್ರಾಂಶವನ್ನು ಕೆಳಹಂತ, ತಹಶೀಲ್ದಾರರ ಹಂತ ಹಾಗೂ ಹಿರಿಯ ಅಧಿಕಾರಿಗಳ ಹಂತದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದರು.
ಜಂಟಿ ಸರ್ವೇಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು, ಸರ್ವೇಯರ್‌ಗಳು, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಡಿಸೆಂಬರ್‌ಮತ್ತು 26ರಂದು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ತರಬೇತಿಯ ನಂತರ ಸರ್ವೇ ಕಾರ್ಯ ಆರಂಭಗೊಳ್ಳಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ
ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಪ್ರೊಬೇಷನರ್‌ಅಧಿಕಾರಿ ಬಾಬು ರಾಜೇಂದ್ರಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ, ಪ್ರಸನ್ನ ಪಟಗಾರ್(ವನ್ಯಜೀವಿ), ಮೋಹನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು, ಎಲ್ಲಾ ತಾಲೂಕುಗಳ ತಹಶೀಲ್ದಾರರು ಸೇರಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
“Deemed Forest” (ಡೀಮ್ಡ್ ಫಾರೆಸ್ಟ್) ಎಂದರೆ, ಅಧಿಕೃತವಾಗಿ ಅರಣ್ಯ ಎಂದು ಘೋಷಿಸದಿದ್ದರೂ, ಅರಣ್ಯದ ಗುಣಲಕ್ಷಣಗಳನ್ನು ಹೊಂದಿರುವ ಭೂಮಿ; ಇದು 1996ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬಂದ ಪರಿಕಲ್ಪನೆಯಾಗಿದೆ.
ಪರಿಭಾಷೆ: ಕಾನೂನುಬದ್ಧವಾಗಿ ಅರಣ್ಯವೆಂದು ಗುರುತಿಸದಿದ್ದರೂ, ದಟ್ಟವಾದ ಮರಗಳಿಂದ ಕೂಡಿರುವ, ಅರಣ್ಯದಂತೆ ಕಾಣುವ ಭೂಮಿಯನ್ನು ‘ಡೀಮ್ಡ್ ಫಾರೆಸ್ಟ್’ ಎನ್ನುತ್ತಾರೆ.
ಪ್ರಸ್ತುತ ಕರ್ನಾಟಕದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸದ ದಟ್ಟ ಅರಣ್ಯ ಪ್ರದೇಶಗಳು, ಅನುದಾನಿತರಿಗೆ ಹಂಚಿದರೂ ಸಾಗುವಳಿ ಮಾಡದ ಭೂಮಿ ಇತ್ಯಾದಿಗಳನ್ನು ‘ಡೀಮ್ಡ್ ಫಾರೆಸ್ಟ್’ ಎಂದು ಗುರುತಿಸಲಾಯಿತು.
‘ಡೀಮ್ಡ್ ಫಾರೆಸ್ಟ್’ ಎಂದರೆ, ದಾಖಲೆಗಳಲ್ಲಿ ‘ಅರಣ್ಯ’ ಎಂದು ನಮೂದಾಗದಿದ್ದರೂ, ವಾಸ್ತವವಾಗಿ ಅರಣ್ಯದಂತೆ ಇರುವ ಭೂಮಿ, ಇದನ್ನು 1996ರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುತಿಸಲಾಗಿತ್ತು.
