Keladi Shivappanayaka University of Agriculture and Horticulture ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕುರಿತಂತೆ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಹಾಗೂ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ಮಾತನಾಡಿ, ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣವು ಪರಿಸರ, ಗ್ರಾಮೀಣ ಮತ್ತು ಕೃಷಿ ಪ್ರವಾಸೋದ್ಯಮದ ಅರಿವು ಮೂಡಿಸುವ ಜತೆಯಲ್ಲಿ ಕೃಷಿ ಕ್ಷೇತ್ರದ ಅರಿವು ವಿಸ್ತಾರ ಮಾಡುವಲ್ಲಿ ಮಹತ್ತರ ಸ್ಥಳವಾಗಿದೆ. ಪ್ರತಿಯೊಬ್ಬರೂ ಭೇಟಿ ನೀಡಬಹುದಾದ ಸ್ಥಳವಾಗಿದೆ. ಕೃಷಿ ಪ್ರವಾಸೋದ್ಯಮಕ್ಕೆ ವಿಶ್ವವಿದ್ಯಾಲಯದಿಂದ ಪೂರಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಶಿವಮೊಗ್ಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮಲೆನಾಡಿಗೆ ಸಂಬಂಧಿಸಿದಂತೆ ವಿಶೇಷ ಪ್ರಾಕೃತಿಕ ಸಂಪತ್ತು ಹೊಂದಿರುವ ಪ್ರದೇಶವಾಗಿದೆ. ಪಶ್ಚಿಮಘಟ್ಟ ಪ್ರದೇಶ ಹೊಂದಿರುವುದರಿಂದ ಪರಿಸರ ಪ್ರವಾಸಕ್ಕೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ವಿಶ್ವವಿದ್ಯಾಲಯವು 778 ಎಕರೆ ಪ್ರದೇಶದಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಿದರು.
Keladi Shivappanayaka University of Agriculture and Horticulture ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಈಗಾಗಲೇ ಕೃಷಿ ಟೂರಿಸಂ ನಡೆಸುತ್ತಿದ್ದು, ಕೃಷಿ ವಿವಿ ಆವರಣಕ್ಕೆ ಭೇಟಿ ನೀಡಿ ಒಂದು ದಿನದ ಕೃಷಿ ಟೂರಿಸಂ ನಡೆಸಬಹುದಾಗಿದೆ. ಕೃಷಿ ವಿವಿ ಮಾಹಿತಿ, ಕೃಷಿ, ತೋಟಗಾರಿಕೆ ಬೆಳೆಗಳು, ಜೇನು ಸಾಕಾಣಿಕೆ, ಬೇಕರಿ ಉತ್ಪನ್ನಗಳ ತಯಾರಿಕೆ ಕೇಂದ್ರ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ಸಿರಿಧಾನ್ಯ ತಯಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಪಶು, ಕೋಳಿ, ಕುರಿ, ಮೊಲ ಸಾಕಣೆ, ಹೈನುಗಾರಿಕೆ, ಮೀನು ಸಾಕಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸಿರಿಧಾನ್ಯಗಳ ಊಟದ ವ್ಯವಸ್ಥೆ ಇರುತ್ತದೆ. ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕೃಷಿಯಾನದ ಕಾರ್ಯಕ್ರಮದ ಮೂಲಕ ಕೃಷಿ ಟೂರಿಸಂಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅ.ನಾ.ವಿಜಯೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ಆರ್.ಮನೋಹರ್, ಪ್ರೊ. ಬಸವರಾಜ ಇತರರಿದ್ದರು.
