Sahyadri Narayana Hospital 25 ವರ್ಷದ ಯುವತಿ ಗಂಡನ ಜೊತೆ ಸಂತೋಷವಾಗಿದ್ದಳು. ತಮ್ಮ ಮೊದಲ ಮಗು ಬರಲಿರುವ ಖುಷಿಯಲ್ಲಿದ್ದಾಗ, ಅವರ ಜೀವನದಲ್ಲಿ ದೊಡ್ಡ ಸಂಕಷ್ಟ ಎದುರಾಯಿತು. ಗರ್ಭಿಣಿಯಾಗಿ ಎಲ್ಲವೂ ಸರಿಯಾಗಿದ್ದರೂ, ಅವರ ರಕ್ತದೊತ್ತಡ ಮಾತ್ರ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಏಳನೇ ತಿಂಗಳಿಗೆ ಕಾಲಿಟ್ಟಾಗ, ಅವರಿಗೆ ದಿಢೀರನೇ ಕಣ್ಣು ಕಾಣಿಸದಂತಾಯಿತು. ಪರಿಸ್ಥಿತಿ ತೀವ್ರ ಹದಗೆಡುತ್ತಿದ್ದರಿಂದ, ತಮ್ಮ ಹಳ್ಳಿಯ ಆಸ್ಪತ್ರೆಯಿಂದ ಅನೇಕ ಖಾಸಗಿ ಆಸ್ಪತ್ರೆಗಳಿಗೆ ಹೋಗಿ, ಕೊನೆಗೆ ಸುಧಾರಿತ ಚಿಕಿತ್ಸೆಗಾಗಿ ಅವರನ್ನು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆತರಲಾಯಿತು.
ಆಸ್ಪತ್ರೆಗೆ ಬಂದಾಗ ರೋಗಿಯ ಸ್ಥಿತಿ ಗಂಭೀರವಾಗಿತ್ತು. ತೀವ್ರವಾದ ಅಧಿಕ ರಕ್ತದೊತ್ತಡದಿಂದಾಗಿ ‘ಎಕ್ಲಾಂಪ್ಸಿಯಾ’ (ಭಾರೀ ಮೂರ್ಛೆ ಬರುವ ಸ್ಥಿತಿ) ಅಪಾಯದಲ್ಲಿದ್ದರು. ತಕ್ಷಣವೇ ತುರ್ತು ಚಿಕಿತ್ಸೆ ಆರಂಭಿಸಿದ ತಂಡ, ಹೈ-ರಿಸ್ಕ್ ಗರ್ಭಾವಸ್ಥೆಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾದ ಹಿರಿಯ ಸ್ತ್ರೀರೋಗ ತಜ್ಞ ಡಾ. ರಾಘವೇಂದ್ರ ಭಟ್ ಅವರನ್ನು ತುರ್ತಾಗಿ ಕರೆಸಲಾಯಿತು. ತಕ್ಷಣವೇ ಅಗತ್ಯ ಪರೀಕ್ಷೆಗಳನ್ನು ನಡೆಸಲಾಯಿತು.
ಪರೀಕ್ಷೆಗಳಿಂದ ಗೊತ್ತಾದ ವಿಷಯ ಏನು ಅಂದರೆ, ಅವರಿಗೆ ತೀವ್ರವಾದ ‘ಪ್ರೀ-ಎಕ್ಲಾಂಪ್ಸಿಯಾ’ ಇತ್ತು ಮತ್ತು ದೃಷ್ಟಿ ಕಳೆದುಕೊಳ್ಳಲು ಕಾರಣವಾಗಿದ್ದ ‘ರೆಟಿನಾ ಡಿಟ್ಯಾಚ್‌ಮೆಂಟ್’ (ಕಣ್ಣಿನ ಪರದೆಯ ಬೇರ್ಪಡಿಕೆ) ಸಮಸ್ಯೆ ಇತ್ತು. ಕೂಡಲೇ ನಿರ್ಧಾರ ತೆಗೆದುಕೊಂಡ ಡಾ. ಭಟ್ ಅವರ ತಂಡ, ತಾಯಿಯ ಜೀವ ಉಳಿಸಲು ತುರ್ತಾಗಿ ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮಾಡಿ ಮಗುವನ್ನು ಹೊರತೆಗೆಯಲು ತೀರ್ಮಾನಿಸಿತು. ಅಂದು ರಾತ್ರಿ, ಕೇವಲ 1 ಕೆ.ಜಿ ತೂಕದ ಅವಧಿಪೂರ್ವ (Premature) ಶಿಶುವಿಗೆ ಆ ತಾಯಿ ಜನ್ಮ ನೀಡಿದರು.
ಡಾ. ಭಟ್ ಅವರ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಐಸಿಯುನಲ್ಲಿ (ICU) ತೀವ್ರ ಆರೋಗ್ಯ ಸವಾಲುಗಳನ್ನು ಎದುರಿಸಿದರು. ತಾಯಿಗೆ ನಂತರ ಮೆದುಳಿನ ತೊಂದರೆಯಾದ ‘ಎನ್ಸೆಫಲೋಪತಿ’ ಕಾಣಿಸಿಕೊಂಡಾಗ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಯ ನರರೋಗ ತಜ್ಞರಾದ ಡಾ. ರೂಪಾ ಅವರು ಅದನ್ನೂ ಯಶಸ್ವಿಯಾಗಿ ಸರಿಪಡಿಸಿದರು. ಐಸಿಯುನಲ್ಲಿ ನಾಲ್ಕು ದಿನ ಇದ್ದ ನಂತರ, ತಾಯಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೂರು ದಿನಗಳಲ್ಲಿ ಆಕೆಯ ದೃಷ್ಟಿ ಸುಧಾರಿಸಿ ಅವರು ಮನೆಗೆ ಹೋದರು.
ಅವಧಿ ಪೂರ್ವ ಜನಿಸಿದ ಮಗುವನ್ನು ಶಿಶು ರೋಗ ತಜ್ಞ ಡಾ. ಶಶಿಧರ್ ಹೆಗ್ಡೆ ಅವರ ಮೇಲ್ವಿಚಾರಣೆಯಲ್ಲಿ ಎನ್ಐಸಿಯುನಲ್ಲಿ (NICU) ಇಡಲಾಯಿತು. ಡಾ. ಶಶಿಧರ್ ಹೇಳಿದಂತೆ, ಮಗುವಿನ ಬಹುತೇಕ ಅಂಗಗಳು ಪೂರ್ಣವಾಗಿ ಬೆಳೆದಿಲ್ಲದ ಕಾರಣ, ಅದನ್ನು ಸುಮಾರು 45 ದಿನಗಳ ಕಾಲ ತೀವ್ರ ನಿಗಾದಲ್ಲಿ ಇಡಬೇಕಾಯಿತು. ಹೃದಯ ಬಡಿತ ಕಡಿಮೆ ಇತ್ತು, ಉಸಿರಾಡಲು ಕಷ್ಟವಿತ್ತು. ಹಾಗಾಗಿ, ಮಗುವನ್ನು ನಿರಂತರ ಆಮ್ಲಜನಕ ಬೆಂಬಲದೊಂದಿಗೆ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಒಮ್ಮೆ ಹೃದಯ ಬಡಿತ ನಿಂತಾಗ ಸಿಪಿಆರ್ (CPR) ನೀಡಿ ಮತ್ತೆ ಚೇತರಿಸಲಾಯಿತು.
Sahyadri Narayana Hospital ಇದಲ್ಲದೆ, ಮಗುವಿನ ಹೃದಯದಲ್ಲಿ ರಂಧ್ರವಿತ್ತು. ಅದನ್ನು ಔಷಧಿಗಳ ಮೂಲಕವೇ ಸರಿಪಡಿಸಲಾಯಿತು. ರಕ್ತದ ಮಟ್ಟ ಕಡಿಮೆಯಾಗಿದ್ದರಿಂದ ರಕ್ತವನ್ನೂ ನೀಡಲಾಯಿತು. ಅತಿ ಕಡಿಮೆ ತೂಕದ ಮಗುವಾಗಿದ್ದರಿಂದ, ಕೆಲವೊಮ್ಮೆ ಮೆದುಳಿನ ಅಪಕ್ವತೆಯಿಂದ ಉಸಿರಾಟ ನಿಲ್ಲಿಸುವ ತೊಂದರೆಯೂ ಇತ್ತು.
“ನಮ್ಮ ನರ್ಸಿಂಗ್ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡಿದರು. ತಮ್ಮ ಊಟ-ತಿಂಡಿಯನ್ನೂ ಲೆಕ್ಕಿಸದೆ ಮಗುವನ್ನು ನೋಡಿಕೊಂಡರು. ಮಗುವಿಗೆ ಮೊದಲು ಟ್ಯೂಬ್ ಮೂಲಕ ಆಹಾರ ನೀಡಿ, ನಂತರ ತಾಯಿಯಿಂದ ಹಾಲುಣಿಸಲು ತರಬೇತಿ ನೀಡಲಾಯಿತು. ಆ ಸಿಬ್ಬಂದಿಯ ಕಾಳಜಿಯಿಂದ, ಮಗುವು ಸ್ಥಿರವಾಗಿ, ಆಟವಾಡುತ್ತಾ, ಸುಮಾರು 1.8 ಕೆಜಿ ತೂಕದೊಂದಿಗೆ ಒಂದೂವರೆ ತಿಂಗಳ ನಂತರ ಆಸ್ಪತ್ರೆಯಿಂದ ಮನೆಗೆ ಮಗು ತೆರಳಿದೆ,” ಎಂದು ಡಾ. ಶಶಿಧರ್ ಸಂತೋಷ ಹಂಚಿಕೊಂಡರು.
ಇಂತಹ ಪ್ರಕರಣ ಅಪರೂಪ ಎಂದು ಹೇಳಿದ ಡಾ. ಭಟ್, ತಮ್ಮ ವೃತ್ತಿಯಲ್ಲಿ ಪ್ರೀ-ಎಕ್ಲಾಂಪ್ಸಿಯಾದಿಂದಾಗಿ ಗರ್ಭಿಣಿಯೊಬ್ಬರು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದನ್ನು ಕಂಡಿದ್ದು ಇದೇ ಮೊದಲು ಎಂದರು.
“ಇಂತಹ ಕಠಿಣ ಸಮಸ್ಯೆಗಳ ಬಗ್ಗೆ ನಾವು ಪುಸ್ತಕಗಳಲ್ಲಿ ಓದುತ್ತೇವೆ, ಆದರೆ ನಿಜವಾಗಿಯೂ ಹೀಗಾಗುವುದು ಬಹಳ ವಿರಳ. ಇದು ಕೈ ಮೀರಿ ಹೋಗುವ ಸನ್ನಿವೇಶವಾಗಿತ್ತು, ಅದನ್ನು ನಾವು ಗೆಲುವಾಗಿ ಪರಿವರ್ತಿಸಿದ್ದೇವೆ,” ಎಂದು ಅವರು ಹೇಳಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗೀಸ್ ಪಿ. ಜಾನ್ ಅವರು ವೈದ್ಯರಾದ ಡಾ. ರಾಘವೇಂದ್ರ ಭಟ್, ಡಾ. ಶಶಿಧರ್ ಹೆಗ್ಡೆ, ಡಾ. ರೂಪಾ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸಿದ್ದಾರೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಸವಾಲಿನ ಗರ್ಭಾವಸ್ಥೆಗಳನ್ನು ನಿಭಾಯಿಸುವಲ್ಲಿ ಮುಂದಿದೆ ಮತ್ತು ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ನಾವು ಬದ್ಧವಾಗಿದ್ದೇವೆ ಎಂದು ಪುನರುಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ಶೈಲೇಶ್ ಎಸ್ ಎನ್, ಹಾಗೂ ಇನ್ನಿತರರು ಇದ್ದರು.
