ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ-
Vallabhbhai Patel ದಾವಣಗೆರೆ.ಡಿ.8. ಭ್ರಷ್ಟಾಚಾರವು ದೇಶದ ಅತಿ ದೊಡ್ಡ ಆಂತರಿಕ ಶತ್ರುವಾಗಿದ್ದು ಇದರ ನಿರ್ಮೂಲನೆಯು ಸನಾತನರ ಚಿಂತನೆಯೂ ಗಾಂಧೀಜಿ ನಂಬಿದ ಹತ್ತು ತತ್ವಗಳಲ್ಲಿ ಎರಡಾದ ‘ಆಸ್ತೇಯ’, ‘ಅಪರಿಗ್ರಹ’ ಪಾಲನೆಯಿಂದ ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಅವರಿಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಸ್ವಾತಂತ್ರ್ಯ ಚಳುವಳಿಯ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವರ್ಷ ಅಂಗವಾಗಿ ಏರ್ಪಾಡಾಗಿದ್ದ ವಿಶೇಷ ಉಪನ್ಯಾಸ ನೀಡುತ್ತಾ ವಾಮ ಮಾರ್ಗದ ಸಂಪಾದನೆ ಬೇಡ ಎನ್ನುವ ಆಸ್ತೇಯ ಗುಣ ಹಾಗೂ ಸಂಪತ್ತಿನ ದಾಹವಿಲ್ಲದ ಸರಳ ಜೀವನದ ಅಪರಿಗ್ರಹ ಗುಣ ಬಹು ಮುಖ್ಯ ಎಂಬುದನ್ನು ಗಾಂಧೀಜಿ ತಮ್ಮ ಆತ್ಮಕಥನ ಸತ್ಯಾನ್ವೇಷಣೆಯಲ್ಲಿ ಒತ್ತಿ ಹೇಳಿದ್ದು ಇಂದಿನ ಪೀಳಿಗೆಯು ತಾವೆಂದೂ ಲಂಚ ಕೊಡುವುದಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ ಅದರಂತೆ ನಡೆಯಬೇಕಿದೆ ಎಂದರಲ್ಲದೆ ಗಾಂಧೀಜಿ ಆತ್ಮಕಥನದ ಅನೇಕ ತತ್ವ ವಿಚಾರಗಳನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲರ ದೂರ ದೃಷ್ಟಿ, ದೃಢಸಂಕಲ್ಪ, ಅಚಲ ನಿಷ್ಠೆ, ರಾಷ್ಟ್ರ ಪ್ರೇಮ, ನಿರ್ದಾಕ್ಷಿಣ್ಯ ಕ್ರಮ ಮುಂತಾದವು ಎಲ್ಲ ಪೀಳಿಗೆಗೂ ಆದರ್ಶವಾಗಬೇಕಿದ್ದು ಸ್ವಾತಂತ್ರ್ಯಾ ನಂತರವೂ ದೇಶದಲ್ಲಿದ್ದ ಸುಮಾರು 562ಕ್ಕೂ ಹೆಚ್ಚು ದೊಡ್ಡ ಚಿಕ್ಕ ಪ್ರಾಂತ್ಯ ಸಂಸ್ಥಾನಗಳನ್ನು ತೆಗೆದು ಅಖಂಡ ಭಾರತವನ್ನು ಒಂದಾಗಿಸಿ ಭಾಷಾವಾರು ಪ್ರಾಂತ್ಯ ರಚನೆ ಮಾಡಿದ ಮಹಾಮುತ್ಸದ್ಧಿ ಪಟೇಲರ ಧೀಶಕ್ತಿ ಅಸಾಮಾನ್ಯವಾದದ್ದು ಎಂದ ಎಚ್.ಬಿ.ಮಂಜುನಾಥ್ ಯುವಜನತೆ ಈ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು.
Vallabhbhai Patel ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ನಿರ್ದೇಶಕ ಪ್ರೊ. ವೈ ವೃಷಭೇಂದ್ರಪ್ಪನವರು ದೇಶದ ಅಖಂಡತೆ ಸುಭದ್ರತೆ ಉಳಿಸಿಕೊಳ್ಳುವ ಜವಾಬ್ದಾರಿ ಯುವ ಜನತೆಯದಾಗಿದೆ, ದೇಶದ ಮನಸ್ಸುಗಳನ್ನು ಒಡೆಯುವ ಹುನ್ನಾರದ ವಿಚಿತ್ರ ಬುದ್ಧಿಜೀವಿಗಳ ಮಾತಿಗೆ ಯುವ ಜನತೆ ಕಿವಿ ಕೊಡಬಾರದು ಎಂದರು.
ಕಾಲೇಜಿನ ಟೆಕ್ಸ್ಟೈಲ್ ವಿಭಾಗದ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನಾಡಿದರು. ಕೃಷ್ಣಕುಮಾರ್ ಸ್ವಾಗತ ಕೋರಿದರು. ವಿದ್ಯಾರ್ಥಿನಿಯರಾದ ಸಾಕ್ಷಿ ನಿರೂಪಿಸಿದರೆ ಸುಹಾಸಿನಿ ವಂದನೆ ಸಮರ್ಪಿಸಿದರು. ಪ್ರಬಂಧ ಮುಂತಾದ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ಪ್ರಮಾಣ ಪತ್ರ ವಿತರಿಸಲಾಯಿತು.
