Shimoga News ಶಿವಮೊಗ್ಗ ನಗರದಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯ ಕರ್ನಾಟಕ ವಿಭಾಗ ತೆರೆಯುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಇಎಸ್‌ಐಸಿ ಪ್ರಾದೇಶಿಕ ಕಚೇರಿ ಹುಬ್ಬಳ್ಳಿ ಸಂಯುಕ್ತ ಸಹಭಾಗಿತ್ವದಲ್ಲಿ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ “ಇಎಸ್‌ಐಸಿ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ” ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಸಾಮಾಜಿಕ ಭದ್ರಾತಾ ಸೌಲಭ್ಯ ವಿಸ್ತರಣಾ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಸ್ತುತ ನೌಕರರ ರಾಜ್ಯ ವಿಮಾನ ನಿಗಮದ ಹುಬ್ಬಳ್ಳಿ ಕೇಂದ್ರವು ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಹರಿಹರ ಕಚೇರಿ ಕೇಂದ್ರಗಳ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿ ಪ್ರದೇಶದಲ್ಲಿ 2,80,000 ನೋಂದಾಯಿತ ಕಾರ್ಮಿಕರು ಮತ್ತು 5670 ನೊಂದಾಯಿತ ಮಾಲೀಕರಿದ್ದಾರೆ. ಹುಬ್ಬಳ್ಳಿ ಕೇಂದ್ರವು ಮೇಲ್ಕಂಡ ವ್ಯಾಪ್ತಿ ಪ್ರದೇಶಗಳಿಂದ ಅತ್ಯಂತ ದೂರವಾಗಿದೆ ಎಂದು ತಿಳಿಸಿದರು.
ಕಾರ್ಮಿಕರಿಗೆ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿಗೆ ಭೇಟಿ ನೀಡಲು ತುಂಬಾ ಅನಾನುಕೂಲವಾಗಿದೆ. ಆದ್ದರಿಂದ ಶಿವಮೊಗ್ಗ ನಗರಕ್ಕೆ ಉಪ ಪ್ರಾದೇಶಿಕ ಕಚೇರಿ ಮಂಜೂರು ಮಾಡಬೇಕು. ನೌಕರರ ರಾಜ್ಯ ವಿಮಾ ನಿಗಮವು ರಾಗಿಗುಡ್ಡದಲ್ಲಿ 100 ಹಾಸಿಗೆ ಆಸ್ಪತ್ರೆ ಮತ್ತು 32 ಸಿಬ್ಬಂದಿ ವಸತಿಗೃಹ ನಿರ್ಮಾಣ ಕೈಗೆತ್ತಿಕೊಂಡಿದೆ. ಮಾರ್ಚ್ 2026 ರೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
Shimoga News ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಇಎಸ್‌ಐ ಔಷಧಾಲಯ ಹಾಗೂ ಶಿಕಾರಿಪುರಕ್ಕೆ ನೌಕರರ ರಾಜ್ಯ ವಿಮಾ ನಿಗಮದ ಇಎಸ್‌ಐ ಶಾಖೆ ಮಂಜೂರು ಮಾಡಬೇಕು. ಎಸ್‌ಪಿಆರ್‌ಇಇ 2025 ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಬೇಕು. ದಂಡವಿಲ್ಲದೆ ನೋಂದಣಿಗೆ 2026ರ ಮಾರ್ಚ್ ವರೆಗೂ ಅವಕಾಶ ನೀಡಬೇಕು ಎಂದು ತಿಳಿಸಿದರು.
ನೌಕರರ ರಾಜ್ಯ ವಿಮಾ ನಿಗಮ ಹುಬ್ಬಳ್ಳಿ ಉಪ ವಿಭಾಗಿಯ ಕಚೇರಿ ಜಂಟಿ ನಿರ್ದೇಶಕ ರಘುರಾಮನ್ ಮಾತನಾಡಿ, ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್ ಮನೋಹರ, ಪ್ರೋಗ್ರಾಂ ಕಮಿಟಿ ಚೇರ್ಮನ್ ಶರತ್, ನಿರ್ದೇಶಕರಾದ ಪಿ.ರುದ್ರೇಶ್, ಎಸ್.ಎಸ್.ಉದಯಕುಮಾರ್, ಬಿ.ಸುರೇಶ್ ಕುಮಾರ್, ಜಿ.ವಿ.ಕಿರಣ್ ಕುಮಾರ್, ಡಾ ಲಕ್ಷ್ಮೀದೇವಿ ಗೋಪಿನಾಥ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಡಿ.ಎಂ.ಶಂಕರಪ್ಪ, ನೌಕರರ ರಾಜ್ಯ ವಿಮಾ ನಿಗಮದ ಶಿವಮೊಗ್ಗ ಕೇಂದ್ರದ ಮ್ಯಾನೇಜರ್ ಆಶಾದೇವಿ, ಭದ್ರಾವತಿ ಕೇಂದ್ರದ ಮಂಜುಳಾ, ಕಾರ್ಮಿಕ ಇಲಾಖೆ ಅಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿ ಹಾಜರಿದ್ದರು.
