ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ 200 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವ ಧ್ಯೇಯದೊಂದಿಗೆ ಅನವರತ ಫೌಂಡೇಶನ್ ಹಮ್ಮಿಕೊಂಡಿದ್ದ “ವಿವೇಕ ವಿದ್ಯಾನಿಧಿ” ವಿತರಣಾ ಕಾರ್ಯಕ್ರಮವು ಶಿವಮೊಗ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಶಿಕ್ಷಣದ ಮೂಲಕ ಸಾಮಾಜಿಕ ಪ್ರಗತಿಗೆ ನಿರಂತರ ಬೆಂಬಲ ನೀಡುವ ಗುರಿಯನ್ನು ಈಡೇರಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ, ಸಮಾಜದ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಒಟ್ಟು 200 ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು.
ಈ ಮೂಲಕ ಅವರ ಶೈಕ್ಷಣಿಕ ಕನಸುಗಳಿಗೆ ಸಂಸ್ಥೆಯು ಭದ್ರ ಬುನಾದಿ ಒದಗಿಸಿತು.
ಅನವರತ ಫೌಂಡೇಶನ್‌ನ ಈ ಮೊದಲ ಹೆಜ್ಜೆ, ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವ ದಿಸೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಎಸ್ ಎನ್ ಚನ್ನಬಸಪ್ಪ (ಚೆನ್ನಿ)ನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಬಿ ವಿ ವಸಂತ್ ಕುಮಾರ್ , ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಸ್ ಎನ್ ನಾಗರಾಜ್ , ಶ್ರೀ ಡಿಎಸ್ ಅರುಣ್ , ವಿಧಾನಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ , ವಿಧಾನಪರಿಷತ್ ಶಾಸಕರಾದ ಶ್ರೀ ಎ.ಜೆ ರಾಮಚಂದ್ರ , ವಿಕಾಸ ವಿದ್ಯಾ ಸಮಿತಿಯ ಕಾರ್ಯದರ್ಶಿಗಳಾದ
ಶ್ರೀ ಎಸ್ ರಾಜಶೇಖರ್ , ದೇಶಿಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಅನವರತ ಫೌಂಡೇಶನ್‌ನ ಈ ಸಾಮಾಜಿಕ ಕಳಕಳಿಯ ಕಾರ್ಯವನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಮಹತ್ವದ ಕುರಿತು ಪ್ರೇರಣಾತ್ಮಕ ಮಾತುಗಳನ್ನಾಡಿದರು.
ಮುಂದಿನ ದಿನಗಳಲ್ಲಿ “ವಿವೇಕ ವಿದ್ಯಾನಿಧಿ” ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮಹತ್ವಾಕಾಂಕ್ಷೆಯನ್ನು ಅನವರತ ಫೌಂಡೇಶನ್ ವ್ಯಕ್ತಪಡಿಸಿತು.
