S.N. Channabasappa ವಿಕಲಚೇತನರಿಗೆ ಅನುಕಂಪವಲ್ಲ-ಅವಕಾಶ ಬೇಕಾಗಿದ್ದು, ಅದು ದೊರೆತಲ್ಲಿ ಏನು ಬೇಕಾದರೂ ಸಾಧಿಸುತ್ತಾರೆಂದು ತೊರಿಸಿಕೊಟ್ಟಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ “ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರನ್ನು ಒಳಗೊಂಡ ಸಮಾಜವನ್ನು ರೂಪಿಸುವುದು” ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ವಿಶೇಷಚೇತನರು ಮಾತ್ರವಲ್ಲದೆ ಇಡೀ ಮನುಕುಲವೇ ನೆನಪಿಡುವಂತಹ ದಿನ ಇವತ್ತಾಗಿದೆ. “ಮನಸ್ಸಿದ್ದರೆ ಮಾರ್ಗ” ಎಂಬ ನಾಣ್ಗುಡಿಯಂತೆ ವಿಶೇಷಚೇತನ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಕಾವ್ಯ, ಕುಸ್ತಿಯಲ್ಲಿ ಗೌರಮ್ಮ, ಥ್ರೋಬಾಲ್‌ನಲ್ಲಿ ಜ್ಯೋತಿ ಇಂತಹ ವಿಶೇಷಚೇತನ ಮಹಿಳೆಯರು ಅವಕಾಶ ಸಿಕ್ಕರೆ ಇಡೀ ಜಗತ್ತನ್ನೆ ಗೆಲ್ಲುತ್ತೇವೆ ಎಂದು ತೋರಿಸಿದ್ದಾರೆ.
ಜಿಲ್ಲೆಯ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಈ ದೇಶಕ್ಕೆ ಕೀರ್ತಿ ಮತ್ತು ಗೌರವ ತಂದಿದ್ದಾರೆ. ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದೂ ಸಾಧನೆ ಮಾಡಲು ಹಿಂಜರಿಯುವ ಪೀಳಿಗೆಗೆ ವಿಶೇಷಚೇತನರು ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಸಮಾಜದಲ್ಲಿ ತಾಯಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಆಕೆಗೆ ಬದಲಿ ವ್ಯವಸ್ಥೆಯೂ ಇಲ್ಲ. ಇಂತಹ ವಿಶೇಷಚೇತನ ಮಕ್ಕಳನ್ನು ಸಾಕಿ, ಸಲುಹಿ ಸಾಧನೆ ಮಾಡಲು ಮಾನಸಿಕವಾಗಿ ಸಿದ್ದಗೊಳಿಸಿದ ತಾಯಂದಿರೆಲ್ಲರಿಗೂ ಅಭಿನಂದನೆಗಳು. ಇಂತಹ ಮಕ್ಕಳು ಇರುವ ಮನೆಗಳು ಬಲಯುತವಾಗಿರುತ್ತದೆ.
ವಿಶೇಷಚೇತನರು ಇತರರ ಮೇಲೆ ಅವಲಂಬಿತವಾಗದೆ ತಮ್ಮ ಸಾಧನೆಯ ಹಾದಿಯನ್ನು ರೂಪಿಸಿಕೊಳ್ಳಬೇಕು. ಅದಕ್ಕೆಂದೇ ನಿಮ್ಮ ಕುಟುಂಬಗಳು, ಸರ್ಕಾರಗಳು ಬೆಂಬಲವಾಗಿ ನಿಂತು, ಅನೇಕ ಸವಲತ್ತುಗಳನ್ನು ನೀಡುತ್ತಿವೆ ಎಂದರು.
ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ ಮಾತನಾಡಿ, ವಿಕಲಚೇತನರಲ್ಲ ಇವರು ವಿಶೇಷಚೇತನರು. ಇವರಿಗೆ ಅನುಕಂಪ ಬೇಕಾಗಿಲ್ಲ, ಬದುಕುವ ಹಕ್ಕು ನೀಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಮೂರೂ ವಿಶೇಷಚೇತನರನ್ನು ವೇದಿಕೆಗೆ ಆಹ್ವಾನಿಸಿರುವುದು ಈ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದೆ ಎಂದರು.
ವೈಫಲ್ಯತೆ ದೇಹಕ್ಕೆ ಬರಬಹುದು, ಮನಸ್ಸಿಗಲ್ಲ. ದೇಹಕ್ಕೆ ಮಿತಿ ಇರಬಹುದು, ಕನಸಿಗಲ್ಲ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಕಾವ್ಯ, ಗೌರಮ್ಮ, ಜ್ಯೋತಿ. ಮನಸ್ಸು ಮಾಡಿದರೆ ಸಾಧನೆಗೆ ಯಾವುದ್ದೇ ಅಡ್ಡಿ ಇಲ್ಲ ಎಂಬುದಕ್ಕೆ ಈ ಮೂವರು ಉತ್ತಮ ಉದಾಹರಣೆ. ನೀವೆಲ್ಲಾ ಉದಾತ್ತ ಕನಸುಗಳನ್ನು ಕಾಣಬೇಕು. ಅದನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕು. ಕಣ್ಣಿದ್ದರೂ ಕಣ್ಣೆತ್ತಿ ನೋಡದವರು ನಿಜವಾದ ಕುರುಡರು. ಸಾಧನೆ ಮಾಡದೇ ಇರುವುದು ನಿಜವಾದ ಅಂಗವಿಕಲ್ಯ ಎಂದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ವಿಕಲಚೇತನರ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದ ವಿಶ್ವ ಆರೋಗ್ಯ ಸಂಸ್ಥೆ 1992 ರಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಮಾಡಲು ನಿರ್ಧರಿಸಿತು. ವಿಕಲಚೇತನ ಮಹಿಳೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಶಿವಮೊಗ್ಗಕ್ಕೆ ಕೀರ್ತಿ ತಂದಿದ್ದಾರೆ.
ಈ ಸಾಧನೆ ಮಾಡಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಕ್ತಿ ಕೊಟ್ಟಿರುವ ನಿಮ್ಮ ಪೋಷಕರು, ಶಿಕ್ಷಕರು ಹಾಗೂ ಶ್ರಮಿಸಿದ ನಿಮಗೆ ಯಶಸ್ಸಿನ ಗೌರವ ಸಲ್ಲಬೇಕು ಎಂದ ಅವರು ಇವರನ್ನು ಲಾಲನೆ ಪಾಲನೆ ಮಾಡುವ ತಾಯಂದಿರಿಗೆ ಗೌರವಧವನ್ನು ಹೆಚ್ಚಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇವೆ ಎಂದರು.
S.N. Channabasappa ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ತಾಜುದ್ದೀನ್‌ಖಾನ್, ಡಿಸಿ ಕಚೇರಿ ತಹಸೀಲ್ದಾರ್ ಪ್ರದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುವರ್ಣ ವಿ. ನಾಯ್ಕ್, ಅಂತರಾಷ್ಟ್ರೀಯ ಮಹಿಳಾ ದೃಷ್ಟಿವಿಕಲಚೇತನ ವಿಶ್ವಕಪ್ ಕ್ರೀಡಾಪಟು ಕಾವ್ಯ, ಅಂತರಾಷ್ಟ್ರೀಯ ಪಂಜುಕುಸ್ತಿ ಕ್ರೀಡಾಪಟು ಗೌರಮ್ಮ, ಅಂತರಾಷ್ಟ್ರೀಯ ಥ್ರೋಬಾಲ್ ಕ್ರೀಡಾಪಟು ಜ್ಯೋತಿ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
