ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾಯುಗುಣಮಟ್ಟ ಸೂಚ್ಯಂಕವು 20 ಇರಬೇಕಾಗಿದ್ದು ಭಾರತದ ಅನೇಕ ನಗರಗಳಲ್ಲಿ ಇದು ಅಪಾಯ ಮಟ್ಟವನ್ನೂ ಮೀರಿ 150ನ್ನು ದಾಟಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಆತಂಕ ವ್ಯಕ್ತಪಡಿಸಿದರು.
ಅವರಿಂದು ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏರ್ಪಾಡಾಗಿದ್ದ ‘ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ’ಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬೆಂಗಳೂರಲ್ಲಿ ಇದು 153 ನ್ನು ದಾಟಿದ್ದರೆ ಹೈದರಾಬಾದಿನಲ್ಲಿ 161 ನ್ನು ದಾಟಿದೆ, ದೆಹಲಿಯಲ್ಲಂತೂ 999 ಕ್ಕೆ ಏರಿದ್ದು ಉಸಿರಾಟವೂ ಕಷ್ಟ ಎನ್ನುವಂತಾಗಿದೆ, ಇದರಲ್ಲಿ ವಾಹನಗಳಿಂದ ಹೊರಬರುವ ಹೊಗೆಯ ಪಾತ್ರವೂ ಇದ್ದು ವಾತಾವರಣದಲ್ಲಿನ ಓಝೋನ್ ಪ್ರಮಾಣ ಪ್ರತಿ ಘನ ಮೀಟರ್ ಗೆ 100 ಇರಬೇಕಾದ್ದು 351 ದಾಟುತ್ತಿದೆ, ಹೀಗೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು. 460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಭೂಮಿಯನ್ನು ನಾವೀಗ ಕ್ಷಣಮಾತ್ರದಲ್ಲಿ ವಿನಾಶ ಮಾಡುವ ಹಂತಕ್ಕೆ ತಲುಪಿದ್ದೇವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ ಮಂಜುನಾಥ್ ಅನವಶ್ಯಕವಾದ ವಾಹನ ಬಳಕೆ ಕಡಿಮೆ ಮಾಡುವುದು ಹಾಗೂ ವಾಹನಗಳಿಂದ ಕೆಟ್ಟ ಹೊಗೆ ಬಾರದಂತೆ ನೋಡಿಕೊಳ್ಳುವುದು ಮುಂತಾದ ಮಾರ್ಗಗಳನ್ನು ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕು, ಸಣ್ಣ ದೂರಕ್ಕೂ ವಾಹನ ಬಳಸುವ ರೂಢಿ ಬಿಡಬೇಕು, ಕಪ್ಪು ಹೊಗೆ ಪ್ರಮಾಣ ಹೆಚ್ಚಾಗಿರುವ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು, ವಿದ್ಯುತ್ ವಾಹನಗಳನ್ನು ಸಾಧ್ಯವಾದಷ್ಟೂ ಬಳಸಬೇಕು ಎಂದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಅನಿಲ್ ಬಿ ಮಾಸೂರ್ ಉಪಸ್ಥಿತರಿದ್ದರು. ವಾಯು ಮಾಲಿನ್ಯ ಪರಿಣಾಮ ಹಾಗೂ ನಿಯಂತ್ರಣ ಕುರಿತಾದ ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ದರ್ಜೆ ಗುಮಾಸ್ತರಾದ ರಮೇಶ್ ಭಾರಧ್ವಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳ ಪರಿಚಯ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಸೂಪರಿಂಟೆಂಡೆಂಟ್ ಸೋಮಣ್ಣ ಮಾಡಿದರು. ಅಧೀಕ್ಷಕರುಗಳಾದ ಹೆಚ್ ಸಿ ರವಿ, ಪ್ರಸನ್ನ ಹಾಗೂ ಸಿಬ್ಬಂದಿ ವರ್ಗದವರು ಮುಂತಾದವರು ಭಾಗವಹಿಸಿದ್ದರು.
