ಸಂಪತ್ತು ಇದ್ದವರು ದೊಡ್ಡ ದಾನ ಕೊಡುವುದು ಸ್ವಾಭಾವಿಕ ಆದರೆ ಮಧ್ಯಮ ವರ್ಗದವರು ಸ್ವಯಂ ಪ್ರೇರಣೆಯಿಂದ ದೊಡ್ಡ ಮೊತ್ತದ ದಾನವನ್ನು ಸತ್ಕಾರ್ಯಕ್ಕೆ ಕೊಡುವುದು ನಿಜಕ್ಕೂ ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಅಥಣಿ ಎಸ್ ವೀರಣ್ಣ ಅಭಿಪ್ರಾಯ ಪಟ್ಟರು.
ಅವರಿಂದು ಬಾಡಾ ಕ್ರಾಸ್ ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ನಿವೃತ್ತ ಶಿಕ್ಷಕರಾದ ಎ ಎಮ್ ಬಸವರಾಜಯ್ಯನವರು ತಮ್ಮ ತಂದೆ ಎ ಎಂ ವೃಷಭೇಂದ್ರಯ್ಯ ತಾಯಿ ಎ ಎಮ್ ಅನ್ನಪೂರ್ಣಮ್ಮನವರ ಸ್ಮರಣೆಯಲ್ಲಿ ಒಂದು ಕೋಟಿ ರೂಪಾಯಿ ದಾನವಾಗಿ ನೀಡಿದ್ದು ದಾನಿ ಬಸವರಾಜಯ್ಯನವರನ್ನು ಸನ್ಮಾನಿಸಿ ಮಾತನಾಡುತ್ತಾ ಅಂಧ ಮಕ್ಕಳಿಗೆ ಆಶ್ರಯ ಕೊಟ್ಟು ಸಂಗೀತ ಶಿಕ್ಷಣವನ್ನು ಕೊಡುತ್ತಿರುವ ಪುಣ್ಯಾಶ್ರಮಕ್ಕೆ ಸಹೃದಯರು ಸ್ವಯಂ ಪ್ರೇರಣೆಯಿಂದ ನೀಡುತ್ತಿರುವುದು ಲಿಂಗೈಕ್ಯ ಪಂಚಾಕ್ಷರ ಗವಾಯಿಗಳು ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದಲೇ ತಾನಾಗಿ ಬರುತ್ತಿದೆ. ಮಾನ್ಯ ಡಾ. ಶಾಮನೂರು ಶಿವಶಂಕರಪ್ಪನವರ ಗೌರವಾಧ್ಯಕ್ಷತೆಯಲ್ಲಿ ಪುಣ್ಯಾಶ್ರಮದ ಕಾರ್ಯಗಳು ಸುಗಮವಾಗಿ ಸಾಗುತ್ತಿದ್ದು ಅನೇಕರು ತಮ್ಮ ಹುಟ್ಟುಹಬ್ಬ ಹಾಗೂ ಹಿರಿಯರ ನೆನಪುಗಳನ್ನು ಇಲ್ಲಿಯೇ ಬಂದು ಆಚರಿಸುತ್ತಾರೆ, ಬಸವರಾಜಯ್ಯನವರ ಈ ಒಂದು ಕೋಟಿ ರೂಪಾಯಿ ದೊಡ್ಡ ಮೊತ್ತದ ದಾನವು ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಸದ್ಬಳಕೆಯಾಗಲಿದೆ ಎಂದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ದಾನದ ಮಹತ್ವ ವಿವರಿಸಿದರು.
ಕೋಟಿ ರೂ. ದಾನಿ ನಿವೃತ್ತ ಶಿಕ್ಷಕ ಎ ಎಂ ಬಸವರಾಜಯ್ಯ ಮಾತನಾಡಿ ಪುಣ್ಯಾಶ್ರಮಕ್ಕೆ ತಂದೆ ತಾಯಿಗಳ ಸ್ಮರಣೆಯಲ್ಲಿ ಈ ಮೊತ್ತದ ದಾನ ನೀಡಲು ಐದಾರು ತಿಂಗಳುಗಳಿಂದ ಯೋಚಿಸುತ್ತಿದ್ದೆ, ಈಗ ದಾನ ನೀಡಿ ನನ್ನ ಭಾರ ಕಡಿಮೆ ಮಾಡಿಕೊಂಡಿದ್ದೇನೆ, ದಾನ ಸ್ವೀಕರಿಸಿ ಪುಣ್ಯಾಶ್ರಮದ ಅಥಣಿ ವೀರಣ್ಣ ಮುಂತಾಗಿ ಸರ್ವರೂ ನನ್ನನ್ನು ಕೃತಾರ್ಥ ರನ್ನಾಗಿಸಿದ್ದಾರೆ ಎಂದರು.
ಆಶ್ರಮದ ಉಪಾಧ್ಯಕ್ಷ ದೇವರ ಮನಿ ಶಿವಕುಮಾರ್, ಕಾರ್ಯದರ್ಶಿ ಎ ಹೆಚ್ ಸಿದ್ದಲಿಂಗೇಶ್ವರ, ದಾನಿಗಳ ಆಪ್ತಮಿತ್ರ ಕೆ ಎಂ ಶೇಖರಪ್ಪ ಉಪಸ್ಥಿತರಿದ್ದು ಕೃತಜ್ಞತಾಪೂರ್ವಕ ಮಾತನಾಡಿದರು. ಅಮರಯ್ಯ ಸ್ವಾಮಿ ಹಿರೇಮಠ್ ಹಾಗೂ ಆನಂದ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ಆಶ್ರಮದ ಅಂಧ ವಿದ್ಯಾರ್ಥಿಗಳು ಭಕ್ತಿ ಗೀತೆಗಳು ಹಾಗೂ ವಚನ ಗಾಯನ ಮಾಡಿದರು.
