Rotary Club Shimoga ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ಕ್ರಮಬದ್ಧತೆ, ಧೈರ್ಯದ ಜತೆಯಲ್ಲಿ ಒಗ್ಗಟ್ಟು ಜೀವನವನ್ನು ಶ್ರೀಮಂತಗೊಳಿಸುತ್ತವೆ ಎಂದು ಮೌಂಟ್ ಕಾರ್ಮೆಲ್ ಶಾಲೆ ಪ್ರಾಂಶುಪಾಲ ಸುರೇಶ್ ಸಾಲ್ಡಾನ ಹೇಳಿದರು.
ವಿದ್ಯಾನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ರೋಟರಿ ವಲಯ 10ರ ವತಿಯಿಂದ ಆಯೋಜಿಸಿದ್ದ ಉತ್ತರ ಧ್ರುವ ಕ್ರೀಡೋತ್ಸವ 2025 ಉದ್ಘಾಟಿಸಿ ಮಾತನಾಡಿ, ರೋಟರಿ ಪರಿವಾರ ಶಾಲೆಯಲ್ಲಿ ಪ್ರತಿ ವರ್ಷ ಕ್ರೀಡೋತ್ಸವ ಆಯೋಜಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಶಾಲೆಯ ಸ್ವಚ್ಛತೆ, ಶಿಸ್ತಿನ ಪಾಲನೆ ಮತ್ತು ಗೌರವವು ರೋಟರಿ ಸದಸ್ಯರ ಜವಾಬ್ದಾರಿಯುತ ನಡತೆ ತೋರಿಸುತ್ತದೆ. ರೋಟರಿ ಸಂಸ್ಥೆಯು ಶಾಲೆಯಲ್ಲಿ ಆಯೋಜಿಸಿದ್ದ ಐ-ಚೆಕಪ್, ಡೆಂಟಲ್ ಹೆಲ್ತ್ ಕ್ಯಾಂಪ್, ಮಕ್ಕಳ ಆರೋಗ್ಯ ತಪಾಸಣೆ ಮಾನವೀಯ ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಎಲ್ಲ ವಯೋಮಿತಿಗಳಲ್ಲಿ ನಡೆಯುವ ಈ ಕ್ರೀಡಾ ಸ್ಪರ್ಧೆಗಳು ರೋಟರಿ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಅದ್ಭುತ ವೇದಿಕೆ. ನಾವು ಎಲ್ಲರೂ ಒಂದೇ ಪರಿವಾರ ಎಂಬ ಭಾವನೆ ಕ್ರೀಡೋತ್ಸವದಿಂದ ಮತ್ತಷ್ಟು ಬಲವಾಗುತ್ತದೆ ಎಂದು ತಿಳಿಸಿದರು.
ವಲಯ 10ರ ಸ್ಪೋರ್ಟ್ಸ್ ಕೋಆರ್ಡಿನೇಟರ್ ಸಿ.ಎನ್.ಮಲ್ಲೇಶ್ ಮಾತನಾಡಿ, ವಲಯ ಸ್ಪರ್ಧೆಗಳಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಹೇಳಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜ್ ಮಾತನಾಡಿ, ಶಿವಮೊಗ್ಗದ ಎಂಟು ಕ್ಲಬ್‌ಗಳು ಒಟ್ಟಾಗಿ ನಡೆಸುತ್ತಿರುವ ಕ್ರೀಡೋತ್ಸವವು ರೋಟರಿಯ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಯಾವುದೇ ತಪ್ಪುಗಳಿದ್ದರೆ ಪರಸ್ಪರ ಸಹಕಾರದಿಂದ ಸರಿಪಡಿಸಿಕೊಂಡು ಮುಂದೆ ಉತ್ತಮವಾಗಿ ಸಾಗೋಣ ಎಂದು ಸದಸ್ಯರಿಗೆ ಕರೆ ನೀಡಿದರು.
ರೋಟರಿ ಕಿರಿಯ ಮಕ್ಕಳಿಂದ ಹಿರಿಯರ ತನಕ ಎಲ್ಲ ವಯೋಮಿತಿಯವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ಶಿವಕುಮಾರ್, ವಲಯ ಸೇನಾನಿ ಜಗದೀಶ್ ಸರ್ಜಾ, ಶಂಕರ್.ಎಂ.ಪಿ., ಎಂಟು ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
