Shivamogga Trupti Clinic ವಿದ್ಯಾರ್ಥಿಗೆ ಶಿಕ್ಷಣ ಪಡೆಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆ ಜ್ಞಾನ ವಿಜ್ಞಾನ ಹಾಗೂ ಸಂಸ್ಕಾರ ಅತಿ ಮುಖ್ಯ ಎಂದು ಶಿವಮೊಗ್ಗದ ತೃಪ್ತಿ ಕ್ಲಿನಿಕ್ ನ ಕಿಡ್ನಿ ಹಾಗೂ ಮೂತ್ರ ಕೋಶ ಶಸ್ತ್ರ ಚಿಕಿತ್ಸಕರಾದ ಡಾ. ಎಸ್. ಚಂದ್ರಶೇಖರ್ ತಿಳಿಸಿದರು.
ಅವರು ಶಿವಮೊಗ್ಗ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜೊತೆ ಜೊತೆಗೆ ಜ್ಞಾನ ಮತ್ತು ಸಂಸ್ಕಾರದ ಪರಿಪಾಠವನ್ನು ಶಿಕ್ಷಕರು ಹಾಗೂ ಪೋಷಕರು ನೀಡುವುದು ಅತ್ಯಗತ್ಯ ಈ ಮೂರರಿಂದ ಆ ಮಗು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡು ಬೆಳೆದು ಸಾಧನೆಯ ತೋರಲು ಸಾಧ್ಯ ಎಂದರು. ನಯ ವಿನಯ ಸಭ್ಯತೆ ಹಾಗೂ ಸಂಸ್ಕೃತಿ ನಮ್ಮ ಪರಿಪಾಠವಾಗಬೇಕು ಎಲ್ಲದನ್ನು ತಿಳಿದುಕೊಳ್ಳಲು ಕೇಳುವ ಮನೋಭಾವ ಮನೋಸ್ಥಿತಿ ನಮ್ಮಲ್ಲಿ ಬೆಳೆಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಕ್ಕಳ ಬೇಕು- ಬೇಡಗಳನ್ನು ನಾವು ಅವಲೋಕಿಸಿ ಅವರನ್ನು ಕಲಿಕೆಯತ್ತ ಹಾಗೂ ಸೃಜನಶೀಲತೆಯತ್ತ ಬೆಳೆಸಿದಾಗ ಅವರ ಜೀವನ ಸಮರ್ಪಕವಾಗುತ್ತದೆ ಹಾಗೂ ಹೊಸ ಸಾಧನೆಗೆ ದಾರಿದೀಪವಾಗುತ್ತದೆ.
ಈ ನಿಟ್ಟಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ಆರಂಭದಿಂದಲೂ ಎಲ್ಲಾ ಶಾಲೆಗಳಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.
Shivamogga Trupti Clinic ಕಾರ್ಯಕ್ರಮದಲ್ಲಿ ಸಂಚಾಲಕರಾದ ಎಚ್. ಕೆ. ಅರುಣ್ ಹಾಗೂ ಕೆ.ಡಿ. ಶರತ್ ಮತ್ತು ಮುಖ್ಯ ಶಿಕ್ಷಕರಾದ ವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಠ್ಯ ವಿಷಯಗಳಿಗೆ ಸಂಬಂಧಪಟ್ಟಂತೆ ವಿಜ್ಞಾನ, ಗಣಿತ, ಸಮಾಜ ಹಾಗೂ ಭಾಷೆಯ ಮಾಡಲ್ ಪ್ರದರ್ಶನಗಳೊಂದಿಗೆ ಚಿತ್ರಕಲೆ, ಅಕ್ಷರ ಬರಹ ಸೇರಿದಂತೆ 2100 ಕ್ಕೂ ಹೆಚ್ಚು ಮಾಡೆಲ್ ಗಳು ಅತ್ಯಂತ ವಿಶೇಷವಾಗಿದ್ದವು.
