Shimoga News ಜೀವ ಜಗತ್ತಿನಲ್ಲಿ ಏನನ್ನಾದರೂ ಅಂದುಕೊಳ್ಳಬಲ್ಲ ಹಾಗೂ ಅಂದುಕೊಂಡದ್ದನ್ನು ಮಾಡಬಲ್ಲ ಸಾಮರ್ಥ್ಯವಿರುವ ಏಕೈಕ ಜೀವಿ ಮನುಷ್ಯ, ಆದ್ದರಿಂದ ಉತ್ತಮವಾದುದನ್ನು ಅಂದುಕೊಳ್ಳಬೇಕು ಅದನ್ನು ಮತ್ತಷ್ಟು ಉತ್ತಮವಾಗಿ ಮಾಡಬೇಕು ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ ಮೈಸೂರಿನ ಚೇತನ್ ರಾಮ್ ಆರ್ ಎ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಅವರಿಂದು ಲೇಕ್ ವ್ಯೂ ನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಬಿಸಿಎ ವತಿಯಿಂದ ವಿವಿಧ ಜಿಲ್ಲೆಗಳ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಾಡಾಗಿದ್ದ ‘ಪರೀಕ್ಷೆ ಒಂದು ಹಬ್ಬ- ಬನ್ನಿ ಆಚರಿಸೋಣ’ ಎಂಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಿಕ್ಕಿರುವುದನ್ನು ಸಂತೋಷದಿಂದ ಅನುಭವಿಸದೆ ಸಿಗದಿರುವ ಬಗ್ಗೆ ಕೊರಗುವುದೇ ಈಗಿನ ಪೀಳಿಗೆಯ ಸ್ಥಿತಿಯಾಗಿದೆ, ನಗುವಿನಿಂದಲೇ ಜೀವನದಲ್ಲಿ ಯಶ ಸಾಧಿಸಬಹುದು, ಪರೀಕ್ಷೆಗೂ ಭಯ ಪಡದೆ ನಗುನಗುತ್ತ ಓದಿ ಬರೆಯಬೇಕು ಎಂದರು.
Shimoga News ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಮೂಡುಬಿದರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ ಸದಾಕತ್ ಮಾತನಾಡುತ್ತಾ ಸಾಧನೆಯ ಹೆಜ್ಜೆಯಲ್ಲಿ ನಿರ್ಧಾರಗಳು ಮುಖ್ಯ, ಕಲಿಕೆಯು ಭಾರವಲ್ಲ ಸಂತಸದಾಯಕ, ಸಮಯ ಪಾಲನೆ, ಶಿಸ್ತು, ಕಠಿಣ ಪರಿಶ್ರಮ ಯಶಸ್ಸಿಗೆ ಬೇಕು ಎಂದರು. ಹಿರಿಯ ತಂತ್ರಾಂಶ ತಜ್ಞರುಗಳು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಂಜುನಾಥ ಮಸ್ಕಿ ಹಾಗೂ ಹರ್ಷ ಗೋಪಾಲರಾವ್ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಕೃತಕ ಬುದ್ಧಿಮತ್ತೆ ಬಂದ ನಂತರ ಹೊಸ ಹೊಸ ಅವಕಾಶಗಳು ಹೆಚ್ಚಾಗಿ ಒದಗಲಿವೆ, ಇದರ ಅನುಕೂಲ ಪಡೆಯುವ ಕೌಶಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ಬಗ್ಗೆ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಮಾತನಾಡಿದರು. ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ, ಸಂಪನ್ಮೂಲ ವ್ಯಕ್ತಿ ಮಹಾಬಲೇಶ್ವರ ತುಂಗಾ, ಪ್ರೊ. ಸಿದ್ಧಲಿಂಗಪ್ಪ ಕೆ, ಪ್ರೊ. ಬಕ್ಕೇಶ್ ಮುಂತಾದವರು ಉಪಸ್ಥಿತರಿದ್ದು ಶ್ರಾವಣಿ ಪ್ರಾರ್ಥನೆ ಹಾಡಿದರೆ ಜ್ಯೋತಿಕಾ, ಕೀರ್ತಿ, ಸಂತೋಷ, ಕೀರ್ತನ ಹಾಗೂ ಪ್ರಶಾಂತಿನಿ ಬಿ ಎಂ ಅತಿಥಿಗಳ ಪರಿಚಯ ಮಾಡಿದರು. ವಿವಿಧ ಜಿಲ್ಲೆಗಳ 17ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳ 1300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
