Gurudutt Hegde ಕ್ರೀಡೆಗಳು ಪ್ರತಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕರಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ನಗರದ ಡಿ. ಎ. ಆರ್. ಕವಾಯತು ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಬಲೂನುಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪೊಲೀಸ್ ಇಲಾಖೆಯ ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ ಕ್ರೀಡಾಕೂಟವು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದ್ದು, ಇತರರು ಅನುಸರಿಸುವಂತಿದೆ. ಅದನ್ನು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನೌಕರರು ಕೂಡ ಕ್ರೀಡೆಯನ್ನು ಪೊಲೀಸ್ ಕ್ರೀಡಾಕೂಟವನ್ನು ಅನುಸರಿಸುತ್ತಿರುವುದು ಸಂತೋಷ ಎನಿಸಿದೆ ಎಂದರು.
ಕ್ರೀಡೆ ಸ್ಫೂರ್ತಿದಾಯಕ ಆಗಿರುವಂತೆ ಪ್ರೇರಣಾದಾಯಕವಾಗಿದೆ. ದೈಹಿಕ ಸದೃಢತೆಗೆ ಸಹಕಾರಿಯಾಗಿದೆ ಎಂದ ಅವರು ಸದಾ ಲವಲವಿಕೆಯಿಂದಿರಲು, ಉತ್ಸುಕರಾಗಿರಲು ಪೂರಕವಾಗಿದೆ ಎಂದರು.
Gurudutt Hegde ಪೊಲೀಸರು ತಮ್ಮ ದೈನಂದಿನ ಕಾರ್ಯದಲ್ಲಿ ಎದುರಾಗುವ ಸಮಸ್ಯೆ- ಸವಾಲುಗಳನ್ನು ಎದುರಿಸಲು, ಉತ್ತಮ ಸೇವೆ ಸಲ್ಲಿಸುವಲ್ಲಿ ಕ್ರೀಡೆ ಸಹಾಯಕವಾಗಿದೆ ಎಂದರು.
ಜಿಲ್ಲೆಯಲ್ಲಿ ಶಾಂತಿ – ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ, ಕೋಮುಗಲಭೆ ಮತ್ತಿತರ ಕುಕೃತ್ಯಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಿರುವುದು ಪ್ರಶಂಸನೀಯ ಸಂಗತಿ ಎಂದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟ ಅಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಗಳಾದ ಎ.ಜಿ.ಕಾರಿಯಪ್ಪ, ರಮೇಶ್ ಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮಹಿಳಾ ಮತ್ತು ಪುರುಷ ಅಧಿಕಾರಿ – ಸಿಬ್ಬಂಧಿಗಳು, ಪೊಲೀಸ್ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.
