Shree Kshetra Dharmasthala Gramabhivriddhi Trust ಸ್ತ್ರೀ ಸ್ವಾವಲಂಬನೆ ಹಾಗೂ ಗ್ರಾಮಾಭಿವೃದ್ಧಿ ಇವು ಸಾಮಾಜಿಕ ಸಬಲೀಕರಣದೊಂದಿಗೆ ರಾಷ್ಟ್ರೋನ್ನತಿಗೂ ಅವಶ್ಯ ಎಂದು ಹರಿಹರ ಕ್ಷೇತ್ರದ ಶಾಸಕ ಬಿ ಪಿ ಹರೀಶ್ ಅಭಿಪ್ರಾಯಪಟ್ಟರು.
ಅವರು ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೂ ಪ್ರಾಮಾಣಿಕವಾಗಿ ಮುಟ್ಟಿಸುವ ಒಳ್ಳೆಯ ಕಾರ್ಯವನ್ನು ಸಹಾ ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು ಇದಕ್ಕೆ ಕಪ್ಪು ಚುಕ್ಕಿ ಇಡಲು ಮುಂದಾದವರು ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂದರು.
ಗ್ರಾಮಗಳ ಸಾಮಾನ್ಯ ಮಹಿಳೆಯರಿಗೂ ಪ್ರಾಮಾಣಿಕ ಬ್ಯಾಂಕಿಂಗ್ ವ್ಯವಸ್ಥೆಯ ಜ್ಞಾನವನ್ನು ಧರ್ಮಸ್ಥಳ ಸಂಸ್ಥೆ ನೀಡಿದೆ ಎಂದರು.
ಧಾರ್ಮಿಕ ಪ್ರವಚನ ನೀಡಿದ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ್ ರವರು ಸಾಮೂಹಿಕವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ‘ನಾನು’ ಎಂಬುವ ಅಹಂಭಾವ ದೂರವಾಗಿ ‘ನಾವು’ ಎಂಬುವ ವಿಶಾಲ ಮನೋಭಾವ ಮೂಡುತ್ತದೆ, ಇದು ಸಾಮಾಜಿಕ ಸಾಮರಸ್ಯಕ್ಕೆ ಸಹಕಾರಿ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ವಿವರಿಸುತ್ತಾ ಬೆಳ್ಳೂಡಿ, ಭಾನುವಳ್ಳಿ ರಾಮತೀರ್ಥ ಗ್ರಾಮಗಳ ಐತಿಹಾಸಿಕ ಮಹತ್ವಗಳು ಶಾಸನಗಳಲ್ಲಿ ಉಲ್ಲೇಖವಾಗಿರುವುದನ್ನು ಸಹ ವಿವರಿಸಿದರು.
ಧರ್ಮಸ್ಥಳ ಸಂಸ್ಥೆಯ ವತಿಯಿಂದ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು 50 ಲಕ್ಷಕ್ಕೂ ಹೆಚ್ಚು ಸದಸ್ಯರುಗಳಿದ್ದಾರೆ ಬಡ ಮತ್ತು ಮಧ್ಯಮ ವರ್ಗದ ಬಹುತೇಕ ಮಹಿಳಾ ಸದಸ್ಯರು ಆರ್ಥಿಕ ಸಬಲರಾಗಲು ಇದು ಕಾರಣವಾಗಿದೆ ಎಂದು ಮಂಜುನಾಥ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ವೀರೇಶ್ ಹನಗವಾಡಿ ಭಾರತದ ಆರ್ಥಿಕ ಶಕ್ತಿ ಅಷ್ಟೇ ಅಲ್ಲದೇ ಕೌಟುಂಬಿಕ ವ್ಯವಸ್ಥೆಯೂ ವಿಶ್ವದಲ್ಲೇ ಭಾರತದಲ್ಲಿ ಗಟ್ಟಿಯಾಗಿದೆ, ಇದಕ್ಕೆ ಜನರಲ್ಲಿನ ಭಕ್ತಿ ಶ್ರದ್ಧೆ ನಂಬಿಕೆಗಳು ಕಾರಣವಾಗಿವೆ ಎಂದರು.
ಬಿಜೆಪಿ ಯುವ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ ನೆಮ್ಮದಿ ಹಾಗೂ ಭರವಸೆಯ ಬದುಕಿಗೆ ದೈವ ಶ್ರದ್ಧೆಯು ಅವಶ್ಯ ಎಂದರು. ಕಾಂಗ್ರೆಸ್ ಯುವ ಮುಖಂಡ ಎನ್ ಹೆಚ್ ಶ್ರೀನಿವಾಸ ನಂದಿಗಾವಿ ಮಾತನಾಡಿ ಪೂಜೆ ಪುನಸ್ಕಾರಗಳಿಂದ ಆತ್ಮಸ್ಥೈರ್ಯವು ವೃದ್ಧಿಯಾಗುತ್ತದೆ ಎಂದರು.
ಟ್ರಸ್ಟಿನ ಯೋಜನಾಧಿಕಾರಿ ನಂದಿನಿ ಶೇಟ್ ಪ್ರಾಸ್ತಾವಿಕ ನುಡಿಗಳನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಜ್ಞಾನವಿಕಾಸ, ಮಧ್ಯವರ್ಜನ, ಕೆರೆಗಳ ಪುನರ್ ನಿರ್ಮಾಣ, ನಿರ್ಗತಿಕರಿಗೆ ಮಾಸಾಶನ, ಬಡವರಿಗೆ ಗೃಹ ನಿರ್ಮಾಣ ಮುಂತಾಗಿ 80ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
Shree Kshetra Dharmasthala Gramabhivriddhi Trust ಬೆಳ್ಳೂಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರವಿಶಂಕರ್, ಶಾಲಾ ಸಲಹಾ ಸಮಿತಿ ಅಧ್ಯಕ್ಷ ಹನುಮಂತ ಗೌಡ್ರು, ಭಾನುವಳ್ಳಿ ಗ್ರಾಮದ ಮುಖಂಡ ಶಂಕರೇಗೌಡರು, ರಾಮತೀರ್ಥ ಗ್ರಾಮದ ಮುಖಂಡ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಲೋಕೇಶ್, ಸುರೇಶ್ ಆಚಾರ್, ಸುನೀತಮ್ಮ, ಭಾರತೀ, ಗೀತಮ್ಮ, ಶಂಕರಪ್ಪ, ರುದ್ರೇಶ್ ಮುಂತಾದವರು ಗ್ರಾಮ ಪಂಚಾಯಿತಿ ಸದಸ್ಯರುಗಳು, ಪೂಜಾ ಸಮಿತಿಯ ಸದಸ್ಯರುಗಳು, ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದು ದೇವರಾಜ್ ನಿರೂಪಿಸಿದರೆ ಬಿಂದು ಮತ್ತು ತೇಜಸ್ವಿನಿ ಪ್ರಾರ್ಥನೆ ಹಾಡಿದರು.
ಉಮೇಶ್ ಸ್ವಾಗತ ಕೋರಿದರು. ಪಟೇಲ್ ಗುರುಬಸಪ್ಪ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನೆಗಳನ್ನು ವೀರೇಶ್ ಪೂಜಾರ್ ಸಮರ್ಪಿಸಿದರು. ಮಕ್ಕಳಿಂದ ನೃತ್ಯಪ್ರಸ್ತುತಿಯು ಆಕರ್ಷಕವಾಗಿ ನೆರವೇರಿತು.
