ಚೆನ್ನೈನ ಅಮೆರಿಕದ ಕಾನ್ಸಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಸೌಹಾರ್ದಯುತ ಭೇಟಿ ಮಾಡಿದರು.
ಅಮೆರಿಕಾ ಮತ್ತು ಕರ್ನಾಟಕದ ನಡುವಿನ ಬಲವಾದ ಹಾಗೂ ವಿಸ್ತರಿಸುತ್ತಿರುವ ಸಂಬಂಧ ಬಗ್ಗೆ ಹೋಡ್ಜಸ್ ಒತ್ತಿ ಹೇಳಿದರಲ್ಲದೆ, ಶಿಕ್ಷಣ, ತಂತ್ರಜ್ಞಾನ, ಆವಿಷ್ಕಾರ ಮತ್ತು ಜನರಿಂದ-ಜನರಿಗೆ ಹೊಂದಿರುವ ನಂಬಿಕೆಯ ಕ್ಷೇತ್ರಗಳು ಎರಡೂ ಕಡೆಗೂ ಪ್ರಮುಖವಾಗಿವೆ ಎಂದು ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು
ಹೇಳಿದರು.
ಭಾರತೀಯ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳು ಹಾಗೂ ಕೈಗಾರಿಕಾ ವಲಯಗಳು ವಾಣಿಜ್ಯ ಸಂಶೋಧನೆ ಮತ್ತು ಶೈಕ್ಷಣಿಕ ಫಲಿತಾಂಶಗಳನ್ನು ಉತ್ತಮಗೊಳಿಸಲು ಪರಸ್ಪರವಾಗಿ ಇನ್ನಷ್ಟು ಸಮೀಪದಿಂದ ಕೆಲಸ ಮಾಡುವ ಅವಕಾಶಗಳಿವೆ ಎಂದು ಅವರು ಚರ್ಚಿಸಿದರು.
ಕರ್ನಾಟಕವು ತನ್ನ ನುರಿತ ಮಾನವ ಸಂಪನ್ಮೂಲದ ಆಧಾರದ ಮೇಲೆ, ವಿಶೇಷವಾಗಿ ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ, ಜಾಗತಿಕ ಆಸಕ್ತಿಯನ್ನು ಸೆಳೆಯುತ್ತಿದೆ. ಅಮೆರಿಕದ ಇನ್ನಷ್ಟು ತೀವ್ರವಾದ ಸಹಭಾಗಿತ್ವ ರಾಜ್ಯದ ಪರಿಸರವನ್ನು ಮತ್ತಷ್ಟು ಬಲಪಡಿಸಿ ಹೊಸ ಸಹಕಾರದ ಅವಕಾಶಗಳನ್ನು ತೆರೆದಿಡಬಹುದು ಎಂದು ಡಾ.ಶಾಲಿನಿ ರಜನೀಶ್ ಹೇಳಿದರು.
