Saturday, December 6, 2025
Saturday, December 6, 2025

B.Y. Raghavendra ಆದಿವಾಸಿಗಳನ್ನ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಬಿರ್ಸಾ ಮುಂಡಾ ಅವರ ಹೋರಾಟ ಎಲ್ಲರಿಗೂ ಮಾದರಿ- ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ತನ್ನ ಆದಿವಾಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಚಿಕ್ಕವಯಸ್ಸಿನಲ್ಲೇ ಹೋರಾಟದ ಕಿಚ್ಚು ಹತ್ತಿಸಿದ ಬಿರ್ಸಾ ಮುಂಡಾರವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಶಿವಮೊಗ್ಗ ನಗರದ ಕಂಟ್ರೀ ಕ್ಲಬ್ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ 150 ನೇ ಜಯಂತಿ ಹಾಗೂ ಜನ ಜಾತೀಯ ಗೌರವ ದಿವಸ ಆಚರಣೆ 2025 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ ಹಾಗೂ ಬ್ರಿಟಿಷರ ವಿರುದ್ದ ಸಿಡಿದೆದ್ದ ಬಿರ್ಸಾ ಮುಂಡಾ ಸಮುದಾಯದ ಪಾಲಿಗೆ ದೇವರಾಗಿದ್ದರು.
ನೀರು, ಭೂಮಿ, ಅರಣ್ಯ ಬುಡಕಟ್ಟು ಜನರ ಹಕ್ಕು ಎನ್ನುವ ರೀತಿಯಲ್ಲಿ ಹೋರಾಡಿದ್ದರು. ಆಧ್ಯಾತ್ಮಿಕತೆಗೆ ಶಕ್ತಿ ತುಂಬಿದ್ದ ಇವರನ್ನು ದೇವರಂತೆ ಕಾಣುತ್ತಿದ್ದರು. ಇಂತಹ ಆದಿವಾಸಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಆದಿವಾಸಿ ಸಮುದಾಯವಿರುವ ಪ್ರದೇಶಗಳಲ್ಲಿ 1000 ಹೋಂ ಸ್ಟೇ ನಿರ್ಮಿಸಲು ನಿರ್ಧರಿಸಿದ್ದು ಪ್ರತಿ ಹೋಂ ಸ್ಟೇ ನಿರ್ಮಾಣಕ್ಕೆ ರೂ.5 ಲಕ್ಷ ಅನುದಾನ ನೀಡಲಾಗುವುದು. ಬುಡಕಟ್ಟು ಗುಂಪುಗಳ ಸಮಗ್ರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಆದಿವಾಸಿ ಕಲ್ಯಾಣ ಬಜೆಟ್‌ನ್ನು ಜಾರಿಗೆ ತಂದಿದೆ. ಮೂಲಭೂತ ಸೌಕರ್ಯಗಳನ್ನು ನೀಡಿ ಆದರ್ಶ ಗ್ರಾಮ ಮಾಡುವ ಯೋಜನೆ ಜಾರಿಗೊಳಿಸಿದೆ. ಆದಿವಾಸಿ ಭವನಗಳನ್ನು ನಿರ್ಮಿಸಲು ರೂ. 50 ನೀಡಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ, ಸಣ್ಣ ಅರಣ್ಯ ಮತ್ತು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಪೂರಕ ಆಹಾರ ಯೋಜನೆ, ಆದಿವಾಸಿ ಮಕ್ಕಳಿಗೆ ಶಿಕ್ಷಣ, ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದ ಅವರು ಬಿರ್ಸಾ ಮುಂಡಾರಂತಹ ಹುತಾತ್ಮರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಂಡು ಮುಂದೆ ಸಾಗೋಣ ಎಂದು ಕರೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿಯಾದ ಡಾ.ಶುಭಾ ಮರವಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಬಿರ್ಸಾ ಮುಂಡಾರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯಲು ನಾವು ಚರಿತ್ರೆ ಓದಬೇಕು. ಕೇವಲ 25 ವರ್ಷ ಬದುಕಿದ್ದ ಅವರು ಜಾರ್ಕಂಡ್ ರಾಜ್ಯದ ಮುಂಡಾ ಪ್ರದೇಶದ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರ್ಸಾ ಮುಂಡಾರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಮುದಾಯವನ್ನು ರಕ್ಷಿಸಲು ಹೋರಾಟದ ಕಿಚ್ಚನ್ನು ಹಚ್ಚುತ್ತಾರೆ.
B.Y. Raghavendra ತಮ್ಮ ಸಮುದಾಯದಲ್ಲಿದ್ದ ಮೌಢ್ಯ, ಕಂದಾಚಾರಗಳನ್ನು ವಿರೋಧಿಸಿ ತನ್ನದೇ ಆದಿವಾಸಿ ಸಂಸ್ಕೃತಿಯನ್ನು ಕಟ್ಟುತ್ತಾರೆ. ಅದ್ಭುತ ಸಾಧನೆ ಮಾಡುತ್ತಾರೆ. ಸಾಧಕನಿಗೆ ವಯಸ್ಸೇ ಬೇಡ ಎನ್ನುವಂತೆ ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಾಂತಿಯ ಕಿಡಿ ಹತ್ತಿಸಿ ಸೆಣೆಸಾಡುತ್ತಾರೆ.
ಅರಣ್ಯವನ್ನೇ ದೇವರೆಂದು ತಿಳಿದು, ಪ್ರಕೃತಿಗಾಗಿ ಬದುಕಿದ್ದ ಆದಿವಾಸಿಗಳು ಇವರು. ಆದಿವಾಸಿಗಳ ನೋವು, ಮೌಢ್ಯ ನೋಡಿದ ಅವರು, ಅವರ ಜನರನ್ನು ಇದರಿಂದ ಹೊರತರಲು ತಮ್ಮದೇ ದಾರಿ ಆರಿಸಿಕೊಂಡು ತಾನೇ ‘ಧರ್ತಿ ಅಭಾ’ ಅಂದರೆ ಈ ‘ಭೂಮಿಯ ತಂದೆ’ ತಾನೇ ಎಂದು ಆದಿವಾಸಿಗಳನ್ನು ವಿಶೇಷ ಸಂಸ್ಕೃತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ. ತಮಗೆ ತಿಳಿದಿದ್ದ ನಾಟಿ ಔಷಧ ನೀಡಿ ಉಪಚರಿಸಲು ಆರಂಭಿಸುತ್ತಾರೆ. ಪ್ಲೇಗ್ ಬಂದ ಸಮಯದಲ್ಲೂ ತಮ್ಮ ಸಮಾಜ ರಕ್ಷಣೆಗೆ ನಿಲ್ಲುತ್ತಾರೆ. ಮಹಿಳೆಯರ ರಕ್ಷಣೆ, ಸ್ತ್ರೀ ಹಕ್ಕುಗಳು, ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವುದನ್ನು ವಿರೋಧಿಸುತ್ತಾರೆ. ಜನ ಜಾಗೃತಿಗೊಳಿಸುವ ಎಲ್ಲ ಪ್ರಯತ್ನ ಮಾಡುತ್ತಾರೆ.
ತಮ್ಮ ಅರಣ್ಯದ ಸುದ್ದಿಗೆ ಬಂದ ಬ್ರಿಟಿಷರ ಧಮನಕಾರಿ ಧೋರಣೆಗಳ ವಿರುದ್ದ ಸೆಣೆಸಾಡಲು ಬಿರ್ಸಾ ರವರು ಬಿಲ್ಲುಬಾಣಗಳ ಸೈನ್ಯವನ್ನು ಕಟ್ಟಿ ಹೋರಾಡುತ್ತಾರೆ. ನಂತರ ಜೈಲಿಗೆ ಹೋಗಿ ಅಲ್ಲಿ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಿ ಸಾವನ್ನಪ್ಪುತ್ತಾರೆ. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಸಮುದಾಯಕ್ಕಾಗಿ ಮಾಡಿದ ಕೆಲಸಗಳು ಇಂದಿಗೂ ಹಸಿರಾಗಿವೆ. ಮನುಷ್ಯನ ಘನತೆ ಅವನು ಮಾಡುವ ಕೆಲಸದಲ್ಲಿರುತ್ತದೆ ಎಂದು ಸ್ಮರಿಸಿದರು.
ಜನ ಜಾತೀಯ ದಿನಾಚರಣೆ ಅಂಗವಾಗಿ ಆದಿವಾಸಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ದಿಶಾ ಸಮಿತಿಯ ನಿರ್ದೇಶಕ ಗಿರೀಶ್ ಭದ್ರಾಪುರ, ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಬಿ ಎಸ್ ನಾಗರಾಜ್, ವಾಲ್ಮೀಕಿ ಸಮಾಜದ ಮುಖಂಡರು, ಜಿ.ಪಂ.ಸಿಇಓ ಹೇಮಂತ್ ಎನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...