Shivamogga District Legal Services Authority ದಿನಾಂಕ 11.11.2025 ರಂದು ಶಿವಮೊಗ್ಗದ ನಾಸಾ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ವಕೀಲರ ಒಕ್ಕೂಟದ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಿಗೆ ಪೋಕ್ಸೋ ಕಾಯ್ದೆ ಹಾಗೂ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು. ಮಕ್ಕಳಿಗೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿಯನ್ನು ನೀಡಿದ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವಂತಹ ಶ್ರೀ ಸಂತೋಷ ಎಂ. ಎಸ್. ರವರು ತಮ್ಮ ಮಾತಿನ ಪೂರ್ವದಲ್ಲಿ ಮೊನ್ನೆ ನವದೆಹಲಿಯ ಕೆಂಪುಕೋಟೆಯ ಬಳಿ ನಡೆದ ದುಷ್ಕೃತ್ಯದಲ್ಲಿ ಮರಣ ಹೊಂದಿದ ವ್ಯಕ್ತಿಗಳಿಗೆ ಸಂತಾಪವನ್ನು ಎರಡು ನಿಮಿಷಗಳ ಮೌನಚರಣೆ ಮಾಡುವ ಮೂಲಕ ಸೂಚಿಸೋಣ ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಗಣ್ಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೌನಚರಣೆ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದರು. ತದನಂತರ ಮಕ್ಕಳಿಗೆ ಪೋಕ್ಸೋ ಕಾನೂನಿನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಶಿವಮೊಗ್ಗ ಜಿಲ್ಲೆಯಲ್ಲಿನ ವಸ್ತು ಸ್ಥಿತಿಯನ್ನು ವಿವರಿಸಿ ಹದಿಹರೆಯದ ಯುವಕ ಮತ್ತು ಯುವತಿಯರು ಯಾವುದೇ ಆಕರ್ಷಣೆಗೆ ಒಳಗಾಗದೆ ವಿದ್ಯಾಭ್ಯಾಸದ ಮೇಲೆ ಹಾಗೂ ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸಮಯವನ್ನು ಮತ್ತು ಶಕ್ತಿಯನ್ನು ಕೇಂದ್ರೀಕರಿಸಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆಯಲ್ಲಿನ ಮೂಲ ವಿಷಯವಾದ ಬ್ಯಾಟ್ ಟಚ್ ಅಥವಾ ಅನ್ ಸೇಫ್ ಟಚ್ ಬಗ್ಗೆ ಮಾಹಿತಿ ಇಲ್ಲದೆ ಕಾನೂನು ವಿರುದ್ಧವಾದ ಕೃತ್ಯವನ್ನು ಮಾಡುವ ಮೂಲಕ ಅಪರಾಧವನ್ನು ಮಾಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.
Shivamogga District Legal Services Authority ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರೋಜಾ ಪಿ. ಚಂಗೊಳ್ಳಿ ರವರು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮತ್ತು ಅದರ ದುರ್ಬಳಕೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಮತ್ತು ಅದಕ್ಕಾಗಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ಕಾನೂನಿನ ಬಗ್ಗೆ ವಿವರವಾಗಿ ಮಾತನಾಡಿ ಮಕ್ಕಳಿಗೆ ಸೂಕ್ತ ಮಾಹಿತಿಯನ್ನು ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲರು ವಹಿಸಿದ್ದರು.
