ಮಹಾತ್ಮ ಗಾಂಧೀಜಿ ಅವರ ಸರ್ವೋದಯ ತತ್ವಶಾಸ್ತ್ರ ಮತ್ತು ಅದರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಹಾರನಹಳ್ಳಿಯ ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಸಂತೋಷ್ ಹೇಳಿದರು.
ಮಹಾತ್ಮ ಗಾಂಧೀಜಿ ಅವರ ಮಾಸ ಪ್ರಯುಕ್ತ ರಾಜ್ಯ ಸರ್ವೋದಯ ಮಂಡಳಿಯಿಂದ ಹಾರನಹಳ್ಳಿ ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಚಿಂತನೆ ಕುರಿತು ಜಾಗೃತಿ, ಸಂವಾದ, ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ಅವರ ಸರಳತೆ, ಉನ್ನತ ನೈತಿಕ ಆದರ್ಶಗಳು, ಅವರ ವಿನಮ್ರತೆ, ಸಮಗ್ರತೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದು, ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷ ಡಾ. ಎಚ್.ಎಸ್.ಸುರೇಶ್ ಮಾತನಾಡಿ, ಸರ್ವೋದಯ ಎಂದರೆ ಎಲ್ಲರ ಪ್ರಗತಿ. ಸ್ವನಿರ್ಣಯ ಮತ್ತು ಸಮಾನತೆಯನ್ನು ಭಾರತದ ಎಲ್ಲ ಸಮಾಜದ ಎಲ್ಲ ಸ್ಥರವನ್ನು ತಲುಪುವಂತೆ ಮಾಡುವ ಧೇಯ ಹೊಂದಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸರ್ವೋದಯ ಮಂಡಳಿಯಿಂದ ಗಾಂಧಿ ತತ್ವದ ಸರ್ವೋದಯ ಪ್ರೇರಿತ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸರ್ವೋದಯ ಮಂಡಳಿಯ ತತ್ವ ಆದರ್ಶವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ವೋದಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಸ್ವಾತಂತ್ರ‍್ಯ ಚಳುವಳಿಗಳಿಗೆ ಸ್ಫೂರ್ತಿ ನೀಡಿದ ನಾಯಕ ಮಹಾತ್ಮ ಗಾಂಧಿ ಅವರ ಪರಂಪರೆಯನ್ನು ಗೌರವಿಸಲು, ಅವರ ತ್ಯಾಗವನ್ನು ಸ್ಮರಿಸಲು ಮತ್ತು ಅವರ ಸತ್ಯ, ಶಾಂತಿ ಮತ್ತು ಸರಳತೆ, ಅಹಿಂಸೆ, ಸ್ವರಾಜ್ಯ ಮತ್ತು ಸ್ವದೇಶಿ ಬೋಧನೆಗಳ ಮೂಲಕ ಬದುಕಲು ಶಾಲಾ ಮಕ್ಕಳನ್ನು ಪ್ರೇರೇಪಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಬಿ ಎಸ್ ಮಾತನಾಡಿ, ಗಾಂಧಿ ಆದರ್ಶಗಳು ಕಣ್ಮರೆ ಆಗುತ್ತಿರುವ ಇಂಥ ಸನ್ನಿವೇಶದಲ್ಲಿ ಮಕ್ಕಳಲ್ಲಿ ಗಾಂಧೀಜಿ ಅವರು ತತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದು ಹೇಳಿದರು.
ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜಪ್ಪ ಮಾತನಾಡಿ, ಮಹಾತ್ಮಾ ಗಾಂಧಿ ಅವರ ಮಾರ್ಗದರ್ಶಿ ತತ್ವಗಳು ಮತ್ತು ಭಾರತದ ಸ್ವಾತಂತ್ರ‍್ಯ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆ ಖಜಾಂಚಿ ಸುರೇಶ್ ಶೆಟ್ಟಿ, ನಿರ್ದೇಶಕರಾದ ಬಸವರಾಜಪ್ಪ, ಕೃಷ್ಣಮೂರ್ತಿ, ನಾಗೇಶ್ವರಪ್ಪ, ಜ್ಞಾನೇಶ್ವರ್, ವಿಜಯಲಕ್ಷ್ಮೀ, ಕಾಳಿಮುತ್ತು, ಸೀನ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಕ್ಕಳಿಗೆ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಮಹಾತ್ಮ ಗಾಂಧೀಜಿ ಜೀವನ ಆದರ್ಶಗಳು ಇಂದಿಗೂ ಪ್ರಸ್ತುತ: ಕೆ.ಬಿ.ಸಂತೋಷ್
Date:
