ಸಾವಯವ ಕೃಷಿ ಉತ್ಪನ್ನಗಳನ್ನು ಬಳಸುವುದರಿಂದ ಸದಾ ಆರೋಗ್ಯವಂತರಾಗಿ ಇರುತ್ತೇವೆ. ದೇಹದಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಆದರೆ ಈ ಕೃಷಿ ಉತ್ಪನ್ನಕ್ಕೆ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಅವರಿಗೆ ವಿಶೇಷ ಸಾಧಕ ಪ್ರಶಸ್ತಿ ಗೌರವ ಸ್ವೀಕರಿಸಿ ಮಾತನಾಡಿದರು.
ಎಲ್ಲಾ ರೈತರು ಈ ಪದ್ಧತಿ ಅಳವಡಿಸಿಕೊಂಡರೆ ನಮ್ಮ ದೇಶ ಆರೋಗ್ಯವಂತ ದೇಶವಾಗುತ್ತದೆ. ಸದೃಢ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಾವಯವ ಕೃಷಿಯೂ ಸಹ ಸಹಕಾರಿಯಾಗಿದೆ. ಇಂದು ಕೃಷಿ ಬದುಕಿಗೆ ಕೃಷಿ ಜೀವನಕ್ಕೆ ಬರಲು ಯುವಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದನೀಯ ವ್ಯಕ್ತಪಡಿಸಿದರು.
ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ವಿಶ್ವೇಶ್ವರಯ್ಯ ಸಜ್ಜನ್ ಅವರು ಅಲ್ಪ ಜಾಗದಲ್ಲಿ, ಅಲ್ಪ ವೆಚ್ಚದಲ್ಲಿ ಹಾಗೂ ಅಲ್ಪ ನೀರಿನಲ್ಲಿ ಹೆಚ್ಚು ಬೆಳೆ ಬೆಳೆದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಾವೇ ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಮಾಡಿ ವ್ಯವಸಾಯವನ್ನು ಲಾಭದಾಯಕ ಉದ್ಯಮ ಎಂದು ಸಾಬೀತು ಪಡಿಸಿದ್ದಾರೆ ಎಂದರು.
ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎನ್.ಬಿ.ರಾಜಶೇಖರ್, ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಿ ಕೆ ಜಗನ್ನಾಥ್, ಬಿ ಕೆ ಮೋಹನ್, ಪ್ರೊ. ಎ ಎಸ್ ಚಂದ್ರಶೇಖರ್, ಸಂಘದ ಪ್ರಧಾನ ಕಾರ್ಯದರ್ಶಿ ಎಮ್ ಆರ್ ಕಿರಣ್ ಕುಮಾರ್, ಭದ್ರಾವತಿ ತಾಲೂಕು ಅಧ್ಯಕ್ಷ ಟಿ ಎಸ್ ಆನಂದ ಕುಮಾರ್, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.
