(ಬೆಂಗಳೂರು ಪ್ರತಿನಿಧಿಯಿಂದ) ರಾಜ್ಯದಲ್ಲಿ ಘಟಕ ಸ್ಥಾಪನೆಗೆ ಜವಳಿ ಉದ್ಯಮಿಗಳ ಆಕರ್ಷಣೆಗೆ ಅಗತ್ಯ ನೆರವು ಕೋರಿ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ನೀತಿಯ ವರದಿ ಸಿದ್ದಪಡಿಸಿ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯಕ್ಕೆ ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಣೆ ಮಾಡಲು ಇರುವ ಸಾಧ್ಯತೆಗಳ ಕುರಿತು ವರದಿ ಸಿದ್ಧಪಡಿಸಿ, ಮಧ್ಯಪ್ರದೇಶ, ತಮಿಳು ನಾಡು ರಾಜ್ಯಗಳು ಉದ್ಯಮಿಗಳಿಗೆ ಯಾವ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿ ಈ ವರದಿಯಲ್ಲಿರಲಿ ಎಂದು ವಿಧಾನಸೌಧದಲ್ಲಿ ನಡೆದ ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Shivananda Patil ಬಾಂಗ್ಲಾ ದೇಶದಲ್ಲಿನ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದು, ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ, ತಮಿಳು ನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ ಎಂಬ ವರದಿ ಇದೆ. ಆ ರಾಜ್ಯದಲ್ಲಿ ಜವಳಿ ಉದ್ಯಮಿಗಳಿಗೆ ಅಲ್ಲಿನ ಸರ್ಕಾರ ಏನೇನು ಸವಲತ್ತುಗಳನ್ನು ನೀಡುತ್ತಿದೆ. ಯಾವ ಕಾರಣಕ್ಕೆ ಉದ್ಯಮಿಗಳು ತಮಿಳುನಾಡಿನಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎಂದು ಅಧ್ಯಯನ ಮಾಡಿ ವರದಿ ರೂಪಿಸಿ ಎಂದು ಸೂಚನೆ ನೀಡಿದರು.
ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಅಗತ್ಯ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡೋಣ, ನೆರೆ ರಾಜ್ಯಗಳ ಸರ್ಕಾರಗಳು ನೀಡುತ್ತಿರುವ ಸವಲತ್ತುಗಳನ್ನು ಕರ್ನಾಟಕ ಸರ್ಕಾರವೂ ನೀಡಿದರೆ ರಾಜ್ಯದಲ್ಲಿ ಜವಳಿ ಉದ್ಯಮ ಬೆಳೆಸಿ ಉದ್ಯೋಗ ಸೃಷ್ಟಿಗೆ ನೆರವಾಗಲಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ಸಬ್ಸಿಡಿ ಸೇರಿದಂತೆ ಜವಳಿ ಉದ್ಯಮಿಗಳಿಂದ ಬರುವ ಪ್ರಸ್ತಾವನೆಗಳನ್ನು ಅನುಮೋದನೆ ಮಾಡಲು ವಿಳಂಬ ನೀತಿ ಅನುಸರಿಸಬೇಡಿ, ಇಲಾಖೆಯ ನೆರವು ಸಹಕಾರ ನೀಡುವುದು ವಿಳಂಬವಾದರೆ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಹಜವಾಗಿ ಹಿಂದೇಟು ಹಾಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು.
ಕೆಲವು ಕಂಪನಿಗಳು ಸಬ್ಸಿಡಿ ಕೋರಿ ಪ್ರಸ್ತಾವನೆ ಸಲ್ಲಿಸಲು ವಿಳಂಬವಾಗಿರುವುದಕ್ಕೆ ಕಾರಣ ಕೇಳಿದ ಸಚಿವರು, ಸಮಸ್ಯೆಗಳಿದ್ದರೆ ಅಧಿಕಾರಿಗಳು ಉದ್ಯಮಿಗಳಿಗೆ ಸೂಕ್ತ ಮಾಹಿತಿ ನೀಡಿ ನೆರವಾಗಬೇಕು ಎಂದು ಕಿವಿಮಾತು ಹೇಳಿದರು.
ಮಹಾರಾಷ್ಟ್ರ ಸರ್ಕಾರ ವಿದ್ಯುತ್ ಬಿಲ್‌ನಲ್ಲೇ ಸಬ್ಸಿಡಿ ಕಡಿತ ಮಾಡುತ್ತಿದ್ದು, ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಮಾದರಿಯಲ್ಲೇ ವಿದ್ಯುತ್ ನೀತಿಯನ್ನು ಅನುಸರಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಷ್ಟು ಉದ್ಯಮಿಗಳು ಬಂಡವಾಳ ಹೂಡಲು ಆಸಕ್ತಿ ತೋರಿದ್ದರು. ಅವರಲ್ಲಿ ಎಷ್ಟು ಉದ್ಯಮಿಗಳು ಬಂಡವಾಳ ಹೂಡಿದರು. ಯಾವ ಯಾವ ಉದ್ಯಮಿಗಳು ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದರು ಎಂಬ ಬಗ್ಗೆ ಒಂದೆರಡು ದಿನಗಳಲ್ಲಿ ಮಾಹಿತಿ ಕೊಡಿ. ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಲು ಏನು ಕಾರಣ ಎಂಬ ಮಾಹಿತಿಯೂ ಬೇಕು ಎಂದು ಹೇಳಿದರು.
ನೂರಾರು ವರ್ಷಗಳಿಂದ ಮನೆಯಲ್ಲೇ ಕೈಮಗ್ಗ ಹಾಕಿಕೊಂಡಿರುವವರಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ ಕೊಡಿಸುವ ಪ್ರಯತ್ನ ಆಗಬೇಕಿದೆ. ಬೆಂಗಳೂರಿನ ಕಬ್ಬನ್ ಪೇಟೆ, ಕಾಟನ್ ಪೇಟೆ ಮತ್ತಿತರ ಕಡೆ ಇರುವ ನೇಕಾರರಿಗೆ ಸಮಸ್ಯೆಯಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಪೂರ್ಣ ಪ್ರಮಾಣದಲ್ಲಿ ಇರುವ ನೇಕಾರರ ಕಾಲನಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿನಾಯಿತಿ ನೀಡಬೇಕು. ಇತರ ಕಡೆ ಸಮಯ ನಿಗದಿಪಡಿಸಬೇಕು ಎಂಬ ಸಲಹೆ ಸೂಕ್ತವಾಗಿದೆ. ಇದನ್ನೇ ಪಾಲನೆ ಮಾಡುವುದು ಸರಿಯಾದ ಕ್ರಮವಾಗಿದ್ದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವರಿಕೆ ಮಾಡಿ ಎಂದು ಸೂಚನೆ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂದೂರಿ, ಜವಳಿ ಇಲಾಖೆ ಆಯುಕ್ತೆ ಕೆ. ಜ್ಯೋತಿ, ಅಪರ ನಿರ್ದೇಶಕ ಯೋಗೀಶ್, ಕೆಎಸ್‌ಟಿಐಡಿಸಿ ಎಂಡಿ ಯೋಗೀಶ್, ಕಾವೇರಿ ಹ್ಯಾಂಡ್‌ಲೂಮ್ಸ್ ಎಂಡಿ ಸೌಮ್ಯ, ರಂಗಸ್ವಾಮಿ ಹಾಗೂ ಕೆಎಐಡಿ, ಕೆಎಸ್‌ಎಫ್‌ಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪಿಎಂ ಮಿತ್ರ ಪಾರ್ಕ್ ಪ್ರಗತಿ ಪರಿಶೀಲನೆ
ಕಲಬುರಗಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂದೂರಿ ಅವರಿಗೆ ಸೂಚನೆ ನೀಡಿದರು.
ಹಲವು ರಾಜ್ಯಗಳಲ್ಲಿ ಈಗಾಗಲೇ ಪಿಎಂ ಮಿತ್ರ ಪಾರ್ಕ್ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ಒಂದು ಸಾವಿರ ಎಕರೆ ಭೂಮಿಯನ್ನು ಒದಗಿಸಿದ್ದು, ಮೂಲ ಸೌಕರ್ಯ ಕಲ್ಪಿಸಲು ಅನುದಾನವನ್ನೂ ಬಿಡುಗಡೆ ಮಾಡಿದೆ. ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಬೇಗ ಕಾಮಗಾರಿಗಳನ್ನು ಮುಗಿಸಿ ಎಂದು ಸೂಚಿಸಿದರು.
ಇದುವರೆಗಿನ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಆಯುಕ್ತೆ ಜ್ಯೋತಿ ಅವರು, ಕಂದಾಯ ಇಲಾಖೆಯಿಂದ ಇಸಿ ಲಭ್ಯವಾಗಿದ್ದು, 1.3 ಕಿಮೀ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ನಿರ್ಮಾಣ ಮಾಡಲು ಭೀಮಾ ನದಿಗೆ ಬ್ಯಾರೇಜ್ ನಿರ್ಮಿಸಬೇಕಿದೆ ಎಂದು ವಿವರಿಸಿದರು.
ಜವಳಿ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆ ಜರುಗಿತು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿನಿ ಸಿಂದೂರಿ, ಜವಳಿ ಇಲಾಖೆ ಆಯುಕ್ತೆ ಕೆ. ಜ್ಯೋತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
