Sri Shivaganga Yoga Center ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಯೋಗ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಭಾರತದಲ್ಲಿ ಯೋಗ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಹಾಲಿಸ್ಟಿಕ್, ಆರೋಗ್ಯ ಸಂಸ್ಥೆ ಅಧ್ಯಕ್ಷ, ಯುಎಸ್‌ಎ ಫ್ಲೋರಿಡಾದ ಯೋಗ ಯುನಿವರ್ಸಿಟಿ ಆಫ್ ದ ಅಮೆರಿಕಾಸ್ ಉಪಕುಲಪತಿ ಡಾ. ಯೋಗಿ ದೇವರಾಜ್ ಗುರೂಜಿ ಹೇಳಿದರು.
ಕಲ್ಲಹಳ್ಳಿ ವಿನೋಬನಗರದ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಯೋಗ ಪ್ರಶಿಕ್ಷಣಾರ್ಥಿಗಳ ತರಬೇತಿ ಮತ್ತು ಪುನಶ್ಚೇತನ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಡಿಸೆಂಬರ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ಶೃಂಗ ಸಭೆ 2025ರಲ್ಲಿ ಶಿವಮೊಗ್ಗ ಜಿಲ್ಲೆಯ ಯೋಗಾಸಕ್ತರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಯೋಗ ಸಂಸ್ಥೆಗಳ ನಡುವೆ ಸಾಮರಸ್ಯ ಹೊಂದಾಣಿಕೆಯಿಂದ ಯೋಗವನ್ನು ಮನ ಮನೆಗಳಿಗೆ ತಲುಪಿಸಿ ಆರೋಗ್ಯವಂತ ಸಮಾಜ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ ಯೋಗ ಜಿಲ್ಲೆಯಾಗಿ ಮಾರ್ಪಡಿಸಿ ಶಾಂತಿ ಸಹಬಾಳ್ವೆ ನಡೆಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಎಲ್ಲ ಯೋಗ ಸಂಸ್ಥೆಯವರು ಈ ದೆಸೆಯಲ್ಲಿ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರು ಯೋಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ನಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ ಎಂದರು.
Sri Shivaganga Yoga Center ಡಾ. ದಕ್ಷಿಣಮೂರ್ತಿ ಅವರು ಆಕ್ಯೂಪ್ರೆಷರ್ ಮತ್ತು ಹೋಲಿಸ್ಟಿಕ್ ಹೆಲ್ತ್ ಮೂಲಕ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದರು. ಡಾ. ವಿ.ಬಿ.ನಾಗೇಶ್ ಅವರು ವಿಶ್ವ ಯೋಗ ಶೃಂಗಸಭೆ 2025ರ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಯೋಗ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಡಾ. ಲಕ್ಷ್ಮೀ ನಾಗರಾಜ್, ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಕೈಗಾರಿಕೋದ್ಯಮಿ ಹಾಲಪ್ಪ, ಜಿ.ವಿಜಯಕುಮಾರ್, ವಿಜಯ ಬಾಯರ್, ಜಗದೀಶ್, ಜಿ ಎಸ್ ಓಂಕಾರ ಇದ್ದರು.
