ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಬ್ಯಾಂಕುಗಳಲ್ಲಿ, ವಿಮಾ ಕಂಪನಿಗಳಲ್ಲಿ ಹಾಗೂ ಮ್ಯೂಚ್ಯುಯಲ್ಫಂಡ್ಗಳಲ್ಲಿ ತೊಡಗಿಸಿದ ಹಣದ ಮೂಲ ವ್ಯಕ್ತಿಗಳಿದ್ದಲ್ಲಿ ಅಥವಾ ಅವರ ವಾರಸುದಾರರಿದ್ದಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಹಣ ಪಡೆದುಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ದ ವಾರಸುದಾರರಿಗೆ ಹಸ್ತಾಂತರಿಸುವ ಸಂಬಂಧ ಏರ್ಪಡಿಸಲಾಗಿದ್ದ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈ ವಿಶೇಷ ಆಂದೋಲನವು ಅಕ್ಟೋಬರ್ಮಾಹೆಯಿಂದ ಆರಂಭಗೊಂಡು ಡಿಸೆಂಬರ್ಮಾಸಾಂತ್ಯದವರೆಗೆ ನಡೆಯಲಿದೆ. ಜಿಲ್ಲೆಯ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಒಟ್ಟು 3.66ಲಕ್ಷ ಖಾತೆಗಳಿದ್ದು ಅವುಗಳಲ್ಲಿನ ಆಯ್ದ 79ಕೋಟಿ+, ವಿಮಾ ಕಂಪನಿಗಳಲ್ಲಿ 1043ಖಾತೆಗಳ ಪೈಕಿ 1.82ಕೋಟಿ ಮೊತ್ತ ವಾರಸುದಾರರಿಲ್ಲದೆ ಉಳಿದುಕೊಂಡಿದದೆ. ಜಿಲ್ಲೆಯ ಆಯ್ದ 08ರಾಷ್ಟ್ರೀಯ ಬ್ಯಾಂಕುಗಳಲ್ಲಿ ತಲಾ 1ಕೋಟಿಗೂ ಹೆಚ್ಚಿನ ಮೊತ್ತ ವಾರಸುದಾರರಿಲ್ಲದೆ ಉಳಿದುಕೊಂಡಿರುವುದನ್ನು ಗುರುತಿಸಲಾಗಿದೆ. ಶೇ.20ರಷ್ಟು ವಾರಸುದಾರರಿಗೆ ಸದರಿ ಮೊತ್ತವನ್ನು ತಲುಪಿಸಲು ಗುರಿ ನೀಡಲಾಗಿದೆ ಎಂದ ಅವರು, 34ಮ್ಯೂಚ್ಯುಯಲ್ಫಂಡ್ಗಳಲ್ಲಿ ತೊಡಗಿಸಲಾಗಿದ್ದ ಹಣವನ್ನು ಸಂಬಂಧಿಸಿದ ವಾರಸುದಾರರಿಗೆ ತಲುಪಿಸಲಾಗಿದೆ ಎಂದವರು ನುಡಿದರು.
ಎಲ್ಲಾ ಬ್ಯಾಂಕಿಂಗ್, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿಸೆಂಬರ್ಮಾಸಾಂತ್ಯವರೆಗೆ ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ನಡೆಯಲಿರುವ ಈ ಶಿಬಿರದಲ್ಲಿ ಖಾತೆದಾರರು ಅಥವಾ ಕಾನೂನುಬದ್ಧ ವಾರಸುದಾರರು ಬ್ಯಾಂಕಿನಲ್ಲಿ ಸತತ 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಗಳನ್ನು ಹಿಂಪಡೆದುಕೊಳ್ಳಬಹುದಾಗಿದೆ. ಬ್ಯಾಂಕಿಂಗ್ ವಲಯ, ವಿಮಾ ವಲಯ, ಹಣಕಾಸು ವಲಯ ಮತ್ತು ಇತರ ವಲಯಗಳ ಅಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಆಸಕ್ತರಿಗೆ ಸಲಹೆ ನೀಡಲಿದ್ದಾರೆ ಎಂದರು.
ವಾರಸುದಾರಿಕೆಯನ್ನು ಪ್ರತಿಪಾದಿಸಿ, ಮೊತ್ತವನ್ನು ಪಡೆದುಕೊಳ್ಳಲಿಚ್ಚಿಸುವ ವ್ಯಕ್ತಿಗಳು ಸೂಕ್ತ ಗುರುತಿನ ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಿ, ಸೂಕ್ತ ಸಲಹೆಯನ್ನು ಪಡೆಯಬಹುದು ಮತ್ತು ಹಕ್ಕು ಪಡೆಯದ ಮೊತ್ತವನ್ನು ಮರುಪಡೆಯಲು ಈ ಶಿಬಿರವನ್ನು ಬಳಿಸಿಕೊಳ್ಳಬಹುದಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ, ಸಂಯೋಜಕ ಬಿ.ಹೊನ್ನಪ್ಪ ಸೇರಿದಂತೆ ಲೀಡ್ ಬ್ಯಾಂಗ್ ಹಾಗು ಎಲ್ಲ ಬ್ಯಾಂಕುಗಳ ಪ್ರಬಂಧಕರು ಉಪಸ್ಥಿತರಿದ್ದರು.
ಹಣಕಾಸು ಸಂಸ್ಥೆಗಳಲ್ಲಿ ತೊಡಗಿಸಿರುವ ಹಣವನ್ನ ಸೂಕ್ತವಾಗಿ ಪಡೆಯಲು ವ್ಯಕ್ತಿಗಳಿಗೆ/ ವಾರಸುದಾರರಿಗೆ ತಲುಪಿಸಲು ವಿಶೇಷ ಆಂದೋಲನ- ಅಭಿಷೇಕ್
Date:
