Islamic Family Counseling Committee ಇಸ್ಲಾಮಿಕ್ ತತ್ವಗಳ ಅಡಿಯಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವಿದ್ದು, ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಶಿವಮೊಗ್ಗದ ಮುಪ್ತಿ ಮುಜೀಬುಲ್ಲಾ ಸಾಬ್ ಹೇಳಿದರು.
ಸೊರಬ ಪಟ್ಟಣದ ಮಾರ್ಕೆಟ್ ರಸ್ತೆಯ ಉಮಾ ಶಂಕರ ರೆಸಿಡೆನ್ಸಿಯಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಇಸ್ಲಾಮಿಕ್ ಫ್ಯಾಮಿಲಿ ಕೌನ್ಸಲಿಂಗ್ ಸಮಿತಿಯ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಯುವ ಸಮುದಾಯದಲ್ಲಿ ಬೆಳೆಯುತ್ತಿರುವ ಕೆಡುಕು ಮತ್ತು ಅದರ ನಿರ್ಮೂಲನೆ ಹೇಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಧುನಿಕತೆಯ ಬದುಕಿನಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಇಸ್ಲಾಮಿಕ್ ತತ್ವದಡಿಯಲ್ಲಿ ಅವಕಾಶವಿದೆ. ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಸ್ಲಾಮಿಕ್ ಫ್ಯಾಮಿಲಿ ಕೌನ್ಸಲಿಂಗ್ ಸಮಿತಿ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ. ಕುಟುಂಬದ ಸದಸ್ಯರ ನಡುವಿನ ಸಂಘರ್ಷ, ಭಿನ್ನಾಭಿಪ್ರಾಯಗಳನ್ನು ಗುರು-ಹಿರಿಯರ ಸಮ್ಮುಖದಲ್ಲಿ ಪರಿಹರಿಸಿಕೊಂಡರೆ, ಭವಿಷ್ಯದ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಭೀರಲು ಸಾಧ್ಯವಾಗುವುದಿಲ್ಲ. ಮೊಬೈಲ್ ಪ್ರಸ್ತುತ ದಿನಮಾನಗಳಲ್ಲಿ ಅವಿಭಾಜ್ಯ ಅಂಗದಂತಾಗಿದ್ದು, ಇದನ್ನು ಜ್ಞಾನದ ವೃದ್ಧಿಗೆ ಬಳಸಿಕೊಳ್ಳಬೇಕೆ ವಿನಃ, ದುರುಪಯೋಗ ಪಡೆಸಿಕೊಳ್ಳುವುದು ಮತ್ತು ಮಾರುಹೋಗುವುದು ಸಲ್ಲದು ಎಂದರು.
ಕೌಟುಂಬಿಕ ವಿಷಯದಲ್ಲಿ ಪತಿ ಪತ್ನಿಯರ ನಡುವೆ ಹೊಂದಾಣಿಕೆಯ ಕೊರತೆ ಎದುರಾದಾಗ ಅನೇಕ ಸಮಸ್ಯೆಗಳು ವಿಕೋಪಕ್ಕೆ ತಿರುಗುತ್ತವೆ. ಇವೆಲ್ಲವನ್ನೂ ರಾಜಿ-ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ, ಕೆಲವರು ಸಣ್ಣ-ಪುಟ್ಟ ವಿಷಯಗಳನ್ನು ಸಹ ಗಂಭೀರವಾಗಿ ಪರಿಗಣಿಸಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಯುವ ಜನತೆ ಮಾದಕ ವ್ಯಸನಕ್ಕೆ ಒಳಗಾಗುವುದು, ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಮಾಹಿತಿಗಳಿಗೆ ಕಿವಿಗೊಡುವುದು ಸಹ ಸಮಾಜಕ್ಕೆ ಮಾರಕವಾಗುತ್ತದೆ. ಮಾನಸಿಕ ಕಿನ್ನತೆಗೆ ಒಳಗಾದವರು ಇಂತಹ ಕೌನ್ಸಲಿಂಗ್ ಸಮಿತಿಯನ್ನು ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದರು.
ನಿಕಾಃ ತಲಾಕ್ ಖುಲಾ ಮತ್ತು ಫ್ಯಾಮಿಲಿ ಕೌನ್ಸಲಿಂಗ್‌ನ ಜಿಲ್ಲಾ ಪ್ರಮುಖರಾದ ಮೌಲಾನ ಹಾಮಿದ್ ಉಮ್ರಿ ಶಿವಮೊಗ್ಗ ಮಾತನಾಡಿ, ಮೊಬೈಲ್ ವ್ಯಾಮೋಹದಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಭವಿಷ್ಯಕ್ಕೆ ಕುಂದು ಬರುತ್ತದೆ. ಈ ನಿಟ್ಟಿನಲ್ಲಿ ಇಂತಹ ಕೌನ್ಸಲಿಂಗ್ ಸಮಿತಿಗಳ ಅವಶ್ಯಕತೆ ಇದೆ. ಪೋಷಕರು ಸಹ ತಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಚಲನವಲನಗಳ ಬಗ್ಗೆ ನಿಗಾ ವಹಿಸುವುದು ಅತಿ ಮುಖ್ಯವಾಗಿದೆ. ತಾಲೂಕು ಸಮಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಜಿಲ್ಲಾ ಹಾಗೂ ರಾಜ್ಯ ಸಮಿತಿಗಳ ನೆರವನ್ನು ಪಡೆಯಬಹುದು. ಕುಟುಂಬಗಳಲ್ಲಿ ಪರಸ್ಪರ ಒಪ್ಪಿತ ಮದುವೆಗಳು ಯಶ ಕಾಣುತ್ತವೆ. ಕೌಟುಂಬಿಕ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಪ್ರಕರಣಗಳು ನ್ಯಾಯಾಲಯ ಮೆಟ್ಟಿಲೇರುವ ಮುನ್ನ ಪರಿಹಾರ ಕಂಡುಕೊAಡರೆ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದರು.
Islamic Family Counseling Committee ತಾಲೂಕು ಸಮಿತಿ ಅಧ್ಯಕ್ಷ ಮೌಲಾನಾ ರಿಯಾಜ್ ಆಹ್ಮದ್ ಉಮ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಸಮಿತಿ ಅಧ್ಯಕ್ಷ ಸೈಯದ್ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಟಿ. ವಝೀರ್ ಅಹ್ಮದ್, ಮೌಲಾನಾ ಮುಫ್ತಿ ತಫಜೀಲ್ ಆಲಂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಧರ್ಮಗುರುಗಳು, ಉಲ್ಮಾ ಹುಫ್ಫಾಝ್ ಸಮಿತಿಯವರು ಮತ್ತು ಇತರರಿದ್ದರು.
Islamic Family Counseling Committee ಆಧುನಿಕತೆಯ ಬದುಕಿನಲ್ಲಿ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಇಸ್ಲಾಮಿಕ್ ತತ್ವದಲ್ಲಿ ಪರಿಹಾರವಿದೆ-ಮುಫ್ತಿ ಮುಜೀಬುಲ್ಲಾ ಸಾಬ್
Date:
